ಬಾಬ್ರಿ ಮಸೀದಿ ಪ್ರಕರಣ: ಲಖನೌ ನ್ಯಾಯಾಲಯಕ್ಕೆ ವಿಚಾರಣೆ ಹಸ್ತಾಂತರಿಸಿ ಆಡ್ವಾಣಿ-ಜೋಶಿ ಬಿಗಿಗೊಳಿಸುವ ಸೂಚನೆ ಕೊಟ್ಟ ಸುಪ್ರೀಂ ಕೋರ್ಟ್

ಡಿಜಿಟಲ್ ಕನ್ನಡ ಟೀಮ್:

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ನಡೆದು 25 ವರ್ಷಗಳೇ ಕಳೆದರೂ ವಿಚಾರಣೆ ಮುಕ್ತಾಯವಾಗದೇ ವಿಳಂಬವಾಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ. ಲಖನೌ ಹಾಗೂ ರಾಯ್ ಬರೇಲಿ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಪ್ರತ್ಯೇಕ ವಿಚಾರಣೆಗಳನ್ನು ಒಟ್ಟಿಗೆ ನಡೆಸಲು ಹಾಗೂ ಈ ವಿಚಾರಣೆಯನ್ನು ಲಖನೌ ನ್ಯಾಯಾಲಯಕ್ಕೆ ಹಸ್ತಾಂತರಿಸುವ ಸೂಚನೆ ಕೊಟ್ಟಿದೆ ಸುಪ್ರೀಂ ಕೋರ್ಟ್.

ಗುರುವಾರ ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ‘ಸುಮಾರು 25 ವರ್ಷಗಳಿಂದ ಈ ಪ್ರಕರಣವನ್ನು ಅನಗತ್ಯವಾಗಿ ಮುಂದೂಡುತ್ತಾ ಬರುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಇದು ನ್ಯಾಯವನ್ನು ಮರೆಮಾಚಲು ಇದು ದಾರಿ ಮಾಡಿಕೊಡುತ್ತದೆ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೇ ವಿಚಾರಣೆಯನ್ನು ಮುಂದೂಡಿದೆ.

ಮಾಧ್ಯಮಗಳ ವರದಿ ಪ್ರಕಾರ ಎರಡು ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಒಟ್ಟಿಗೆ ತ್ವರಿತವಾಗಿ ನಡೆಸಿ, ಮುಂದಿನ 2 ವರ್ಷದ ಒಳಗಾಗಿ ವಿಚಾರಣೆ ಅಂತ್ಯಗೊಳಿಸಲು ಸುಪ್ರೀಂ ಸೂಚಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಮುನ್ನ ಸಿಬಿಐ ಪರ ವಕೀಲರು ಬಿಜೆಪಿ ನಾಯಕರಾದ ಎಲ್.ಕೆ ಆಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಸೇರಿದಂತೆ ಇತರೆ ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ವಿಚಾರಣೆ ನಡೆಸಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ವಿಚಾರವಾಗಿ ರಾಯ್ ಬರೇಲಿಯಲ್ಲಿ 57 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ಇನ್ನು ಇತರೆ 100 ಸಾಕ್ಷಿಗಳ ವಿಚಾರಣೆ ನಡೆಯಬೇಕಿದೆ ಎಂದು ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಆದರೆ ಇದಕ್ಕೆ ಆಡ್ವಾಣಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಎಲ್ಲ ಅಂಶಗಳನ್ನು ಆಲಿಸಿರುವ ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆ ವೇಳೆ ಪ್ರತ್ಯೇಕ ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸುವ ಬಗ್ಗೆ ನಿರ್ಧಾರ ಪ್ರಕಟಿಸಲಿದೆ. ಎರಡು ವಿಚಾರಣೆಯನ್ನು ಒಟ್ಟಿಗೆ ನಡೆಸಲು ಆದೇಶ ನೀಡಿದ್ದೇ ಆದರೆ, ಪ್ರಕರಣದ ಎಲ್ಲ ಆರೋಪಿಗಳು ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸಬೇಕಾಗುತ್ತದೆ.

Leave a Reply