ಏಪ್ರಿಲ್ 20ಕ್ಕೆ ಮದ್ಯ ಸಿಗಲ್ಲ! ಕಾರಣ ಏನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧಿಸಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಬಕಾರಿ ನಿಯಮ 5ಕ್ಕೆ ತಿದ್ದುಪಡಿ ತರಬೇಕು. ಆ ಮೂಲಕ ಬಾರು ಮತ್ತು ವೈನ್ ಶಾಪ್ ಗಳು ಈಗ ಇರುವ ಸ್ಥಳದಲ್ಲೇ ಮುಂದುವರಿಸಲು ಅಗತ್ಯ ಕಾಯ್ದೆ ರೂಪಿಸಬೇಕು ಎಂದು ಒತ್ತಾಯಿಸುತ್ತಿರುವ ಮದ್ಯ ಮಾರಾಟಗಾರರ ಸಂಘ ಏಪ್ರಿಲ್ 20ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್ ಮಾಡಲು ನಿರ್ಧರಿಸಿದೆ.

ಈ ವಿಚಾರವಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗಡೆ ಶುಕ್ರವಾರ ಸುದ್ದಿಗೋಷ್ಟಿ ನಡೆಸಿದ್ದಾರೆ. ಈ ವೇಳೆ ಅವರು ಹೇಳಿದಿಷ್ಟು…

‘ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಕಾನೂನು ಜಾರಿಗೊಳಿಸಿದರೆ, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿರುವ ಆರು ಸಾವಿರ ಮದ್ಯದಂಗಡಿಗಳು ಮುಚ್ಚಬೇಕಾಗುತ್ತದೆ. ಇದರಿಂದ ₹ 3 ಸಾವಿರ ಕೋಟಿ ನಷ್ಟ ಉಂಟಾಗಲಿದೆ. ಹೀಗಾಗಿ ಅಬಕಾರಿ ನಿಯಮ 5ಕ್ಕೆ ತಿದ್ದುಪಡಿ ತಂಡು ರಾಜ್ಯ ಹೆದ್ದಾರಿಗಳನ್ನು ಜಿಲ್ಲಾ ಹೆದ್ದಾರಿ ಎಂದು ಪರಿಗಣಿಸಬೇಕು. ಈಗ ಇರುವ ಅಂಗಡಿಗಳನ್ನು ಅದೇ ಸ್ಥಳದಲ್ಲಿ ಮುಂದುವರಿಸಿ, ಮುಂದಿನ ದಿನಗಳಲ್ಲಿ ಹೊಸ ಪರವಾನಿಗೆ ನೀಡುವ ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಿ. ಹಾಲಿ ಸನ್ನದುಗಳನ್ನು ಮುಂದಿನ ಸೆಪ್ಟೆಂಬರ್ ವರೆಗೂ ವಿಸ್ತರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಮದ್ಯ ಮಾರಾಟಗಾರರ ಸಂಘ ಏ.20ರಂದು ಬಂದ್ ಮಾಡಲಾಗುತ್ತಿದೆ. ಅಂದು ರಾಜ್ಯದ ಯಾವುದೇ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವುದಿಲ್ಲ ಪದಾಧಿಕಾರಿಗಳು ಹಾಗೂ ಸನ್ನದು ಮಾಲೀಕರುಗಳು ಬೆಂಗಳೂರಿನಲ್ಲಿ ಮೆರವಣಿಗೆ ಮಾಡಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಿದ್ದಾರೆ.’

Leave a Reply