ಆರ್ ಸಿಬಿ ತಂಡದಲ್ಲಿ ಕೆ.ಎಲ್ ರಾಹುಲ್ ಜಾಗಕ್ಕೆ ಆಯ್ಕೆಯಾದ ವಿಷ್ಣು ವಿನೋದ್, ಕೇರಳದ ಈ ಸ್ಫೋಟಕ ಆಟಗಾರನ ಬಗ್ಗೆ ನಿಮಗೆ ಗೊತ್ತೆ?

ಡಿಜಿಟಲ್ ಕನ್ನಡ ಟೀಮ್:

ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಕೆ.ಎಲ್ ರಾಹುಲ್ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದು ನಿಮಗೆ ಗೊತ್ತೇ ಇದೆ. ಈಗ ತೆರವಾಗಿರುವ ರಾಹುಲ್ ಸ್ಥಾನವನ್ನು ತುಂಬಲು ಆರ್ ಸಿಬಿ ತಂಡಕ್ಕೆ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ವಿಷ್ಣು ವಿನೋದ್ ನನ್ನು ಆಯ್ಕೆ ಮಾಡಲಾಗಿದೆ. ಆರ್ ಸಿಬಿ ಅಭಿಮಾನಿಗಳ ಪಾಲಿಗೆ ಈ ಹೆಸರು ಹೊಸತು. ಹೀಗಾಗಿ ಈ ಆಟಗಾರನ ಬಗ್ಗೆ ಅಭಿಮಾನಿಗಳಲ್ಲಿ ಸಹಜವಾಗಿಯೇ ಕುತೂಹಲ ಮೂಡಿದೆ. ಹೀಗಾಗಿ ವಿಷ್ಣು ವಿನೋದ್ ಕುರಿತ ಮಾಹಿತಿ ಇಲ್ಲಿದೆ ನೋಡಿ…

ಯಾರು ಈ ವಿಷ್ಣು ವಿನೋದ್?

23 ವರ್ಷದ ವಿಷ್ಣು ವಿನೋದ್ ಕೇರಳ ಮೂಲದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್. ಈತನ ಪಾಲಿಗೆ ಇದು ಮೊದಲ ಐಪಿಎಲ್ ಟೂರ್ನಿ. ಈ ಹೊಸ ಪ್ರತಿಭೆ ಆರ್ ಸಿಬಿ ತಂಡದ ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈತ ಮೂಲತಃ ಅಗ್ರಕ್ರಮಾಂಕದ ಸ್ಫೋಟಕ ಬಲಗೈ ಬ್ಯಾಟ್ಸ್ ಮನ್ ಹಾಗೂ ಪೂರ್ಣ ಪ್ರಮಾಣದ ವಿಕೆಟ್ ಕೀಪರ್. ಪ್ರಥಮ ದರ್ಜೆ ಟಿ20 ಟೂರ್ನಿಯಲ್ಲಿ ಈತ ಕೇರಳ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದು, 33.80 ಸರಾಸರಿಯಲ್ಲಿ 338 ರನ್ ದಾಖಲಿಸಿದ್ದಾರೆ. ಅಲ್ಲದೆ 143.22 ಸ್ಟ್ರೈಕ್ ರೇಟ್ ಹೊಂದಿರುವ ವಿಷ್ಣು ಆರ್ ಸಿಬಿ ತಂಡದ ಪ್ರಮುಖ ಅಸ್ತ್ರವಾಗುವ ನಿರೀಕ್ಷೆ ಇದೆ.

ಆರ್ ಸಿಬಿ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ?

ರಾಹುಲ್ ಟೂರ್ನಿಯಿಂದ ಹೊರಗುಳಿಯುತ್ತಿದ್ದಂತೆ ಆರ್ ಸಿಬಿ ತಂಡ ಈ ಸ್ಥಾನಕ್ಕೆ ಪೂರ್ಣ ಪ್ರಮಾಣದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಗಾಗಿ ಹುಡುಕಾಟ ನಡೆಸಿತು. ಈ ಹುಡುಕಾಟದಲ್ಲಿ ವಿಷ್ಣು ವಿನೋದ್ ಜತೆಗೆ ಕರ್ನಾಟಕದ ಪವನ್ ದೇಶಪಾಂಡೆ, ಹಿಮಾಚಲ ಪ್ರದೇಶದ ಪ್ರಶಾಂತ್ ಚೋಪ್ರಾ ಹಾಗೂ ತಮಿಳುನಾಡಿನ ಯುವ ಆಟಗಾರ ಎನ್.ಜಗದೀಶನ್ ಅವರ ಹೆಸರನ್ನು ಪರಿಗಣಿಸಿತು. ನಂತರ ಈ ಐವರು ಆಟಗಾರರಿಗೆ ಏಪ್ರಿಲ್ 2ರಂದು ಆಯ್ಕೆ ಟ್ರಯಲ್ಸ್ ನಡೆಸಿ, ಇವರ ಆಟವನ್ನು ಪರೀಕ್ಷಿಸಲಾಯಿತು. ಆಯ್ಕೆ ಟ್ರಯಲ್ಸ್ ನಲ್ಲಿ ಈ ಆಟಗಾರರು ಆರ್ ಸಿಬಿ ತಂಡಗ ವೇಗಿಗಳಾದ ಶೇನ್ ವಾಟ್ಸನ್, ತೈಮಲ್ ಮಿಲ್ಸ್ ಹಾಗೂ ಆಯಡಂ ಮಿಲ್ನೆ ಅವರ ಬೌಲಿಂಗ್ ಎದುರಿಸಿದರು. ಈ ಹಂತದಲ್ಲಿ ತಂಡದ ಕೋಚ್ ಡೇನಿಯಲ್ ವೆಟೋರಿ ಈ ನಾಲ್ವರು ಆಟಗಾರರ ಸಾಮರ್ಥ್ಯ ಹಾಗೂ ಕೌಶಲ್ಯಗಳನ್ನು ಪರಿಶೀಲಿಸಿದರು. ಈ ಟ್ರಯಲ್ಸ್ ನಲ್ಲಿ ವಿಷ್ಣು ವಿನೋದ್, ಎಡಗೈ ವೇಗಿ ತೈಮಲ್ ಮಿಲ್ಸ್ ಎಸೆತಗಳಿಗೆ ಭರ್ಜರಿ ಹೊಡೆತಗಳನ್ನು ಬಾರಿಸುವ ಮೂಲಕ ಆರ್ ಸಿಬಿ ತಂಡದ ಆಡಳಿತ ಮಂಡಳಿ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

ರಾಹುಲ್ ಸ್ಥಾನಕ್ಕೆ ವಿಷ್ಣು ವಿನೋದ್ ಆಯ್ಕೆಯನ್ನು ಆರ್ ಸಿಬಿ ಅಧಿಕೃತವಾಗಿ ಪ್ರಕಟಿಸಿದ್ದು, ಶನಿವಾರ ನಡೆಯಲಿರುವ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

Leave a Reply