ಜಾಗತಿಕ ಮಟ್ಟದಲ್ಲಿ ಭಾರತದ ಧ್ವನಿ ಎತ್ತಲು ಡಿಜಿಟಲ್ ಮಾಧ್ಯಮ ಆರಂಭಕ್ಕೆ ಮೋದಿ ಸರ್ಕಾರ ಚಿಂತನೆ!

ಡಿಜಿಟಲ್ ಕನ್ನಡ ಟೀಮ್:

ಜಾಗತಿಕ ವಿಷಯಗಳ ಮೇಲೆ ಭಾರತದ ದೃಷ್ಟಿಕೋನ- ಅಭಿಪ್ರಾಯ ಮಂಡಿಸಲು, ವಿದೇಶಿ ಮಾಧ್ಯಮಗಳ ಭಾರತ ವಿರೋಧಿ ನಿಲುವುಗಳಿಗೆ ಸವಾಲು ಎಸೆಯಲು ಹಾಗೂ ಭಾರತದ ವ್ಯವಸ್ಥೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಇರುವ ತಪ್ಪು ಗ್ರಹಿಕೆ ನಿವಾರಣೆ… ಹೀಗೆ ವಿವಿಧ ಉದ್ದೇಶಗಳನ್ನು ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಈಗ ಡಿಜಿಟಲ್ ಮಾಧ್ಯಮವನ್ನು ಆರಂಭಿಸಲು ನಿರ್ಧರಿಸಿದೆ.

ಅಂತರ್ಜಾಲದ ಮೂಲಕ ಭಾರತದ ಅಭಿಪ್ರಾಯವನ್ನು ವಿಶ್ವಕ್ಕೆ ಸಾರಲು ಈ ಡಿಜಿಟಲ್ ವೇದಿಕೆಯನ್ನು ಬಳಸಿಕೊಳ್ಳುವ ಚಿಂತನೆ ನಡೆದಿದ್ದು, ಇದಕ್ಕಾಗಿ ₹ 75 ಕೋಟಿ ವೆಚ್ಚವಾಗುವ ಆಂದಾಜು ಇದೆ. ಪ್ರಸಾರ ಭಾರತಿ ಅಧ್ಯಕ್ಷ ಎ.ಸೂರ್ಯಪ್ರಕಾಶ್ ನೇತೃತ್ವದ ಸಮಿತಿ ಈ ವಿಷಯವನ್ನು ಚರ್ಚಿಸಿದ್ದು, ಇದಕ್ಕೆ ಸಮ್ಮತಿಯನ್ನು ಸೂಚಿಸಲಾಗಿದೆ. ಈ ಡಿಜಿಟಲ್ ಮಾಧ್ಯಮದ ಬಗ್ಗೆ ಸೂರ್ಯಪ್ರಕಾಶ್ ಅವರ ಅಭಿಪ್ರಾಯ ಹೀಗಿದೆ…

‘ಜಾಗತಿಕ ಮಟ್ಟದಲ್ಲಿ ಭಾರತದ ಪರ ಅಭಿಪ್ರಾಯ ರೂಪಿಸಲು, ಪ್ರಭಾವ ಬೀರಲು, ಭಾರತದ ಸಂಶೋಧನೆಗಳ ಬಗ್ಗೆ ಜಗತ್ತಿಗೆ ಮಾಹಿತಿ ನೀಡಲು ಹಾಗೂ ಭಾರತದ ಚಿಂತಕರ ಅಭಿಪ್ರಾಯ ವ್ಯಕ್ತಪಡಿಸಲು ಈ ಡಿಜಿಟಲ್ ಮಾಧ್ಯಮ ವೇದಿಕೆಯಾಗಲಿದೆ. ಆರಂಭದಲ್ಲಿ ಜಾಗತಿಕ ಮಟ್ಟದ ಸುದ್ದಿ ವಾಹಿನಿಯನ್ನು ಆರಂಭಿಸುವ ಯೋಚನೆ ಇತ್ತಾದರೂ ಅದು ಕಾರ್ಯರೂಪಕ್ಕೆ ಬರಲು ಸಾಧ್ಯವಾಗಲಿಲ್ಲ. ಈ ಹಿಂದೆ ಜಾಗತಿಕ ಮಾಧ್ಯಮ ಆರಂಭಕ್ಕೆ ಏನೇ ಅಡ್ಡಿಗಳು ಎದುರಾಗಿರಬಹುದು. ಆದರೆ ಈಗ ಜಾಗತಿಕ ಮಟ್ಟದಲ್ಲಿ ನಮ್ಮ ಧ್ವನಿ ಎತ್ತಲು ವೇದಿಕೆಯನ್ನು ಹೊಂದುವ ಅಗತ್ಯ ಹೆಚ್ಚಾಗಿದೆ.’

ಈ ಡಿಜಿಟಲ್ ಮಾಧ್ಯಮವನ್ನು 2013ರ ಕಂಪನಿಗಳ ಕಾಯ್ದೆ ಮೂಲಕ ಕಾರ್ಪೋರೇಟ್ ಮಾದರಿಯಲ್ಲಿ ಜಾರಿಗೆ ತಂದು, ಆರ್ಥಿಕ ಸ್ವಾಯತ್ತತೆ ಹಾಗೂ ಜಾಗತಿಕ ಸ್ಪರ್ಧೆಗೆ ಅವಕಾಶ ನೀಡಲು ಅವಕಾಶ ನೀಡಲಾಗುವುದು ಎಂದು ಪ್ರಸಾರ ಭಾರತಿ ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.

ಮೂರು ವರ್ಷಗಳ ಅವಧಿಯಲ್ಲಿ ಈ ಡಿಜಿಟಲ್ ಮಾಧ್ಯಮ ತಿಂಗಳಿಗೆ 10 ಮಿಲಿಯನ್ ನಿಂದ 100 ಮಿಲಿಯನ್ ಸರಾಸರಿಯ ಪೇಜ್ ವ್ಯೂ, 1 ಮಿಲಿಯನ್ ಆ್ಯಪ್ ಡೌನ್ ಲೋಡ್ ಮತ್ತು 1 ಮಿಲಿಯನ್ ನಷ್ಟು ಯೂಟ್ಯೂಬ್ ಚಂದಾದಾರರನ್ನು ಹೊಂದುವ ಗುರಿ ಇಟ್ಟುಕೊಂಡಿದೆ.

Leave a Reply