ಶಿವಸೇನೆಯ ಗೂಂಡಾಗಿರಿ, ಗೋರಕ್ಷಣೆ ಹೆಸರಲ್ಲಿ ರಾಕ್ಷಸತನ; ಛೇ, ಹೊಸ ಭಾರತ ಇದೇನಾ?

ಡಿಜಿಟಲ್ ಕನ್ನಡ ಟೀಮ್:

ತಾನು ಏರ್ ಇಂಡಿಯಾ ಸಿಬ್ಬಂದಿಯನ್ನು ಚಪ್ಪಲ್ಲಿಯಿಂದ ಥಳಿಸಿದ್ದು ಹೌದೆಂದು ಬಹಿರಂಗ ಹೇಳಿಕೆ ಕೊಟ್ಟಿದ್ದ ಶಿವಸೇನೆಯ ಸಂಸದ ರವೀಂದ್ರ ಗಾಯಕವಾಡ್ ಗುರುವಾರ ಸಂಸತ್ತಿನಲ್ಲಿ ಈ ಕುರಿತು ವಿಮಾನಯಾನ ಸಂಸ್ಥೆಯ ಕ್ಷಮೆ ಕೇಳುವುದಕ್ಕೆ ನಿರಾಕರಿಸಿದರು. ಇನ್ನೊಂದೆಡೆ, ರಾಜಸ್ಥಾನದ ಆಳ್ವಾರ್ ನಲ್ಲಿ ಗೋರಕ್ಷಕ ವೇಷದ ಗೂಂಡಾಗಳ ಥಳಿತದಿಂದಲೇ ಪೆಹ್ಲು ಖಾನ್ ಎಂಬ ವ್ಯಕ್ತಿ ಸತ್ತಿದ್ದು ಎಂಬುದನ್ನು ಪ್ರಾಥಮಿಕ ವರದಿಗಳೆಲ್ಲ ದೃಢೀಕರಿಸಿದ್ದರೂ, ಬಿಜೆಪಿ ಸಂಸದ ಮುಖ್ತಾರ್ ಅಬ್ಬಾಸ್ ನಖ್ವಿ ಮಾತ್ರ ಇಂಥದೊಂದು ಘಟನೆ ವರದಿಯಾಗುತ್ತಿರುವ ರೀತಿಯಲ್ಲಿ ನಡೆದೇ ಇಲ್ಲ ಎಂದು ಬಾಲಿಶ ಸಮರ್ಥನೆಗೆ ಇಳಿದರು.

ಮೊದಲಿಗೆ ಶಿವಸೇನೆಯ ಅಹಂಕಾರದ ದರ್ಶನ ಮಾಡಿಕೊಳ್ಳೋಣ. ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದ ವಿದ್ಯಮಾನದ ನಂತರ ಗೂಂಡಾ ಸಂಸದ ಗಾಯಕ್ವಾಡಗೆ ಎಲ್ಲ ವಿಮಾನಯಾನ ಸಂಸ್ಥೆಗಳು ನಿಷೇಧ ಹೇರಿವೆಯಷ್ಟೆ. ಹೀಗಾಗಿ ಇವರ ದೆಹಲಿ-ಮುಂಬೈ ಓಡಾಟಗಳಿಗೆ ತೊಂದರೆ ಆಗಿದೆ. ಈ ಸಂಸದ ತಮ್ಮ ಕೃತ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರೆ ಎಲ್ಲವೂ ಸರಿಯಾಗುತ್ತಿತ್ತು. ಆದರೆ ಹೊಡೆದಿದ್ದಕ್ಕೆ ತುಸುವೂ ವಿಷಾದ ವ್ಯಕ್ತಪಡಿಸದ ಸಂಸದನದ್ದು, ತನ್ನ ಮೇಲಿನ ಪ್ರವೇಶ ನಿಷೇಧ ತೆಗೆದುಹಾಕುವಂತೆ ಸರ್ಕಾರದಿಂದ ಆದೇಶವಾಗಬೇಕೆಂದು ಕೇಂದ್ರದ ವಿಮಾನಯಾನ ಸಚಿವರಿಗೆ ಆಗ್ರಹ ಬೇರೆ. ಇದು ಸಂಸತ್ತಿನ ಒಳಗಿನ ಕತೆಯಾದರೆ, ಹೊರಗಡೆ ಶಿವಸೇನೆಯ ಸಂಜಯ್ ರಾವತ್ ಪತ್ರಿಕಾಗೋಷ್ಟಿ ನಡೆಸಿ ಒಂದಿಷ್ಟು ಬೆದರಿಕೆಗಳನ್ನು ಹಾಕಿದ್ದಾರೆ. ‘ವಿಮಾನಯಾನ ಸಂಸ್ಥೆಗಳು ಜನ ಸೇವಕರು. ನಮ್ಮ ಸಂಸದನೇಕೆ ಅವರ ಕ್ಷಮೆ ಕೇಳಬೇಕು? ಸರ್ಕಾರ ಮಧ್ಯಪ್ರವೇಶಿಸಿ ವಿಮಾನಯಾನ ಸಂಸ್ಥೆಗಳು ಗಾಯಕ್ವಾಡರಿಗೆ ಮತ್ತೆ ಪ್ರವೇಶ ಕೊಡುವಂತೆ ಮಾಡದಿದ್ದರೆ ಶಿವಸೇನೆ ಉಗ್ರ ಕ್ರಮಕ್ಕೆ ಮುಂದಾಗುತ್ತದೆ.’

ಏನಿವರ ಉಗ್ರ ಕ್ರಮ? ಮುಂಬೈ ವಿಮಾನ ನಿಲ್ದಾಣದಲ್ಲಿ ಹಾರಾಟ ಸಾಧ್ಯವಾಗದಂತೆ ಮಾಡುವ ಬೆದರಿಕೆ. ಏಪ್ರಿಲ್ 10ರಂದು ನಡೆಯುವ ಎನ್ಡಿಎ ಔತಣಕೂಟದಲ್ಲಿ ಭಾಗವಹಿಸುವುದಿಲ್ಲ ಎಂಬ ಧಮಕಿ. ಬಿಜೆಪಿ ಸಧ್ಯಕ್ಕೇನೋ ಶಿವಸೇನೆಯ ಈ ಗೂಂಡಾಗಿರಿಯನ್ನು ಸಹಿಸುವ ಸೂಚನೆ ನೀಡಿಲ್ಲವಾದರೂ, ಆ ಪಾಳೆಯದಿಂದ ಕೆಲವು ತೊಳಲಾಟದ ಧ್ವನಿಗಳೂ ಇವೆ. ‘ಯಾವುದೇ ಪ್ರಯಾಣಿಕ ದುರ್ವರ್ತನೆ ತೋರಿದರೆ ಅವನನ್ನು ನಿಷೇಧಿಸುವ ಅಧಿಕಾರ ವಿಮಾನಯಾನ ಸಂಸ್ಥೆಗಳಿಗಿದೆ. ಅದರಂತೆ ಕ್ರಮ ಕೈಗೊಂಡಿವೆ. ಆದರೆ ಇಲ್ಲಿ ದುರ್ವರ್ತನೆ ಆರೋಪ ಹೊತ್ತ ವ್ಯಕ್ತಿ ಸಂಸದರೂ ಆಗಿರುವುದರಿಂದ ಈ ನಿಷೇಧವು ಅವರ ನಿತ್ಯ ಕರ್ತವ್ಯಗಳಿಗೆ ಅಡ್ಡಿಯಾಗುತ್ತಿದೆ ಎಂಬುದೂ ನಿಜ’ ಎನ್ನುತ್ತ ಸಮಜಾಯಿಷಿಗೆ ಯತ್ನಿಸುತ್ತಿದೆ ಬಿಜೆಪಿ. ಆದರೆ ತಮ್ಮ ಕೃತ್ಯದ ಬಗ್ಗೆ ಪಶ್ಚಾತಾಪ ಇಲ್ಲದವರಿಗೆ ರಾಜಿ ಆಯ್ಕೆ ಏಕೆ ಎಂಬುದು ಪ್ರಶ್ನೆ.

ಇನ್ನು ಗೋರಕ್ಷಕರ ರಾಕ್ಷಸಿ ಕೃತ್ಯದ ಬಗ್ಗೆ ಸಂಸತ್ತಿನಲ್ಲಿ ಪ್ರತಿಕ್ರಿಯೆ ನೀಡುವಾಗ ಬಿಜೆಪಿ ತೋರಿದ ಸಂವೇದನಾಶೂನ್ಯತೆ ಆಘಾತಕಾರಿ. ಮುಖ್ತಾರ್ ನಬ್ಬಾಸ್ ಅಖ್ವಿ ಹೇಳುತ್ತಾರೆ- ‘ಈ ಸಂಸತ್ತು ಗೋಹತ್ಯೆ ಮಾಡುವವರ ಪರವಿದೆ ಎಂಬ ಸಂದೇಶ ಹೋಗಬಾರದು. ಇದು ಕೋಟ್ಯಂತರ ಜನರ ಭಾವನೆಗಳೊಂದಿಗೆ ಹೊಂದಿಕೊಂಡಿರುವ ವಿಷಯ.’

ಹೌದು ಸ್ವಾಮಿ. ಇದರರ್ಥ ಗೋರಕ್ಷಕರೆನ್ನುವವರು ಯಾರನ್ನಾದರೂ ಸ್ಥಳದಲ್ಲೇ ವಿಚಾರಣೆ ನಡೆಸಿ ಕೊಂದು ಬಿಸಾಕಬಹುದೇ? ಸಂಸತ್ತಿನಲ್ಲಿ ಬಿಜೆಪಿ ಇಂಥ ನರಹತ್ಯೆಗಳ ಪರವಾಗಿದೆ ಎಂಬ ಸಂದೇಶ ಹೋದರೆ ಮುಖ್ತಾರ್ ಅಬ್ಬಾಸ್ ನಖ್ವಿಯವರಿಗೇನೂ ಅನಿಸದೇ?

ಹಾಗಾದರೆ ಕೆಲ ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ, ‘ಗೋರಕ್ಷಕರೆಂದು ಹೇಳಿಕೊಳ್ಳುವವರು ಕಾನೂನು ಕೈಗೆ ತೆಗೆದುಕೊಳ್ಳುವುದನ್ನು ಸರ್ವಥಾ ಸಹಿಸುವುದಿಲ್ಲ. ಇಂಥವರ ಬಗ್ಗೆ ಆಯಾ ರಾಜ್ಯಗಳು ವಿಶೇಷ ಎಚ್ಚರಿಕೆ ವಹಿಸಬೇಕು’ ಎಂದಿದ್ದರಲ್ಲ? ಅದನ್ನು ನಖ್ವಿಯವರ ಪ್ರಕಾರ ಗೋಹತ್ಯೆ ಪರ ಮಾತು ಅಂತ ವ್ಯಾಖ್ಯಾನಿಸಲಾಗುತ್ತದೆಯೇ?

ಗೋಹತ್ಯೆ ನಿಷೇಧಿಸುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟದ್ದು. ಆದರೆ ಗೋರಕ್ಷಣೆ ಪರ ಅಂತ ತೋರಿಸಿಕೊಳ್ಳುವುದಕ್ಕೆ ರಾಜಸ್ತಾದಲ್ಲಾಗಿರುವ ನರಹತ್ಯೆಯನ್ನು ಖಂಡಿಸುವ ಧೈರ್ಯವನ್ನೂ ತೋರದಿರುವುದು ಬಿಜೆಪಿಯ ಪರಮ ಅಸಹ್ಯ ಮುಖವನ್ನು ತೋರಿಸುತ್ತಿದೆ. ಇಂಥ ತುಷ್ಟೀಕರಣ ಇರುವುದರಿಂದಲೇ ವಾಸ್ತವದಲ್ಲಿ ಪಶುಪಾಲಕನಾಗಿದ್ದ ಮುಸ್ಲಿಮನನ್ನು ತಥಾಕಥಿತ ಗೋರಕ್ಷಕರು ನಡು ರಸ್ತೆಯಲ್ಲಿ ಕೊಂದುಹಾಕುವಂಥ ಸ್ಥಿತಿ ಎದುರಾಗಿದೆ.

Leave a Reply