ಆರ್ ಸಿಬಿ ಅಭಿಮಾನಿಗಳಿಗೆ ಮತ್ತೊಂದು ಶಾಕ್! ಡಿವಿಲಿಯರ್ಸ್ ಗಾಯದಿಂದ ಗುಣಮುಖರಾದ್ರು ಎಲ್ಲ ಪಂದ್ಯಗಳಲ್ಲಿ ಆಡಲ್ಲ

ಡಿಜಿಟಲ್ ಕನ್ನಡ ಟೀಮ್:

ಪ್ರಮುಖ ಆಟಗಾರರ ಅನುಪಸ್ಥಿತಿ ನಡುವೆ ಐಪಿಎಲ್ 10ನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಆರ್ ಸಿಬಿ ತಂಡ ಸೋಲನುಭವಿಸಿದೆ. ಇದರ ಬೆನ್ನಲ್ಲೇ ಈಗ ಆರ್ ಸಿಬಿ ಅಭಿಮಾನಿಗಳಿಗೆ ಮತ್ತೊಂದು ಕೆಟ್ಟ ಸುದ್ದಿ ಬಂದಿದೆ. ಅದೇನೆಂದರೆ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿರುವ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಗಾಯದಿಂದ ಚೇತರಿಸಿಕೊಂಡರೂ ಟೂರ್ನಿಯ ಎಲ್ಲ ಪಂದ್ಯಗಳಿಗೂ ಲಭ್ಯರಾಗುವುದಿಲ್ಲ. ಕಾರಣ, ಚಾಂಪಿಯನ್ಸ್ ಟ್ರೋಫಿ!

ಹೌದು, ಮಿನಿ ವಿಶ್ವಕಪ್ ಎಂದೇ ಪರಿಗಣಿಸಲಾಗಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ಜೂನ್ 1ರಿಂದ ಆರಂಭವಾಗಲಿದೆ. ಈ ಮಹತ್ವದ ಟೂರ್ನಿಗೆ ಸಿದ್ಧತೆ ನಡೆಸಲು ಮೇ 7ರ ನಂತರ ತವರಿಗೆ ಮರಳಬೇಕು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆ ತನ್ನ ಆಟಗಾರರಿಗೆ ಸೂಚನೆ ನೀಡಿದೆ. ಹೀಗಾಗಿ ಡಿವಿಲಿಯರ್ಸ್ ಸೇರಿದಂತೆ ಐಪಿಎಲ್ ನಲ್ಲಿ ಭಾಗವಹಿಸುತ್ತಿರುವ ದಕ್ಷಿಣ ಆಫ್ರಿಕಾ ಆಟಗಾರರು ಮೇ ಎರಡನೇ ವಾರದಿಂದ ತಮ್ಮ ಪ್ರಾಂಚೈಸಿಗಳಿಗೆ ಅಲಭ್ಯರಾಗಲಿದ್ದಾರೆ.

ಈ ಹಂತದಲ್ಲಿ ಟೂರ್ನಿ ಲೀಗ್ ಹಂತ ಮಹತ್ವದ ಘಟ್ಟ ತಲುಪಲಿದ್ದು, ಪ್ಲೇ ಆಫ್ ತಲುಪಲು 5-6 ತಂಡಗಳ ನಡುವೆ ತೀವ್ರ ಪೈಪೋಟಿ ಎದುರಾಗಲಿದೆ. ಈ ಹಂತದಲ್ಲಿ ಬೇರೆ ತಂಡಗಳ ಗೆಲವು ಸೋಲಿನ ಫಲಿತಾಂಶ ಮತ್ತೊಂದು ತಂಡದ ಹಣೆಬರಹ ನಿರ್ಧರಿಸುವ ಸ್ಥಿತಿ ತಲುಪುತ್ತದೆ. ಇಂತಹ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಆಟಗಾರರನ್ನೇ ಪ್ರಮುಖ ಅಸ್ತ್ರಗಳನ್ನಾಗಿ ಹೊಂದಿರುವ ತಂಡಗಳಿಗೆ ದೊಡ್ಡ ಹಿನ್ನಡೆಯಾಗಲಿದೆ.

ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮೇ 15ರವರೆಗೆ ಈ ಆಟಗಾರರು ಐಪಿಎಲ್ ನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದೆ. ಆದರೆ ಈ ಬಗ್ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆ ಇನ್ನಷ್ಟೇ ತನ್ನ ನಿರ್ಧಾರ ಪ್ರಕಟಿಸಬೇಕಿದೆ.

ಬಿಸಿಸಿಐನ ಮನವಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆ ಒಪ್ಪಿಗೆ ನೀಡಿದರೂ ಈ ಆಟಗಾರರು ಕೇವಲ ಲೀಗ್ ಹಂತದ ಪಂದ್ಯಗಳಲ್ಲಿ ಮಾತ್ರ ಆಡಲಿದ್ದಾರೆ. ಪ್ಲೇ ಆಫ್ ಪಂದ್ಯ ಮೇ 16ರಿಂದ ಆರಂಭವಾಗಲಿರುವುದರಿಂದ ಈ ಆಟಗಾರರು ಈ ಹಂತದಲ್ಲಿ ಆಡುವುದು ಅಸಾಧ್ಯವಾಗಲಿದೆ. ಒಂದು ವೇಳೆ ದಕ್ಷಿಣ ಆಫ್ರಿಕಾ ಸಂಸ್ಥೆ ಬಿಸಿಸಿಐ ಮನವಿಗೆ ಒಪ್ಪದಿದ್ದರೆ ಲೀಗ್ ಹಂತದಲ್ಲೇ ಎರಡು ಮೂರು ಪಂದ್ಯಗಳಿಗೆ ಈ ಆಟಗಾರರು ಅಲಭ್ಯರಾಗಲಿದ್ದಾರೆ.

ಈಗಾಗಲೇ ಆರಂಭಿಕ ಪಂದ್ಯದಲ್ಲಿ ಸೋತಿರುವ ಆರ್ ಸಿಬಿ ಪರ ಮುಂದಿನ ಪಂದ್ಯದಲ್ಲಿ ಡಿವಿಲಿಯರ್ಸ್ ಹಾಗೂ ಕೊಹ್ಲಿ ಕಣಕ್ಕಿಳಿಯುತ್ತಾರೋ ಇಲ್ಲವೋ ಎಂಬ ಖಚಿತ ಮಾಹಿತಿ ಬಂದಿಲ್ಲ. ಇದರ ನಡುವೆಯೇ ಡಿವಿಲಿಯರ್ಸ್ ಮಹತ್ವದ ಹಂತದಲ್ಲಿ ಅಲಭ್ಯರಾಗಲಿದ್ದಾರೆ ಎಂಬ ಸುದ್ದಿ ಆರ್ ಸಿಬಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸುವುದಂತೂ ಖಚಿತ.

ಯಾವ ಯಾವ ತಂಡಗಳಿಗೆ ಯಾವ ಆಟಗಾರರ ಅನುಪಸ್ಥಿತಿ ಕಾಡಲಿದೆ ಎಂದು ನೋಡುವುದಾದರೆ, ಆರ್ ಸಿಬಿಗೆ ಎಬಿ ಡಿವಿಲಿಯರ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಡೇವಿಡ್ ಮಿಲ್ಲರ್, ರೈಸೀಗ್ ಪುಣೆ ಸೂಪರ್ ಜೈಂಟ್ ಪಡೆಗೆ ಇಮ್ರಾನ್ ತಾಹೀರ್ ಹಾಗೂ ಫಫ್ ಡುಪ್ಲೆಸಿಸ್, ಡೆಲ್ಲಿ ಡೇರ್ ಡೆವಿಲ್ಸ್ ಪಾಳಯಕ್ಕೆ ಕ್ರಿಸ್ ಮೊರಿಸ್ ಮತ್ತು ಕೈಗಿಸೊ ರಬಾಡಾ ಅಲಭ್ಯತೆ ದುಬಾರಿಯಾಗಲಿದೆ.

Leave a Reply