ಸೀತಾರಾಮ, ಮರ್ಯಾದಾ ಪುರುಷೋತ್ತಮ ರಾಮ… ನಮ್ಮ ತಲೆಮಾರಿಗೆ ಪ್ರಸ್ತುತವಾಗೋದು ಯಾವ ರಾಮ?

ಚೈತನ್ಯ ಹೆಗಡೆ

ಕೆಲವು ಕತೆಗಳೇಕೆ ಯುಗ ಯುಗಗಳಾಚೆಯೂ ಮಸುಕಾಗದೇ ಹರಿದುಬರುತ್ತಲೇ ಇವೆ?

ರಾಮಾಯಣ, ಮಹಾಭಾರತ ಇವೆಲ್ಲವನ್ನು ಹಲವರು ಹಲವು ಬಗೆಯಲ್ಲಿ ಹೇಳುತ್ತಾರಾದರೂ ಒಟ್ಟಿನಲ್ಲಿ ಕತೆಗಂತೂ ಮರಣವಿಲ್ಲ. ಇವುಗಳ ತಿರುಳು- ಆದರ್ಶ ದೊಡ್ಡದು ಎಂಬ ಉತ್ತರ ಹಲವರದ್ದು. ಇರಬಹುದು. ಆದರೆ ತತ್ತ್ವದ ಗಟ್ಟಿತನ ಮಾತ್ರ ಇದಾಗಿದ್ದರೆ ಕೇವಲ ಬೌದ್ಧಿಕ ಸಂವಾದಗಳಲ್ಲಿ ಉಳಿದುಕೊಂಡು ಬರಬೇಕಿತ್ತು. ಜನಮಾನಸವೇಕೆ ಈ ಪಾತ್ರಗಳನ್ನು ಆರಾಧಿಸುತ್ತದೆ? ರಾಮನಿಗೆ ಗುಡಿ ಕಟ್ಟಬೇಕು ಎಂಬುದು ತೀರ ಸಾಮಾನ್ಯನಿಗೂ ಹಾಗೂ ಅವನಿಗಿಂತ ಸಾಮಾಜಿಕ-ಆರ್ಥಿಕ ಮಾನದಂಡಗಳಲ್ಲಿ ಮೇಲಿರುವವನಿಗೂ ಏಕಪ್ರಕಾರವಾಗಿ ಕಾಡುವುದೇಕೆ? ರಾಮನವಮಿ ದಿನ ಅದೇಕೆ ಸಾಮಾನ್ಯರ ಗುಂಪು ಪಾನಕ-ಮಜ್ಜಿಗೆ-ಕೋಸಂಬರಿ ಹಂಚುತ್ತ ಖುಷಿ ಕಾಣುತ್ತದೆ?

ಏಕೆಂದರೆ ಇಲ್ಲಿ ಎಲ್ಲರ ಭಾವನೆಗಳನ್ನು, ಕಲ್ಪನೆಗಳನ್ನು ಮೀಟಬಲ್ಲ ಕಥನ ಶಕ್ತಿ ಇದೆ. ಉಳಕಿ ಫಿಲಾಸಫಿಗಳ ಮಾತೆಲ್ಲ ಆಮೇಲಿನದು.

ದಶರಥ ಪುತ್ರ ಶ್ರೀರಾಮನ ಪಟ್ಟಾಭಿಷೇಕ ಯಾವ ಅಡೆತಡೆಗಳಿಲ್ಲದೇ ಸುಸೂತ್ರವಾಗಿ ನೆರವೇರಿ ಆತ ಅಯೋಧ್ಯಾ ಸಾಮ್ರಾಜ್ಯವನ್ನು ನೂರ್ಕಾಲ ಆಳಿದ…. ರಾಮಾಯಣದ ಕಥಾಸಾರ ಒಂದೊಮ್ಮೆ ಹೀಗಿದ್ದಿದ್ದರೆ ಅದು ಕಾಲಗಳನ್ನು ದಾಟಿ ಮನುಜರ ಕಲ್ಪನೆಗಳನ್ನು ಹಿಡಿದಿಟ್ಟುಕೊಳ್ಳುತ್ತಿತ್ತೇ? ಅನುಮಾನ.

ರಾಮನ ಕತೆಯಲ್ಲೊಂದು ಹೋರಾಟವಿದೆ. ಕಳೆದುಕೊಳ್ಳುವ, ಸಂಘಟಿಸುವ, ಹೋರಾಡಿ ಗೆಲ್ಲುವ, ಗೆದ್ದಮೇಲೂ ಸೀತೆಯ ವಿಷಯದಲ್ಲಿ ಶಂಕೆಗೆ ಸಿಲುಕಿ ಒದ್ದಾಡುವ ವಿವರಗಳಿವೆ. ಹಾಗೆಂದೇ ಕತೆ ಎಲ್ಲರನ್ನೂ ಆವರಿಸಿಕೊಳ್ಳುತ್ತದೆ. ರಾಮನನ್ನು ಹೀರೋ ಮಾಡಿದ್ದು ವನವಾಸದ ಕಷ್ಟದ ದಿನಗಳೇ ಹೊರತು, ಸಿಂಹಾಸನದ ಸುಖದ ದಿನಗಳಲ್ಲ.

ಬಹುಶಃ ರಾಮಕತೆಯ ಈ ಆಯಾಮ ನಮಗೆ ಪ್ರಸ್ತುತವಾಗುತ್ತದೆ. ನಾವೀಗ ಬದುಕುತ್ತಿರುವುದು ನಿತ್ಯಕಂಪನ ಯುಗದಲ್ಲಿ. We are living in a highly disruptive world ಅಂತ ಆಂಗ್ಲದಲ್ಲಿ ಹೇಳಿದರೆ ಹೆಚ್ಚು ಅರ್ಥವಾದೀತೇನೋ. ಈ ಕಂಪನಗಳನ್ನು ರಾಮನಂತೆ ಎಷ್ಟರಮಟ್ಟಿಗೆ ನಿಭಾಯಿಸುತ್ತೇವೆ ಎಂಬುದರಲ್ಲಿಯೇ ಅವರವರ ಬದುಕಿನ ಖಾಸಗಿ ರಾಮಾಯಣಗಳಿವೆ ಎಂದೆನಿಸುತ್ತದೆ. ಎಲ್ಲರೂ ಮುಂದೋಡುತ್ತಿರುವಾಗ ತಾನು ವೃತ್ತಿ ಬದುಕಿನಲ್ಲೋ, ಸಾಂಸಾರಿಕ ಆಯಾಮದಲ್ಲೋ ತೊಳಲಾಟಕ್ಕೆ ಸಿಲುಕಿ ವನವಾಸದಂಥ ಸ್ಥಿತಿ ಅನುಭವಿಸುತ್ತಿದ್ದೇನೆ ಎಂದೆನಿಸಿದರೆ ಅದು ಕತೆಯ ಮುಕ್ತಾಯವಂತೂ ಅಲ್ಲ. ಕತೆ ಬಾಳಿಕೆ ಬರುವಂತೆ ರೂಪಿಸುವುದಕ್ಕೆ ಸಿಕ್ಕ ಅವಕಾಶ. ಬದುಕು ಹಿತಗೋಲ (comfort zone)ದಿಂದ ನಮ್ಮನ್ನು ಹೊರನೂಕಿದೆಯೆಂದರೆ ಅದರರ್ಥ ನಮ್ಮ ಎಂದಿನ ಬದುಕಿನ ಓಘದಲ್ಲಿ ನಮಗೆ ಸಿಗದೇ ಹೋಗಬಹುದಾದ ಹನುಮಂತರನ್ನೂ, ಶಬರಿಯರನ್ನೂ ದೊರಕಿಸಿಕೊಳ್ಳುವುದಕ್ಕೆ ಪ್ರೇರೇಪಿಸುತ್ತಿದೆ ಎಂದರ್ಥ. ವೈಭವವೆಂಬುದು ನೇಪಥ್ಯಕ್ಕೆ ಸರಿದು ಕಾಡಿನ ಹಾದಿಯಲ್ಲಿದ್ದಾಗಲೂ ಯಾರ ಹಾರೈಕೆ- ಬೆಂಬಲಗಳು ನಮ್ಮ ಜತೆ ಇರುತ್ತವೋ ಅವರಷ್ಟೇ ನಮ್ಮವರು. ಉಳಿದವರ ಬಗ್ಗೆ ಅಸಡ್ಡೆ ಹೊಂದಬೇಕಿಲ್ಲ; ನಮ್ಮವರಾಗಿ ಸಿಕ್ಕ ಸಂಬಂಧಗಳನ್ನು ಸಂಭ್ರಮಿಸಬೇಕು. ಅಯೋಧ್ಯೆಯ ಸಿಂಹಾಸನದಲ್ಲಿದ್ದಾಗ ಎಲ್ಲರೂ ಗೌರವಿಸುವವರೇ, ಎಲ್ಲರೂ ಆಪ್ತರೇ. ಅದು ವಿಷಯವೇ ಅಲ್ಲ. ಪ್ರೀತಿ, ಅಧಿಕಾರ, ಸಂಬಂಧಗಳು ಇವೆಲ್ಲವನ್ನೂ ನಿಚ್ಚಳವಾಗಿಸುವಂಥವು ಬದುಕನ್ನು ಅಲ್ಲಾಡಿಸುವ ಕಂಪನಗಳೇ.

ಅಂಥ ಕಂಪನಗಳನ್ನು ಪ್ರೀತಿಯಿಂದ ನಿಭಾಯಿಸುತ್ತ ನಮ್ಮ ನಮ್ಮ ರಾಮಾಯಣಗಳನ್ನು ಬರೆದುಕೊಳ್ಳುವ ಶಕ್ತಿ ನಮಗೆಲ್ಲ ಸಿಗಲಿ.

ರಾಮನವಮಿಯ ಶುಭಾಶಯಗಳು.

1 COMMENT

Leave a Reply to Jagadeesha Suji Cancel reply