ನಾವೇಕೆ ರೈತರ ಸಾಲ ಮನ್ನಾ ಮಾಡ್ಬೇಕು? ಸಿದ್ದರಾಮಯ್ಯನವರ ಈ ಮಾತುಗಳಲ್ಲಿ ಕಾಣ್ತಿದೆ ‘ಯೋಗಿ’ ಒತ್ತಡ

ಡಿಜಿಟಲ್ ಕನ್ನಡ ಟೀಮ್:

ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಒಂದು ತಿಂಗಳಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಲ್ಲಿನ ರೈತರ ಸಾಲ ಮನ್ನಾ ಮಾಡುವ ಮೂಲಕ ಮತದಾರರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ರೈತರ ಸಾಲ ಮನ್ನಾ ಕ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಸ್ವತಃ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಹ ಪ್ರಶಂಸೆ ವ್ಯಕ್ತಪಡಿಸಿದ್ದರು. ಈ ಎಲ್ಲ ಬೆಳವಣಿಗೆಗಳಿಂದ ಸಹಜವಾಗಿಯೇ ರಾಜ್ಯ ಸರ್ಕಾರದ ಮೇಲೂ ಸಾಲ ಮನ್ನಾ ಮಾಡುವ ಕುರಿತಾಗಿ ಒತ್ತಡ ಹೆಚ್ಚಾಗಿದೆ. ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಇದನ್ನೇ ಅಸ್ತ್ರವನ್ನಾಗಿಸಿ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿರುವುದರಿಂದ ಬೇಸತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾವೇಕೆ ರೈತರ ಸಾಲ ಮನ್ನಾ ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ.

ಸಾಲ ಮನ್ನಾ ವಿಚಾರವಾಗಿ ಗುರುವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯನವರು ಪ್ರತಿಕ್ರಿಯಿಸಿದ್ದು ಹೀಗೆ…

‘ರೈತರ ಸಾಲ ಮನ್ನಾ ನಾವೇಕೆ ಮಾಡಬೇಕು?… ರಾಷ್ಟ್ರೀಕೃತ ಬ್ಯಾಂಕುಗಳು ನೀಡಿರುವ ಸಾಲವನ್ನು ನಾವು ಮನ್ನಾ ಮಾಡಿದರೆ, ನಾವು ನೀಡಿರುವ ಸಾಲವನ್ನು ಯಾರು ಮನ್ನಾ ಮಾಡ್ತಾರೆ? ಆ ಸಾಲವನ್ನು ಯಾರು ಕೊಟ್ಟಿದ್ದಾರೋ ಅವರೇ ಮನ್ನಾ ಮಾಡಲಿ…’

ಒಟ್ಟಿನಲ್ಲಿ ಈ ಸಾಲ ಮನ್ನಾ ವಿಚಾರ ಮುಖ್ಯಮಂತ್ರಿಗಳಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ಇನ್ನು ಹೇಗೆಲ್ಲಾ ಕಾಡಲಿದೆ ಕಾದುನೋಡಬೇಕು.

Leave a Reply