ಸಿರಿಯಾ ಸರ್ವಾಧಿಕಾರಿ ಅಸಾದ್ ವಿರುದ್ಧ ಬಿತ್ತು ಅಮೆರಿಕದ ಕ್ಷಿಪಣಿ, ಜಾಗತಿಕ ರಾಜಕಾರಣದ ತಿರುಗಣಿ

ಡಿಜಿಟಲ್ ಕನ್ನಡ ಟೀಮ್:

ಏಪ್ರಿಲ್ 4ರಂದು ಸಿರಿಯಾದ ಪ್ರಾಂತ್ಯವೊಂದರಲ್ಲಿ ವಿಷಾನಿಲ ದಾಳಿಯಾಗಿ ಹಲವರು ಮೃತಪಟ್ಟಿದ್ದರು. ಈ ರಾಸಾಯನಿಕ ದಾಳಿ ಮಾಡಿರುವುದು ಅಲ್ಲಿನ ಸರ್ವಾಧಿಕಾರಿ ಅಸಾದ್ ಆಡಳಿತವೇ ಎಂದು ತೀರ್ಮಾನಿಸಿರುವ ಅಮೆರಿಕ ಇದೀಗ ಸಿರಿಯಾ ಮಿಲಿಟರಿ ನೆಲೆ ಮೇಲೆ ಕ್ಷಿಪಣಿ ದಾಳಿ ಮಾಡಿ ಉತ್ತರ ನೀಡಿದೆ.

ವಿಷಾನಿಲ ಸಂಗ್ರಹಿಸಿದ್ದ ವಾಯುನೆಲೆ ಮೇಲೆ ಅಮೆರಿಕ ಸೇನೆಯು ಶುಕ್ರವಾರ ಕ್ಷಿಪಣಿ ದಾಳಿ ನಡೆಸುವ ಮೂಲಕ ವಾಯುನೆಲೆ ಹಾಗೂ ಇಂಧನ ತಾಣಗಳನ್ನು ಧ್ವಂಸ ಮಾಡಿದೆ. ಇಂದು ಬೆಳಗಿನ ಜಾವ 3.25 ರ ಸುಮಾರಿಗೆ ಅಮೆರಿಕ ಸೇನೆ ಈ ದಾಳಿ ನಡೆಸಿದೆ ಎಂದು ದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಈ ದಾಳಿಯಿಂದ ಆಗಿರುವ ನಷ್ಟದ ಪ್ರಮಾಣ ಇನ್ನಷ್ಟೇ ತಿಳಿಯಬೇಕಿದೆ.

ಈ ಮೊದಲು ಸಿರಿಯಾದಲ್ಲಿ ರಷ್ಯಾವು ಅಸಾದ್ ಪಡೆಯನ್ನು ಬೆಂಬಲಿಸುವ ಹಾಗೂ ಅಮೆರಿಕವು ಅಸಾದ್ ವಿರೋಧಿಗಳನ್ನು ಒಗ್ಗೂಡಿಸುವ ಪಾತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದವು. ಆದರೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗುತ್ತಲೇ, ‘ಐಎಸ್ಐಎಸ್ ಮಟ್ಟಹಾಕುವುದೇ ನಮ್ಮ ಗುರಿ’ ಎನ್ನುವ ಮೂಲಕ ತುಸು ರಷ್ಯಾ ನಿಲುವಿನಷ್ಟೇ ವಾಲಿದಂತೆ ಗೋಚರವಾಗಿತ್ತು. ಆದರೆ ಇದೀಗ ಅಸಾದ್ ಮಿಲಿಟರಿ ಬಲದ ಮೇಲೆ ನೇರ ದಾಳಿ ಮಾಡುವ ಮೂಲಕ ಅಮೆರಿಕ ತನ್ನ ಲಾಗಾಯ್ತಿನ ನಿಲುವನ್ನು ಗಟ್ಟಿಗೊಳಿಸಿಕೊಂಡಂತಾಗಿದೆ. ಇದುವೇ ಜಾಗತಿಕ ರಾಜಕೀಯದ ತಿರುಗಣಿ.

ಈ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ಭದ್ರತೆಯ ಹಿತದೃಷ್ಟಿಯಿಂದ ಈ ದಾಳಿ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಈ ದಾಳಿ ಬಗ್ಗೆ ಮಾಹಿತಿ ನೀಡಿದ ಟ್ರಂಪ್ ಹೇಳಿದಿಷ್ಟು…

‘ಅಸಾದ್ ಸಿರಿಯಾದಲ್ಲಿ ನಿಷೇಧಿತ ರಸಾಯನಿಕ ಅನಿಲವನ್ನು ಬಳಸಿ ದಾಳಿ ಮಾಡಿದ್ದಾರೆ. ಆ ಮೂಲಕ ತನ್ನ ರಾಸಾಯನಿಕ ಶಸ್ತ್ರಾಸ್ತ್ರ ನೀತಿಯನ್ನು ಉಲ್ಲಂಘಿಸುವುದರ ಜತೆಗೆ ವಿಶ್ವ ಸಂಸ್ಥೆ ಭದ್ರತಾ ಸಮಿತಿಯ ನಿಯಮವನ್ನು ನಿರ್ಲಕ್ಷಿಸಿದೆ. ಇಷ್ಟು ವರ್ಷಗಳ ಕಾಲ ಅಸಾದ್ ಅವರ ವರ್ತನೆಯನ್ನು ಬದಲಿಸಲು ಮಾಡಲಾದ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಅಸಾದ್ ತಮ್ಮ ನಾಗರೀಕರ ಮೇಲೆ ನಡೆಸಿದ ಈ ವಿಷಾನಿಲ ದಾಳಿ ಘೋರ ಕೃತ್ಯವಾಗಿದೆ. ಇದರಿಂದ ಅಮಾಯಕ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಪ್ರಾಣ ಬಿಟ್ಟಿದ್ದಾರೆ. ಈ ಮುಗ್ಧ ಜನರು ವಿಷಾನಿಲ ಸೇವನೆಯಿಂದ ಸುದೀರ್ಘ ಕಾಲ ನರಳಿ ನರಳಿ ಸಾವನ್ನಪ್ಪಿದ್ದಾರೆ. ಯಾವುದೇ ಮಕ್ಕಳು ಈ ರೀತಿಯಾಗಿ ನರಳಿ ನರಳಿ ಸಾಯುವುದುನ್ನು ಸಹಿಸಲು ಸಾಧ್ಯವೇ ಇಲ್ಲ. ಅಮೆರಿಕ ದೇಶದ ಭದ್ರತೆಯ ದೃಷ್ಟಿಯಿಂದಲೂ ಅಮೆರಿಕ ಸೇನೆ ಸಿರಿಯಾದ ವಾಯು ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.’

ಇನ್ನು ಈ ದಾಳಿಯ ಬಗ್ಗೆ ಪೆಂಟಗನ್ ಮಾಧ್ಯಮ ಕಾರ್ಯದರ್ಶಿ ಕ್ಯಾಪ್ಟನ್ ಜೆಫ್ ಡೇವಿಸ್ ನೀಡಿರುವ ಮಾಹಿತಿ ಹೀಗಿದೆ…

‘ಈ ದಾಳಿಯ ಬಗ್ಗೆ ರಷ್ಯಾಗೆ ಮಾಹಿತಿ ತಿಳಿದಿತ್ತು. ಹೀಗಾಗಿ ಸಿರಿಯಾ ವಾಯು ನೆಲೆಯಲ್ಲಿದ್ದ ರಷ್ಯ ಸೈನಿಕರು ಹಾಗೂ ಸಿರಿಯಾ ನಾಗರೀಕರನ್ನು ದಾಳಿ ಪ್ರದೇಶದಿಂದ ಸ್ಥಳಾಂತರಿಸಲಾಗಿತ್ತು. ಈ ದಾಳಿ ಅಸಾದ್ ಗೆ ಪರೋಕ್ಷ ಸಂದೇಶ ನೀಡುವ ಪ್ರಯತ್ನವಾಗಿದೆ. ಶಯ್ರಾತ್ ವಾಯು ಪ್ರದೇಶವನ್ನು ರಾಸಾಯನಿಕ ಶಸ್ತ್ರಾಸ್ತ್ರ ಹಾಗೂ ಸಿರಿಯಾ ವಾಯು ನೆಲೆಯನ್ನು ಸಂಗ್ರಹಿಸಲು ಬಳಸಲಾಗುತ್ತಿತ್ತು. ಈ ಶಯ್ರಾತ್ ನ ಯುದ್ಧವಿಮಾನದ ಮೂಲಕವೇ ಈ ವಿಷಾನಿಲ ದಾಳಿ ನಡೆದಿದೆ ಎಂಬುದರ ಬಗ್ಗೆ ಅಮೆರಿಕ ಗುಪ್ತಚರ ಇಲಾಖೆಗೆ ಖಚಿತ ಮಾಹಿತಿ ಬಂದಿತ್ತು. ಹೀಗಾಗಿ ಈ ದಾಳಿ ಮಾಡಲಾಗಿದೆ.’

Leave a Reply