ಜಗದೀಶ್ ಶೆಟ್ಟರ್ ಗೆ ಸ್ಪೀಕರ್ ಕೋಳಿವಾಡ ತಿರುಗೇಟು

ಡಿಜಿಟಲ್ ಕನ್ನಡ ಟೀಮ್:

ವಿಧಾನ ಮಂಡಲದಲ್ಲಿ ನಿರ್ಣಯ ಕೈಗೊಂಡ ನಂತರ ಸದನ ಸಮಿತಿಗಳ ರಚನೆಗೂ ಮುನ್ನ ಬೇರೆಯವರನ್ನು ಕೇಳಿ ರಚಿಸಬೇಕು ಎಂಬ ನಿಯಮವೇನಿಲ್ಲ… ಇದು ವಿಧಾನಸಭಾಧ್ಯಕ್ಷ ಕೆ.ಬಿ ಕೋಳಿವಾಡ ಅವರು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ತಿರುಗೇಟು ಕೊಟ್ಟ ಪರಿ.

ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಹೇಳಿದಿಷ್ಟು… ‘ಜಗದೀಶ್ ಶೆಟ್ಟರ್ ಅವರಿಗೆ ಸಮಿತಿಯ ಬಗ್ಗೆ ಈಗ ಅರಿವಾದಂತಿದೆ. ಮಾಧ್ಯಮ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ಸದಸ್ಯರ ಅಭಿಪ್ರಾಯದಂತೆ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯನ್ನು ಸದುದ್ದೇಶದಿಂದ ರಚನೆ ಮಾಡಲಾಗಿದೆಯೇ ಹೊರತು ಮಾಧ್ಯಮಗಳ ನಿಯಂತ್ರಣಕ್ಕಲ್ಲ. ಇನ್ನು ಕೆರೆ ಒತ್ತುವರಿ ಸಂಬಂಧಿಸಿದಂತೆ ವರದಿ ಸಿದ್ಧವಾಗಿದೆ. ಆದರೆ ಈ ಬಗ್ಗೆ ಎರಡು ಬಾರಿ ಸಭೆ ಕರೆದಿದ್ದರೂ ಕೋರಂ ಕೊರತೆಯಿಂದಾಗಿ ಈ ವರದಿಗೆ ಅನುಮತಿ ಸಿಕ್ಕಿಲ್ಲ. ಸದ್ಯದಲ್ಲೇ ವರದಿಗೆ ಸಮಿತಿ ಒಪ್ಪಿಗೆ ಪಡೆದು ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡುತ್ತೇವೆ.’

Leave a Reply