ರಾಜಸ್ಥಾನದ ಗೋರಕ್ಷಕರಿಂದ ಹತ್ಯೆಯಾದ ಪೆಹ್ಲು ಖಾನ್ ಗೋ ಕಳ್ಳಸಾಗಾಣಿಕೆಗಾರನಲ್ಲ… ಆತ ಗೋಪಾಲಕ!

ಡಿಜಿಟಲ್ ಕನ್ನಡ ಟೀಮ್:

ಅಕ್ರಮವಾಗಿ ಗೋವುಗಳ ಕಳ್ಳಸಾಗಾಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ರಾಜಸ್ಥಾನದ ಅಲ್ವಾರ್ ಪ್ರದೇಶದಲ್ಲಿ ಗೋರಕ್ಷಕರಿಂದ ಹಲ್ಲೆಗೆ ಒಳಗಾಗಿ ಮೃತಪಟ್ಟ 55 ವರ್ಷದ ಪೆಹ್ಲು ಖಾನ್ ಓರ್ವ ಗೋಪಾಲಕನಾಗಿದ್ದು, ಆತ ಗೋವುಗಳನ್ನು ಕಳ್ಳಸಾಗಾಣೆ ಮಾಡುತ್ತಿರಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

ಹಾಲು ಉತ್ಪಾದನೆಗಾಗಿ ಜೈಪುರದಲ್ಲಿ ಹಸುಗಳನ್ನು ಖರೀದಿಸಿ ಮರಳುವಾಗ, ಅಡ್ಡಗಟ್ಟಿದ ಗೋರಕ್ಷಕರು ಪೆಹ್ಲು ಖಾನ್ ರನ್ನು ಗೋವು ಕಳ್ಳಸಾಗಾಣೆಗಾರ ಎಂದು ಆರೋಪಿಸಿ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಆಗಿದ್ದು ಏನು ಎಂಬುದರ ಬಗ್ಗೆ ಇಂಡಿಯನ್ ಎಕ್ಸ ಪ್ರೆಸ್ ನೀಡಿರುವ ವರದಿ ಹೀಗಿದೆ…

ಹರ್ಯಾಣದ ನುಹ್ ಜಿಲ್ಲೆಯ ಜೈಸಿಂಗ್ ಪುರ ಗ್ರಾಮದಲ್ಲಿ ಪೆಹ್ಲು ಖಾನ್ ಪಶುಸಂಗೋಪನೆ ಮಾಡುತ್ತಿದ್ದರು. ರಂಜಾನ್ ಹಬ್ಬದ ಸಂದರ್ಭದಲ್ಲಿ ಹೆಚ್ಚು ಹಾಲು ಉತ್ಪಾದಿಸುವುದು ಖಾನ್ ಅವರ ಗುರಿಯಾಗಿತ್ತು. ಹೀಗಾಗಿ ಕಳೆದ ಶುಕ್ರವಾರ ಎಮ್ಮೆಯನ್ನು ಖರೀದಿಸಲು ಖಾನ್ ತಮ್ಮ ಪುತ್ರರು ಹಾಗೂ ಕೆಲವು ಗ್ರಾಮಸ್ಥರೊಂದಿಗೆ 240 ಕಿ.ಮೀ ದೂರದ ಜೈಪುರಕ್ಕೆ ತೆರಳುತ್ತಾರೆ. ಖಾನ್ ಎಮ್ಮೆಯನ್ನು ಖರೀದಿಸಲು ತೆರಳಿದ್ದರೂ, ಜೈಪುರದದಲ್ಲಿ ಮಾರಾಟಗಾರನೊಬ್ಬ ಅವರ ಮುಂದೆಯೇ ಒಂದು ಹಸುವಿನಿಂದ 12 ಲೀಟರ್ ಹಾಲು ಕರೆದು ತೋರಿಸುತ್ತಾರೆ. ಅಲ್ಲದೆ ಅದನ್ನು ಕಡಿಮೆ ಮೊತ್ತಕ್ಕೆ ಮಾರಲು ಮುಂದಾಗುತ್ತಾರೆ. ಈ ಉತ್ತಮ ಅವಕಾಶ ಬಳಸಿಕೊಳ್ಳಲು ಮುಂದಾದ ಖಾನ್ ಎಮ್ಮೆ ಬದಲಿಗೆ ಆ ಹಸುವನ್ನು ಖರೀದಿಸಿದರು. ಖಾನ್ ಅವರ ಈ ನಿರ್ಧಾರ ಮುಂದೆ ಅವರ ಪ್ರಾಣವನ್ನೇ ಬಲಿ ಪಡೆಯುತ್ತದೆ.

ಖಾನ್ ಈ ಹಸುವನ್ನು ಕೇವಲ ₹ 45 ಸಾವಿರಕ್ಕೆ ಖರೀದಿಸಿ ಮರಳುತ್ತಿದ್ದಾಗ ಅಲ್ವಾರ್ ನ ಬೆಹ್ರೊರ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 8 ರಲ್ಲಿ ಖಾನ್ ಅವರನ್ನು ಅಡ್ಡಗಟ್ಟಿದ ಗೋ ರಕ್ಷಕರು ಕಳ್ಳಸಾಗಾಣೆ ಆರೋಪ ಹೊರಿಸಿ ದಾಳಿ ನಡೆಸಿದರು.

ಈ ದಾಳಿಯ ವೇಳೆ ಖಾನ್ ಅವರ ಜತೆಯಲ್ಲೇ ಇದ್ದ ಪುತ್ರ ಇರ್ಷದ್ ಈ ಘಟನೆ ಬಗ್ಗೆ ಹೇಳಿದ್ದು ಹೀಗೆ…

‘ಈ ನಿರ್ಧಾರ ನಮ್ಮ ತಂದೆ ಅವರ ಪ್ರಾಣವನ್ನೇ ಬಲಿ ಪಡೆದಿದೆ. ನಮ್ಮ ತಂದೆ ಅವರು ಹಸುಗಳನ್ನು ಖರೀದಿಸಿ ಮರಳುವಾಗ ನಾನು ಹಾಗೂ ನನ್ನ ಸಹೋದರ ಆರಿಫ್ ಅವರ ಜತೆಯಾಗಿದ್ದೆವು. ನಮ್ಮ ತಂದೆ ಅವರು ರಾಜಸ್ಥಾನದಲ್ಲಿ ನೊಂದಣಿಯಾಗಿರುವ ಟ್ರಕ್ ನಲ್ಲಿ 2 ಹಸು ಹಾಗೂ 2 ಕರುಗಳನ್ನು ಕರೆತರುತ್ತಿದ್ದರು. ಅವರ ಜತೆ ನಮ್ಮ ಗ್ರಾಮದ ಅಜ್ಮತ್ ಎಂಬುವವರಿದ್ದರು. ನಾನು ಮತ್ತು ನನ್ನ ಸಹೋದರ ಮತ್ತೊಂದು ಟ್ರಕ್ ನಲ್ಲಿ 3 ಹಸು ಹಾಗೂ 3 ಕರುಗಳನ್ನು ಕರೆತರುತ್ತಿದ್ದೆವು. ಈ ಹಂತದಲ್ಲಿ ನಮ್ಮನ್ನು ಅಡ್ಡಗಟ್ಟಿದ ಗೋರಕ್ಷಕರು ನಮ್ಮನ್ನು ಗಾಡಿಯಿಂದ ಆಚೆಗೆ ಎಳೆದು ದೊಣ್ಣೆ ಹಾಗೂ ಬೆಲ್ಟ್ ನಿಂದ ಹೊಡೆಯಲು ಆರಂಭಿಸಿದರು. ಈ ಘಟನೆ ಸಂಭವಿಸಿದ 20-30 ನಿಮಿಷಗಳ ನಂತರ ಪೊಲೀಸರು ಆಗಮಿಸಿದರು. ಅಷ್ಟು ಹೊತ್ತಿಗೆ ನಾನು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದೆ.’

ಇವರ ಬಳಿ ಹಸು ಖರೀದಿಸಿದ ಯಾವುದೇ ರಸೀದಿ ಇಲ್ಲವೆಂದು ಆರೋಪಿಸಿ ದಾಮೋದರ್ ಸಿಂಗ್ ಎಂಬುವವರು ನೀಡಿರುವ ದೂರಿನ ಆಧಾರದ ಮೇಲೆ ರಾಜಸ್ಥಾನ ಪೊಲೀಸರು ಇವರ ಮೇಲೆ ಅಕ್ರಮ ಗೋವು ಸಾಗಾಣೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಇರ್ಷದ್ ನಾವು ಹಸು ಖರೀದಿಸಿರುವುದಕ್ಕೆ ನಮ್ಮ ಬಳಿ ರಸೀದಿ ಇದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಜೈಪುರ ನಗರ ಪಾಲಿಕೆಯ ಸ್ಟಾಂಪ್ ಮುದ್ರಿತ ರಸೀದಿ (ಕ್ರಮಸಂಖ್ಯೆ 89942, ದಿನಾಂಕ ಏಪ್ರಿಲ್ 1, 2017) ಇದೆ ಎಂದು ರಸೀದಿ ತೋರಿದ್ದಾರೆ. ‘ನಾವು ಹಸುಗಳನ್ನು ಖರೀದಿಸಿರುವುದಕ್ಕೆ ರಸೀದಿ ಇದ್ದರು ಪೊಲೀಸರು ಯಾವ ಆಧಾರದ ಮೇಲೆ ನಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂಬುದು ತಿಳಿಯುತ್ತಿಲ್ಲ. ನಮ್ಮ ಮೇಲೆ ದಾಳಿ ಮಾಡಿದವರು ನಮ್ಮ ಪರ್ಸು, ಮೊಬೈಲ್ ಹಾಗೂ ತನ್ನ ಬಳಿ ಇದ್ದ ₹ 75 ಸಾವಿರ ನಗದು ಹಾಗೂ ಮತ್ತೊಬ್ಬ ವ್ಯಕ್ತಿ ಬಳಿ ಇದ್ದ ₹ 35 ಸಾವಿರ ಹಣವನ್ನು ದೋಚಿದ್ದಾರೆ’ ಎಂದು ಇರ್ಷದ್ ಆರೋಪಿಸಿದ್ದಾರೆ.

ಪೆಹ್ಲು ಖಾನ್ ಅವರ ಜೈಸಿಂಗ್ ಪುರ ಗ್ರಾಮದಲ್ಲಿರುವ ಬಹುತೇಕರು ರೈತರಾಗಿದ್ದು, ಆ ಗ್ರಾಮದಲ್ಲಿ 10 ಮಂದಿ ಪಶು ಸಂಗೋಪನೆ ಮಾಡುತ್ತಿದ್ದಾರೆ. ಆ ಪೈಕಿ ಪೆಹ್ಲು ಖಾನ್ ಸಹ ಒಬ್ಬರಾಗಿದ್ದಾರೆ.

Leave a Reply