ಕಮಲ ಪಾಳೆಯಕ್ಕೆ ಡಿ.ಎಂ ಸಾಲಿ? ನಾಯಕ ಸಮುದಾಯದ ಮುಖಂಡನ ನಡೆ ಪರಿಣಾಮವೇನು?

ಡಿಜಿಟಲ್ ಕನ್ನಡ ಟೀಮ್:

ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇರುವಾಗಲೇ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಮುಂದುವರೆದಿದೆ… ಪ್ರಮುಖ ಮೂರು ಪಕ್ಷಗಳಲ್ಲಿ ಬೇಲಿ ಹಾರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 2018ರ ವಿಧಾನಸಭೆ ಚುನಾವಣೆ ಮಾರ್ಚ್, ಏಪ್ರಿಲ್ ತಿಂಗಳ ಮಧ್ಯಭಾಗದಲ್ಲಿ ನಡೆಯುವ ಸಂಭವವಿದೆ. ಆಗಲೇ ಹಾಲಿ, ಮಾಜಿ ಶಾಸಕರು ಸುರಕ್ಷಿತ ಕ್ಷೇತ್ರಗಳತ್ತ ಚಿತ್ತ ಹರಿಸಿದ್ದಾರೆ. ತತ್ವ ಸಿದ್ಧಾಂತ ಯಾವುದನ್ನೂ ಲೆಕ್ಕಿಸದೆ ಗೆಲ್ಲುವುದೇ ಮಾನದಂಡವಾಗಿಟ್ಟುಕೊಂಡಿರುವ ಅನೇಕರು ತಮಗೆ ಸುರಕ್ಷಿತ ಎನಿಸಿದ ಪಕ್ಷಗಳತ್ತ ವಲಸೆ ಹೋಗುತ್ತಿದ್ದಾರೆ. ಈ ಬಾರಿ ಅಧಿಕಾರ ಹಿಡಿಯಲೇಬೇಕೆಂದು ಪಣತೊಟ್ಟಿರುವ ಪ್ರತಿಪಕ್ಷ ಬಿಜೆಪಿಯತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ವಲಸೆ ಸಾಮಾನ್ಯವಾಗಿದೆ.

ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್ ಪಕ್ಷ ತೊರೆಯುವವರ ಸಂಖ್ಯೆ ದೊಡ್ಡದಾಗುತ್ತಲೇ ಇದ್ದು ಈಗ ಮಾಜಿ ಪರಿಷತ್ ಸದಸ್ಯ, ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿಯವರ ಸರದಿ. ಪಕ್ಷ ಹಾಗೂ ಸಿದ್ದರಾಮಯ್ಯ ಸರ್ಕಾರದ ನಡವಳಿಕೆಯಿಂದ ಅಸಮಧಾನಗೊಂಡಿರುವ ಡಿ ಎಂ ಸಾಲಿ ಪಕ್ಷ ತೊರೆಯುವ ನಿರ್ಧಾರ ಮಾಡಿದ್ದಾರೆ. ಈ ಕುರಿತು ತಮ್ಮ ಆಪ್ತರೊಂದಿಗೆ ಮಾತುಕತೆ ಮಾಡಿರುವ ಡಿ.ಎಂ‌ ಸಾಲಿ ಸದ್ಯದಲ್ಲೇ “ಕೈ”ಬಿಡಲು ಚಿಂತನೆ ನಡೆಸಿದ್ದಾರೆ. ತಮ್ಮ ರಾಜಕೀಯ ಗುರು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಹಾದಿ ತುಳಿಯಲು ನಿರ್ಧರಿಸಿರುವ ಡಿ.ಎಂ‌ ಸಾಲಿ “ಕೈ” ಬಿಟ್ಟು ಕಮಲ ಹಿಡಿಯಲು ಮುಂದಾಗಿದ್ದಾರೆ.

ಕೃಷ್ಣ ಅವರು ಸಿಎಂ ಆಗಿದ್ದ ಅವಧಿಯಲ್ಲಿ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರಾಗಿದ್ದ ಡಿ.ಎಂ ಸಾಲಿ ಅವರ ಬಿಜೆಪಿ ಸೇರ್ಪಡೆಗೆ ಅಧಿಕೃತ ಘೋಷಣೆಯೊಂದೆ ಬಾಕಿ. ತೆರೆಮರೆಯಲ್ಲಿ ಡಿ.ಎಂ ಸಾಲಿ ಅವರನ್ನು ಭೇಟಿ ಮಾಡಿರುವ ಕಮಲ‌ ನಾಯಕರು ಶೀಘ್ರದಲ್ಲೇ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ. ಮೂಲತಃ ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನವರಾದ ಡಿ.ಎಂ ಸಾಲಿ ಅವರು ನಾಯಕ ಜನಾಂಗಕ್ಕೆ‌ ಸೇರಿದವರಾಗಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಸಂಸದ ಶ್ರೀರಾಮುಲು ಹೊರತುಪಡಿಸಿದ್ರೆ ವಾಲ್ಮೀಕಿ ಜನಾಂಗದಲ್ಲಿ ಡಿ.ಎಂ ಸಾಲಿ ಬಹಳಷ್ಟು ಪ್ರಭಾವ ಹೊಂದಿರುವ ರಾಜಕಾರಣಿ. ಸಾಲಿ ಅಧಿಕೃತವಾಗಿ ಬಿಜೆಪಿಗೆ ಜೈ ಎಂದಿದ್ದೆ ಆದ್ರೆ ಕಾಂಗ್ರೆಸ್ ಆ ಭಾಗದಲ್ಲಿ ಮುಂಬರುವ ಚುನಾವಣೆಯಲ್ಲಿ ದೊಡ್ಡ ಪೆಟ್ಟು ಎದುರಿಸುವುದು ಬಹುತೇಕ ಖಚಿತ.

Leave a Reply