ಕಳಪೆ ಫೀಲ್ಡಿಂಗ್ ಮಾಡಿದ್ದಕ್ಕೆ ಬೆಲೆತೆತ್ತ ರಾಯಲ್ ಚಾಲೆಂಜರ್ಸ್, ಟೂರ್ನಿಯಲ್ಲಿ ಹಾಲಿ ಚಾಂಪಿಯನ್ನರ ಶುಭಾರಂಭ

ಡಿಜಿಟಲ್ ಕನ್ನಡ ಟೀಮ್:

ಆರಂಭದಲ್ಲಿ ಕಲಾವಿದರ ವರ್ಣರಂಜೀತ ಕಾರ್ಯಕ್ರಮ, ನಂತರ ಉಭಯ ತಂಡಗಳ ಬ್ಯಾಟ್ಸ್ ಮನ್ ಗಳ ಸಿಡಿಲಬ್ಬರದ ಬ್ಯಾಟಿಂಗ್ ನಿಂದ ಸುರಿದ ಬೌಂಡರಿ ಹಾಗೂ ಸಿಕ್ಸರ್ ಗಳ ಸುರಿಮಳೆ… ಇವು ಐಪಿಎಲ್ 10ನೇ ಆವೃತ್ತಿಗೆ ಸಿಕ್ಕ ಅದ್ಧೂರಿಯಾಗಿ ಸ್ವಾಗತ. ಎರಡೂ ತಂಡಗಳು ಮಿಂಚಿನ ಬ್ಯಾಟಿಂಗ್ ನಡೆಸಿದರೂ ಅಂತಿಮವಾಗಿ ಜಯದ ರುಚಿ ಸವಿದಿದ್ದು ಮಾತ್ರ ಆತಿಥೇಯ ಸನ್ ರೈಸರ್ಸ್ ಹೈದರಾಬಾದ್.

ಕಳೆದ ಆವೃತ್ತಿಯ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಕಾದಾಟ ನಡೆಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಬಾರಿಯ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಗೆದ್ದು ಪ್ರಸಕ್ತ ಆವೃತ್ತಿಯಲ್ಲಿ ಉತ್ತಮ ಆರಂಭ ಪಡೆಯುವುದು ಎರಡೂ ತಂಡಗಳ ಗುರಿಯಾಗಿತ್ತು. ಪಂದ್ಯದ ಎಲ್ಲಾ ವಿಭಾಗದಲ್ಲೂ ಸಂಘಟಿತ ಪ್ರದರ್ಶನ ನೀಡಿದ ಸನ್ ರೈಸರ್ಸ್ ತಂಡ ಪಂದ್ಯವನ್ನು 35 ರನ್ ಗಳ ಅಂತರದಲ್ಲಿ ಗೆದ್ದುಕೊಂಡರೆ, ಸ್ವಯಂಕೃತ ತಪ್ಪು ಎಸಗಿದ ಆರ್ ಸಿಬಿ ಈ ಪಂದ್ಯವನ್ನು ಕಳೆದುಕೊಂಡಿತು.

ರನ್ ಚೇಸಿಂಗ್ ಮಾಡುವ ತಂಡ ಹೆಚ್ಚು ಜಯ ಸಾಧಿಸಿರುವ ಇತಿಹಾಸ ಹೊಂದಿರುವ ಹೈದರಾಬಾದ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಆರ್ ಸಿಬಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ತಂಡ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ದಾಖಲಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಆರ್ ಸಿಬಿ 19.3 ಓವರ್ ಗಳಲ್ಲಿ 172 ರನ್ ಗಳಿಗೆ ಆಲೌಟ್ ಆಯಿತು.

ಈ ಪಂದ್ಯದ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಉಭಯ ತಂಡಗಳ ಕ್ಷೇತ್ರ ರಕ್ಷಣೆ. ಆರ್ ಸಿಬಿ ತಂಡದ ಆಟಗಾರರು ಸುಲಭ ಕ್ಯಾಚ್ ಗಳನ್ನು ಕೈಚೆಲ್ಲುವುದರ ಜತೆಗೆ ಎದುರಾಳಿ ತಂಡಕ್ಕೆ ಸುಲಭವಾಗಿ ರನ್ ಹರಿಯಬಿಟ್ಟರು. ಆದರೆ ಹೈದರಾಬಾದ್ ತಂಡದ ಆಟಗಾರರು ಪ್ರತಿ ಹಂತದಲ್ಲೂ ಚುರುಕಿನ ಫೀಲ್ಡಿಂಗ್ ನಿಂದ ರನ್ ನಿಯಂತ್ರಿಸಿ, ಆಕರ್ಷಕ ಕ್ಯಾಚ್ ಹಿಡಿದು ಹಾಗೂ ರನೌಟ್ ಮಾಡುವ ಮೂಲಕ ಆರ್ ಸಿಬಿ ತಂಡದ ಮೇಲೆ ಒತ್ತಡ ಹೇರಿತ್ತು. ವಿರಾಟ್ ಕೊಹ್ಲಿ ಹಾಗೂ ಡಿವಿಲಿಯರ್ಸ್ ಅನುಪಸ್ಥಿತಿಯ ಜತೆಗೆ ಕಳಪೆ ಕ್ಷೇತ್ರರಕ್ಷಣೆ ಆರ್ ಸಿಬಿ ತಂಡದ ಸೋಲಿಗೆ ಪ್ರಮುಖ ಕಾರಣವಾಯ್ತು.

ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಶಿಖರ್ ಧವನ್ (40 ರನ್, 31 ಎಸೆತ), ಯುವರಾಜ್ ಸಿಂಗ್ (62 ರನ್, 27 ಎಸೆತ), ಹೆನ್ರಿಕೇಸ್ (52 ರನ್, 37 ಎಸೆತ), ಬೆನ್ ಕಟಿಂಗ್ (16 ರನ್, 6 ಎಸೆತ) ಆಕರ್ಷಕ ಬ್ಯಾಟಿಂಗ್ ಮಾಡಿದರು. ಆರ್ ಸಿಬಿ ತಂಡದ ಆಟಗಾರರು ಕ್ಯಾಚ್ ಗಳನ್ನು ಕೈಚೆಲ್ಲುವ ಮೂಲಕ ನೀಡಿದ ಜೀವದಾನವನ್ನು ಸನ್ ರೈಸರ್ಸ್ ಬ್ಯಾಟ್ಸ್ ಮನ್ ಗಳು ಪರಿಣಾಮಕಾರಿಯಾಗಿ ಬಳಸಿಕೊಂಡರು. ಹೀಗಾಗಿ ಆತಿಥೇಯ ತಂಡ ಸುಲಭವಾಗಿ 200 ರ ಗಡಿ ದಾಟಿತು. ಆರ್ ಸಿಬಿ ಬೌಲರ್ ಗಳ ಪೈಕಿ ಚಾಹಲ್ (22ಕ್ಕೆ 1) ಪರಿಣಾಮಕಾರಿಯಾದರು. ಉಳಿದಂತೆ ಮಿಲ್ಸ್, ಚೌಧರಿ, ಬಿನ್ನಿ ತಲಾ 1 ವಿಕೆಟ್ ಪಡೆದರಾದರೂ ಹೆಚ್ಚು ರನ್ ನೀಡಿ ದುಬಾರಿಯಾದರು.

ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಆರ್ ಸಿಬಿ ತಂಡಕ್ಕೆ ಆರಂಭಿಕರಾದ ಕ್ರಿಸ್ ಗೇಲ್ (32 ರನ್, 21 ಎಸೆತ) ಹಾಗೂ ಮಂದೀಪ್ ಸಿಂಗ್ (24 ರನ್, 16 ಎಸೆತ), ಸ್ಫೋಟಕ ಆರಂಭವನ್ನೇ ನೀಡಿದರಾದರೂ ಈ ಇಬ್ಬರು ಆಟಗಾರರು ಹೆಚ್ಚು ಕಾಲ ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಇವರಿಬ್ಬರ ನಿರ್ಗಮನದ ನಂತರ ಬಂದ ಟ್ರಾವಿಸ್ ಹೆಡ್ (30 ರನ್, 22 ಎಸೆತ), ಕೇದಾರ್ ಜಾಧವ್ (30 ರನ್, 16 ಎಸೆತ) ತಂಡದ ಹೋರಾಟ ಮುಂದುವರಿಸಿದರಾದರೂ ಉತ್ತಮ ಆರಂಭ ಪಡೆದು ವಿಕೆಟ್ ಒಪ್ಪಿಸಿದರು. ನಂತರ ಬಂದ ಬ್ಯಾಟ್ಸ್ ಮನ್ ಗಳು ಕ್ರಮೇಣವಾಗಿ ಹೆಚ್ಚುತ್ತಿದ್ದ ರನ್ ರೇಟ್ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೇ ವಿಕೆಟ್ ಒಪ್ಪಿಸಿದರು.

ಸನ್ ರೈಸರ್ಸ್ ತಂಡದ ಪರ ಅಫ್ಘಾನಿಸ್ತಾನದ ಆಟಗಾರ ರಶೀದ್ ಖಾನ್ 2, ದೀಪಕ್ ಹೂಡಾ ಹಾಗೂ ಬಿಪುಲ್ ಶರ್ಮಾ ತಲಾ 1 ವಿಕೆಟ್ ಪಡೆದು. ಸ್ಫೋಟಕ ಬ್ಯಾಟಿಂಗ್ ಮೂಲಕ ಸನ್ ರೈಸರ್ಸ್ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಯುವರಾಜ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Leave a Reply