ಕಾಶ್ಮೀರಿ ಯುವಕರು ದೇಶಕ್ಕಾಗಿ ಕಲ್ಲು ತೂರುತ್ತಿದ್ದಾರೆ!- ಫಾರುಕ್ ಅಬ್ದುಲ್ಲಾ ಹತಾಶ ಹೇಳಿಕೆ

ಡಿಜಿಟಲ್ ಕನ್ನಡ ಟೀಮ್:

ಎರಡು ದಿನಗಳ ಹಿಂದೆ ಜಮ್ಮು-ಕಾಶ್ಮೀರದಲ್ಲಿ ಏಷ್ಯದ ಅತಿ ಉದ್ದದ ಸುರಂಗ ಮಾರ್ಗವನ್ನು ಉದ್ಘಾಟಿಸಿ ಪ್ರಧಾನಿ ಮೋದಿ ಹೀಗೆ ಹೇಳಿದ್ದರು- ‘ಒಂದಿಷ್ಟು ಕಾಶ್ಮೀರಿ ಯುವಕರು ಕಲ್ಲು ತೂರಾಡಿಕೊಂಡಿದ್ದರೆ ಇತ್ತ ಜಮ್ಮು-ಕಾಶ್ಮೀರದ ಯುವಕರು ಕಲ್ಲುಗಳನ್ನು ಕಟ್ಟಿ ಸುರಂಗ ನಿರ್ಮಿಸುವುದರಲ್ಲಿ ಶ್ರಮ ಹರಿಸಿದ್ದಾರೆ. ಇದರಿಂದ ರಾಜ್ಯದ ಅಭಿವೃದ್ಧಿಗೆ, ಪ್ರವಾಸೋದ್ಯಮಕ್ಕೆ ಭಾರಿ ಬೆಂಬಲ ಸಿಗಲಿದೆ. ಪ್ರವಾಸೋದ್ಯಮ ಮತ್ತು ಭಯೋತ್ಪಾದನೆ ನಡುವೆ ಅಭಿವೃದ್ಧಿಪೂರಕ ಪ್ರವಾಸೋದ್ಯಮವನ್ನು ಕಾಶ್ಮೀರಿ ಯುವಕರು ಆಯ್ಕೆ ಮಾಡಿಕೊಳ್ಳಬೇಕು’.

ಹಿಂದೊಮ್ಮೆ ಮುಖ್ಯಮಂತ್ರಿಯಾಗಿ ಜಮ್ಮು-ಕಾಶ್ಮೀರದಲ್ಲಿ ಆಡಳಿತ ನಡೆಸಿದ್ದ ನ್ಯಾಷನಲ್ ಕಾನ್ಫರೆನ್ಸ್ ನ ಫಾರುಕ್ ಅಬ್ದುಲ್ಲಾರಿಗೆ ಈ ಹೇಳಿಕೆಯಿಂದ ಉರಿಯೆದ್ದು ಹೋಗಿದೆ. ‘ಪ್ರವಾಸೋದ್ಯಮ ಕಟ್ಟಿಕೊಂಡು ಕಾಶ್ಮೀರದ ಹುಡುಗರಿಗೆ ಏನೂ ಆಗಬೇಕಿಲ್ಲ. ಅವರು ದೇಶಕ್ಕಾಗಿ ಕಲ್ಲು ತೂರುತ್ತಿದ್ದಾರೆ. ಕಾಶ್ಮೀರ ವಿಷಯದಲ್ಲಿ ನಿರ್ಣಯವಾಗಬೇಕು. ಭಾರತ-ಪಾಕಿಸ್ತಾನಗಳು ಪರಸ್ಪರ ಮಾತುಕತೆಯಿಂದ ನಿರ್ಣಯಕ್ಕೆ ಬರಲು ಸಾಧ್ಯವಾಗದಿದ್ದರೆ ಅಮೆರಿಕವು ಮಧ್ಯಸ್ಥಿಕೆ ವಹಿಸಬೇಕು’ ಎಂದೆಲ್ಲ ಆಕ್ರೋಶದಿಂದ ಕೂಗಾಡಿದ್ದಾರೆ ಫಾರುಕ್ ಅಬ್ದುಲ್ಲ. ಆದರೆ ಇಲ್ಲಿರುವುದು ರಾಜ್ಯದಲ್ಲಿ ಕೈತಪ್ಪಿ ಹೋಗುತ್ತಿರುವ ತಮ್ಮ ನಿಯಂತ್ರಣದ ಕುರಿತಾದ ಹತಾಶೆ.

ಅದಲ್ಲದಿದ್ದರೆ ರಾಜ್ಯವನ್ನಾಳಿದ ಅದ್ಯಾವ ಮುಖ್ಯಮಂತ್ರಿ ತಾನೇ ಜನರ ಬದುಕನ್ನು ಸುಗಮಗೊಳಿಸುವ ಉದ್ಯಮ ಅಭಿವೃದ್ಧಿಗಳಿಗಿಂತ ಕಲ್ಲುತೂರಾಟವೇ ಮುಖ್ಯ ಎನ್ನುತ್ತಾರೆ ಹೇಳಿ? ಕಲ್ಲು ತೂರುವವರಿಗೆ ಪ್ರತ್ಯೇಕತಾವಾದಿಗಳಿಂದ ಹಾಗೂ ಪಾಕಿಸ್ತಾನದ ಕಡೆಯಿಂದ ಹಣ ಸಂದಾಯವಾಗುವುದು ರಾಷ್ಟ್ರೀಯ ಮಾಧ್ಯಮಗಳ ಹಲವು ಕುಟುಕು ಕಾರ್ಯಾಚರಣೆಗಳಲ್ಲಿ ಬಯಲಾಗಿದೆ. ಅಲ್ಲದೇ ಜಮ್ಮು-ಕಾಶ್ಮೀರದಲ್ಲಿ ಮಧ್ಯಸ್ಥಿಕೆ ವಹಿಸುವುದಕ್ಕೆ ಯಾರ ಅಗತ್ಯವೂ ಇಲ್ಲ, ಏಕೆಂದರೆ ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರವೂ ಸೇರಿದಂತೆ ಅಖಂಡ ಜಮ್ಮು-ಕಾಶ್ಮೀರ ಭಾರತಕ್ಕೆ ಸೇರಿದ್ದೆಂದು ಸಂಸತ್ತು ನಿರ್ಣಯ ಕೈಗೊಂಡಾಗಿದೆ.

ಅತ್ತ ಬಿಜೆಪಿ ಮತ್ತು ಪಿಡಿಪಿ ನಡುವೆ ಹಲವು ಮುಸುಕಿನ ಗುದ್ದಾಟಗಳಿವೆಯಾದರೂ, ಒಂದೊಮ್ಮೆ ಪ್ರತ್ಯೇಕತಾವಾದಿ ಪಕ್ಷ ಎಂದು ಗುರುತಿಸಿಕೊಂಡಿದ್ದ ಪಿಡಿಪಿ ಅಷ್ಟು ಕಟ್ಟರ್ ನಿಲುವನ್ನೇನೂ ತಾಳುತ್ತಿಲ್ಲ. ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸಮಯ ಸಿಕ್ಕಾಗಲೆಲ್ಲ ಮೋದಿ ಸಹಕಾರವನ್ನು ಪ್ರಶಂಸಿಸುತ್ತ, ಕಲ್ಲು ತೂರಾಟಗಾರರು ಮತ್ತು ಹಿಂಸಾಕಾರರನ್ನು ಟೀಕಿಸುತ್ತಿದ್ದಾರೆ.

ಹೀಗೆ ಪಿಡಿಪಿ-ಬಿಜೆಪಿಗಳು ಜಮ್ಮು-ಕಾಶ್ಮೀರ ರಾಜಕೀಯದಲ್ಲಿ ತಳ ಊರುತ್ತಿರುವಾಗ, ನ್ಯಾಷನಲ್ ಕಾನ್ಫರೆನ್ಸಿನ ಫಾರುಕ್ ಅಬ್ದುಲ್ಲ ತಮ್ಮ ಹತಾಶ ಹೇಳಿಕೆ ಹೊರಹಾಕಿದ್ದಾರೆ. ಆ ಮೂಲಕ ಪ್ರತ್ಯೇಕತಾವಾದಿಗಳು ಮತ್ತು ಕಲ್ಲು ತೂರಾಟಗಾರರ ಮೆಚ್ಚುಗೆಗೆ ಪಾತ್ರವಾಗುವ ಪ್ರಯತ್ನ ನಡೆಸಿದ್ದಾರೆ.

Leave a Reply