ನಾಯಕನಾಗಿ- ಅತ್ಯುತ್ತಮ ಫಿನಿಶರ್ ಆಗಿ ಧೋನಿ ಸ್ಥಾನವನ್ನು ಯಶಸ್ವಿಯಾಗಿ ತುಂಬಿದ ಸ್ಮಿತ್! ಕಳೆದ ಆವೃತ್ತಿಯ ಕಹಿ ಅನುಭವ ಮರೆಸಿತು ಪುಣೆ ಶುಭಾರಂಭ

ಡಿಜಿಟಲ್ ಕನ್ನಡ ಟೀಮ್:

ಕಳೆದ ಐಪಿಎಲ್ ನಲ್ಲಿ ನೀರಸ ಪ್ರದರ್ಶನ ನೀಡಿ ಮುಖಭಂಗ ಅನುಭವಿಸಿದ್ದ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡ, ಈ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಚೇಸಿಂಗ್ ಮಾಡಿ 7 ವಿಕೆಟ್ ಗಳ ಜಯದೊಂದಿಗೆ ಶುಭಾರಂಭ ಮಾಡಿದೆ. ಐಪಿಎಲ್ ನ ಅತ್ಯಂತ ಯಶಸ್ವಿ ನಾಯಕ ಎಂದೇ ಖ್ಯಾತಿ ಪಡೆದ ಮಹೇಂದ್ರ ಸಿಂಗ್ ಧೋನಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಆ ಜವಾಬ್ದಾರಿಯನ್ನು ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಹೆಗಲಿಗೆ ನೀಡಿದಾಗ ಕ್ರಿಕೆಟ್ ಪಂಡಿತರು ಸೇರಿದಂತೆ ಅಭಿಮಾನಿಗಳು ನಿಬ್ಬೆರಗಾಗಿದ್ದರು. ಆದರೆ ಈ ಪಂದ್ಯದಲ್ಲಿ ನಾಯಕ ಸ್ಮಿತ್ ತೋರಿದ ಪ್ರದರ್ಶನ ತಮಗೆ ನಾಯಕತ್ವದ ಜವಾಬ್ದಾರಿ ನೀಡಿರುವುದನ್ನು ಸಮರ್ಥಿಸಿಕೊಳ್ಳುವಂತಿತ್ತು.

ತವರಿನ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪುಣೆ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಆರಂಭಿಕ ಜೋಸ್ ಬಟ್ಲರ್ (38 ರನ್, 19 ಎಸೆತ), ನಿತೀಶ್ ರಾಣಾ (34 ರನ್, 28 ಎಸೆತ), ಪೊಲಾರ್ಡ್ (27 ರನ್, 17 ಎಸೆತ) ಹಾರ್ದಿಕ್ ಪಾಂಡ್ಯ (ಅಜೇಯ 35 ರನ್, 15 ಎಸೆತ) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಪುಣೆ ತಂಡಕ್ಕೆ ಆರಂಭಿಕ ಅಜಿಂಕ್ಯ ರಹಾನೆ (60 ರನ್, 34 ಎಸೆತ), ನಾಯಕ ಸ್ಟೀವನ್ ಸ್ಮಿತ್ (ಅಜೇಯ 84, 54 ಎಸೆತ), ಸ್ಟೋಕ್ಸ್ (21 ರನ್, 14 ಎಸೆತ), ಧೋನಿ (ಅಜೇಯ 12, 12 ಎಸೆತ) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನಿಂದ 19.5 ಓವರ್ ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 187 ರನ್ ದಾಖಲಿಸಿತು.

ಆಕರ್ಷಕ ಬ್ಯಾಟಿಂಗ್ ಮಾಡಿದ ಸ್ಮಿತ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ತಂಡದ ನಾಯಕತ್ವ ಧೋನಿ ಹೆಗಲಿನಿಂದ ಸ್ಮಿತ್ ಅವರಿಗೆ ರವಾನೆಯಾದ ಹಿನ್ನೆಲೆಯಲ್ಲಿ ಪುಣೆ ತಂಡ ಯಾವ ರೀತಿ ಪ್ರದರ್ಶನ ನೀಡಲಿದೆ? ಧೋನಿಯಂತೆ ಸ್ಮಿತ್ ಯಶಸ್ವಿ ನಾಯಕರಾಗುವರೇ? ನಾಯಕತ್ವದ ಜತೆಗೆ ಬ್ಯಾಟಿಂಗ್ ನಲ್ಲೂ ಮಿಂಚುವರೆ? ಎಂಬ ಕುತೂಹಲ ಮೂಡಿದ್ದವು. ಈ ಎಲ್ಲವನ್ನು ಸಾಬೀತು ಮಾಡುವಲ್ಲಿ ಸ್ಮಿತ್ ಯಶಸ್ವಿಯಾದರು. ಅಷ್ಟೇ ಅಲ್ಲದೆ ಪಂದ್ಯದ ರೋಚಕ ಅಂತಿಮ ಓವರ್ ನಲ್ಲಿ ಸತತ 2 ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಜಯದ ದಡ ಸೇರಿಸಿದಾಗ ಸ್ಮಿತ್ ಕೇವಲ ನಾಯಕತ್ವವನ್ನು ಮಾತ್ರ ಧೋನಿ ಅವರಿಂದ ಪಡೆದಿಲ್ಲ. ಪಂದ್ಯವನ್ನು ಅತ್ಯುತ್ತಮವಾಗಿ ಮುಗಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆಂಬಂತೆ ಕಾಣಿಸಿತು.

ಈ ಪಂದ್ಯದಲ್ಲಿ ಪುಣೆ ತಂಡದ ಗೆಲುವಿಗೆ ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್ ಹಾಗೂ ಫೀಲ್ಡಿಂಗ್ ನ ವಿಭಾಗಗಳಲ್ಲಿ ತೋರಿದ ಶಿಸ್ತುಬದ್ಧ ದಾಳಿ ಪ್ರಮುಖ ಪಾತ್ರ ವಹಿಸಿತು. ಸ್ಪಿನ್ನರ್ ಇಮ್ರಾನ್ ತಾಹೀರ್ 3 ವಿಕೆಟ್, ಭಾಟಿಯಾ 2, ಸ್ಟೋಕ್ಸ್ ಮತ್ತು ಜಂಪಾ ತಲಾ 1 ವಿಕೆಟ್ ಪಡೆದರು. ಇನ್ನು ಮುಂಬೈ ಇನಿಂಗ್ಸ್ ನಲ್ಲಿ ಮಹತ್ವದ ಘಟ್ಟದಲ್ಲಿ ಪೊಲಾರ್ಡ್ ಅವರ ಕ್ಯಾಚ್ ಆನ್ನು ಆಕರ್ಷಕವಾಗಿ ಹಿಡಿದ ಮಯಾಂಕ್ ಅಗರ್ವಾಲ್ ಮುಂಬೈ ತಂಡದ 200 ರ ರನ್ ಗಡಿ ತಲುಪುವ ಓಟಕ್ಕೆ ಬ್ರೇಕ್ ಹಾಕಿತು.

ಒಟ್ಟಿನಲ್ಲಿ ಕಳೆದ ಆವೃತ್ತಿಯಲ್ಲಿ ಗೆಲುವಿನ ಮುಖ ನೋಡಲು ಹರಸಾಹಸ ಪಟ್ಟಿದ್ದ ಪುಣೆ ತಂಡ ಈ ಆವೃತ್ತಿಯ ಆರಂಭದಲ್ಲೇ ಅಬ್ಬರದ ಪ್ರದರ್ಶನ ನೀಡಿರುವುದು ಇತರೆ ತಂಡಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

Leave a Reply