ಕ್ರಿಸ್ ಲಿನ್- ಗಂಭೀರ್ ದಾಖಲೆಯ ಜತೆಯಾಟಕ್ಕೆ ಶರಣಾಯ್ತು ಗುಜರಾತ್ ಲಯನ್ಸ್

ಡಿಜಿಟಲ್ ಕನ್ನಡ ಟೀಮ್:

ಐಪಿಎಲ್ ನ ಇತಿಹಾಸದಲ್ಲೇ ಐತಿಹಾಸಿಕ ಜತೆಯಾಟವಾಡಿದ ಕೋಲ್ಕತಾ ನೈಟ್ ರೈಡರ್ಸ್ ನಾಯಕ ಗೌತಮ್ ಗಂಭೀರ್ ಹಾಗೂ ಕ್ರಿಸ್ ಲಿನ್ ಗುಜರಾತ್ ಲಯನ್ಸ್ ವಿರುದ್ಧ ತಂಡಕ್ಕೆ ಅತ್ಯುತ್ತಮ ಗೆಲವು ತಂದುಕೊಟ್ಟರು. ಆ ಮೂಲಕ ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡ ಭರ್ಜರಿ ಆರಂಭ ಪಡೆದಿದೆ.

ಈ ಪಂದ್ಯದಲ್ಲಿ ಬ್ಯಾಟ್ಸ್ ಮನ್ ಗಳ ಅಬ್ಬರದ ಪರಿಣಾಮ ರಾಜ್ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ಬೌಂಡರಿ- ಸಿಕ್ಸರ್ ಗಳ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಮನರಂಜನೆ ಉಣಬಡಿಸಿತು. ತವರಿನ ಅಂಗಣದ ಆರಂಭಿಕ ಪಂದ್ಯದಲ್ಲೇ ಗುಜರಾತ್ ಲಯನ್ಸ್ ತಂಡ ಕಳಪೆ ಬೌಲಿಂಗ್ ಪ್ರದರ್ಶನದಿಂದಾಗಿ ಸೋತು ಮುಖಭಂಗ ಅನುಭವಿಸಿತು. ಟಾಸ್ ಗೆದ್ದ ಕೆಕೆಆರ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಲಯನ್ಸ್ ತಂಡ ಮೆಕಲಂ (35 ರನ್, 24 ಎಸೆತ), ರೈನಾ (ಅಜೇಯ 68 ರನ್, 51 ಎಸೆತ), ದಿನೇಶ್ ಕಾರ್ತಿಕ್ (47 ರನ್, 25 ಎಸೆತ) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 183 ರನ್ ಪೇರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ತಂಡ ಆರಂಭಿಕರಾದ ಗೌತಮ್ ಗಂಭೀರ್ (ಅಜೇಯ 76 ರನ್, 48 ಎಸೆತ), ಕ್ರಿಸ್ ಲಿನ್ (ಅಜೇಯ 93 ರನ್, 41 ಎಸೆತ) ಅವರ ಸಿಡಿಲಬ್ಬರದ ಬ್ಯಾಟಿಂಗ್ ನಿಂದ ವಿಕೆಟ್ ನಷ್ಟವಿಲ್ಲದೇ 14,5 ಓವರ್ ಗಳಲ್ಲಿ 184 ರನ್ ಕಲೆಹಾಕಿ ಇನ್ನು 31 ಎಸೆತ ಬಾಕಿ ಇರುವಾಗಲೇ ಪಂದ್ಯವನ್ನು ಗೆದ್ದುಕೊಂಡು ಭರ್ಜರಿ ರನ್ ರೇಟ್ ಅನ್ನು ತನ್ನದಾಗಿಸಿಕೊಂಡಿತು.

ಗಂಭೀರ್ ಹಾಗೂ ಕ್ರಿಸ್ ಲಿನ್ ಅವರ ಈ ಜತೆಯಾಟ ಹಲವು ದಾಖಲೆಗಳನ್ನು ಮುರಿದಿದೆ. ಆ ಪೈಕಿ ಮೊದಲನೆಯದು ಐಪಿಎಲ್ ನಲ್ಲಿ ಮೊದಲ ವಿಕೆಟ್ ಗೆ ದಾಖಲಾದ ಗರಿಷ್ಠ ಜತೆಯಾಟ. ಈ ಹಿಂದೆ 2013ರಲ್ಲಿ ಆರ್ ಸಿಬಿ ತಂಡದ ಪರ ಕ್ರಿಸ್ ಗೇಲ್ ಹಾಗೂ ತಿಲಕರತ್ನೆ ದಿಲ್ಷಾನ್ ಗಳಿಸಿದ 167 ರನ್ ಜತೆಯಾಟ ಅಗ್ರಸ್ಥಾನದಲ್ಲಿತ್ತು. ಇನ್ನು ಎರಡನೆಯದು ಟಿ20 ಕ್ರಿಕೆಟ್ ಇತಿಹಾಸದಲ್ಲೇ ವಿಕೆಟ್ ನಷ್ಟವಿಲ್ಲದೆ ಯಶಸ್ವಿಯಾಗಿ ಗುರಿ  ಬೆನ್ನಟ್ಟಿದ ಗರಿಷ್ಠ ಮೊತ್ತ ಇದಾಗಿದೆ.

ಪಂದ್ಯದ ಆರಂಭದಿಂದಲೂ ಅನನುಭವದಿಂದ ಕೂಡಿದ್ದ ಗುಜರಾತ್ ತಂಡದ ಬೌಲಿಂಗ್ ದಾಳಿಯನ್ನು ಚೆಂಡಾಡಿದ ಕ್ರಿಸ್ ಲಿನ್ 6 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ ಗಳನ್ನು ಬಾರಿಸಿದರು. ಆ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿದ್ದರು ಹೀನಾಯವಾಗಿ ಸೋತ ಗುಜರಾತ್ ಪಡೆಗೆ ಗಾಯದ ಸಮಸ್ಯೆಯಿಂದ ಹೊರಗುಳಿದಿರುವ ಡ್ವೈನ್ ಬ್ರಾವೊ ಹಾಗೂ ರವೀಂದ್ರ ಜಡೇಜಾ ಅವರ ಅನುಪಸ್ಥಿತಿ ತೀವ್ರವಾಗಿಯೇ ಕಾಡಿತು.

Leave a Reply