ದಲೈ ಲಾಮಾ ತವಾಂಗ್ ಭೇಟಿಗೆ ಸಿಟ್ಟಾಗಿರುವ ಚೀನಾ ಮಾಧ್ಯಮದಿಂದ ಭಾರತದ ವಿರುದ್ಧ ಯುದ್ಧೋನ್ಮಾದ!

ಡಿಜಿಟಲ್ ಕನ್ನಡ ಟೀಮ್:

ದಲೈ ಲಾಮಾ ಅವರ ಅರುಣಾಚಲ ಪ್ರದೇಶ ಭೇಟಿ ಈ ಬಾರಿ ಚೀನಾದಿಂದ ಭಾರಿ ಪ್ರತಿಭಟನೆಯನ್ನೇ ಎದುರಿಸಿದೆ. ಈ ಹಿಂದೆಯೂ ದಲೈ ಲಾಮಾ ಅವರು ಬೌದ್ಧ ಶ್ರದ್ಧಾಕೇಂದ್ರ ತವಾಂಗ್ ಗೆ ಭೇಟಿ ನೀಡಿದಾಗಲೆಲ್ಲ ಚೀನಾ ಆಕ್ಷೇಪ ಸಲ್ಲಿಸಿತ್ತು. ಆದರೆ ಈ ಬಾರಿಯ ಪ್ರತಿಭಟನೆ ಘಾಟು ಜೋರಾಗಿದೆ.

ಅಧಿಕೃತ ಹಂತದಲ್ಲಿ ಭಾರತದ ಚೀನಾ ರಾಯಭಾರಿಯನ್ನು ಕರೆಸಿಕೊಂಡು ಅಸಮಾಧಾನ ದಾಖಲಿಸಲಾಗಿದೆ. ಇನ್ನೊಂದೆಡೆ ಸರ್ಕಾರಿ ಸ್ವಾಮ್ಯದ ‘ಗ್ಲೋಬಲ್ ಟೈಮ್ಸ್’ ಪತ್ರಿಕೆ ಭಾರತದ ವಿರುದ್ಧ ತೀರ ಯುದ್ಧೋನ್ಮಾದದಲ್ಲೇ ಹರಿಹಾಯ್ದಿದೆ. ಚೀನಾದ ಆಡಳಿತಾರೂಢ ಪಕ್ಷದ ಪ್ರಮುಖ ಹುದ್ದೆಗಳಲ್ಲಿರುವವರನ್ನು ಮಾತನಾಡಿಸಿ, ‘ಭಾರತದ ನಡೆ ಘನತೆಗೆ ತಕ್ಕದಾಗಿಲ್ಲ’ ಎಂದು ಹೇಳಿಸಿದೆ.

ಅಸಾಮಾಧಾನ, ಆಕ್ಷೇಪ, ಖಂಡನೆ ಇವೆಲ್ಲ ಮೊದಲಿನಿಂದಲೂ ನೋಡಿಕೊಂಡುಬಂದ ಸಂಗತಿಗಳಾಗಿದ್ದವು. ಆದರೆ ಈ ಬಾರಿಯ ಗ್ಲೋಬಲ್ ಟೈಮ್ಸ್ ಸಂಪಾದಕೀಯ ಬರಹದಲ್ಲಿ ಅಡಿಗಡಿಗೂ ಭಾರತದ ವಿರುದ್ಧ ಯುದ್ಧೋನ್ಮಾದವೇ ಪ್ರಕಟವಾಗಿದೆ.

‘ಭಾರತ ತನ್ನನ್ನು ಏನೆಂದುಕೊಂಡಿದೆ. ಚೀನಾ ಏನಾದರೂ ಭಾರತದ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಇಳಿದರೆ ಅದಕ್ಕೆ ತಾಳಿಕೊಳಅಳುವ ಶಕ್ತಿ ಇದೆಯೇ? ಅದರ ಸುತ್ತಲಿನ ರಾಷ್ಟ್ರಗಳೆಲ್ಲ ಚೀನಾ ಸ್ನೇಹಿತರಾಗಿವೆ. ಆರ್ಥಿಕವಾಗಿ ಸಹ ಚೀನಾಕ್ಕಿಂತ ಭಾರತ ಎಷ್ಟೋ ಹಿಂದಿದೆ. ಭಾರತದ ಜಿಡಿಪಿಗಿಂತ ಚೀನಾ ಜಿಡಿಪಿ ಬೆಳವಣಿಗೆ ಎಷ್ಟೋ ಪಟ್ಟು ಮುಂದಿದೆ’ ಎಂದೆಲ್ಲ ಬೆದರಿಕೆಯ ಧ್ವನಿಯಲ್ಲಿ ಮಾತನಾಡಿದೆ ಚೀನಾ.

ಅಷ್ಟೇ ಅಲ್ಲ, ನಾವೂ ಕಾಶ್ಮೀರದ ವಿಷಯದಲ್ಲಿ ಹಸ್ತಕ್ಷೇಪ ಮಾಡಿ ಭಾರತಕ್ಕೆ ಬುದ್ಧಿ ಕಲಿಸಬಹುದಾಗಿದೆ ಅಂತಲೂ ಬೆದರಿಸಿದೆ ಲೇಖನ.

ವಾಸ್ತವದಲ್ಲಿ ಜಮ್ಮು-ಕಾಶ್ಮೀರದ ವಿಷಯದಲ್ಲಿ ಚೀನಾವೇನೂ ಈಗ ಉದಾರಿಯಾಗಿಯೇನೂ ಇಲ್ಲ. ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರದಲ್ಲಿ ಭಾರತದ ಒಪ್ಪಿಗೆ ಇಲ್ಲದೇ ಪಾಕಿಸ್ತಾನದ ಸಹಯೋಗದೊಂದಿಗೆ ಅದು ಹೆದ್ದಾರಿ ನಿರ್ಮಿಸುತ್ತಿದೆ. ಅಕ್ಸಾಯ್ ಚೀನ್ ಪ್ರಾಂತ್ಯ ಅದು ಭಾರತದಿಂದ ವಶಪಡಿಸಿಕೊಂಡಿದ್ದು. ಅಲ್ಲದೇ ಪಾಕಿಸ್ತಾನವು ತಾನು ಆಕ್ರಮಿಸಿಕೊಂಡ ಜಮ್ಮು-ಕಾಶ್ಮೀರದ ಕೆಲ ಭಾಗವನ್ನು ಚೀನಾಕ್ಕೆ ವಹಿಸಿಕೊಟ್ಟಿದೆ.

ಅದಿರಲಿ. ಚೀನಾ ಈ ಬಾರಿ ಇಷ್ಟೋಂದು ವ್ಯಗ್ರಗೊಳ್ಳುವುದಕ್ಕೆ ಕಾರಣವೇನು? ಕಾರಣ, ಕೇಂದ್ರದ ಗೃಹಖಾತೆ ರಾಜ್ಯ ಸಚಿವ ಕಿರಿಣ್ ರಿಜಿಜು ನಿಚ್ಚಳವಾಗಿ ದಲೈ ಲಾಮಾ ಪರ ಹೇಳಿಕೆಗಳನ್ನು ಕೊಟ್ಟು, ಚೀನಾಕ್ಕೆ ಭಾರತದ ಆಂತರಿಕ ವ್ಯವಹಾರಗಳಲ್ಲಿ ತಲೆ ಹಾಕದಂತೆ ತಾಕೀತು ಮಾಡಿರುವುದು.

ಇದೇ ಹಿನ್ನೆಲೆಯಲ್ಲಿ, ಅರುಣಾಚಲ ಪ್ರದೇಶ ಭಾರತದ್ದು ಎಂಬುದನ್ನು ಚೀನಾ ಒಪ್ಪಿಕೊಳ್ಳುವುದಿಲ್ಲ ಎಂದು ಗ್ಲೋಬಲ್ ಟೈಮ್ಸ್ ಪುನರುಚ್ಛರಿಸಿದೆ. ಅದು ದಕ್ಷಿಣ ಟಿಬೇಟ್. ಆ ಸಂದರ್ಭದಲ್ಲಿ ಭಾರತವು ವಸಾಹತು ಆಡಳಿತದಲ್ಲಿದ್ದ ಪರಿಣಾಮವಾಗಿ ಅರುಣಾಚಲ ಪ್ರದೇಶ ಅವರಿಗೆ ಸೇರಿತ್ತು. ತಾವಂತೂ ಮ್ಯಾಕ್ ಮೋಹನ್ ಗಡಿರೇಖೆ ಒಪ್ಪಿಕೊಳ್ಳೆವು. ಹೀಗಿರುವಾಗ ಭಾರತವು ದಲೈ ಲಾಮಾ ಅವರನ್ನು ಉಪಯೋಗಿಸಿಕೊಂಡು ಟಿಬೆಟ್ ಅನ್ನು ಸ್ವತಂತ್ರಗೊಳಿಸುವುದಕ್ಕೆ ನೀರೆರೆಯುತ್ತಿದೆಯಲ್ಲದೇ, ತವಾಂಗ್ ತನ್ನದೆಂದು ಸಾಬೀತುಗೊಳಿಸುವುದಕ್ಕೂ ಹೆಜ್ಜೆ ಇಡುತ್ತಿದೆ. ಹೀಗಾಗಿ ಚೀನಾವು ಅಗತ್ಯ ಬಿದ್ದರೆ ‘ಹೊಡೆತದ ಮೇಲೆ ಹೊಡೆತ’ ಕೊಟ್ಟು ಭಾರತಕ್ಕೆ ಉತ್ತರಿಸುತ್ತದೆ ಅನ್ನೋದು ಗ್ಲೋಬಲ್ ಟೈಮ್ಸ್ ಪ್ರತಿಪಾದನೆ.

Leave a Reply