ಉಪಚುನಾವಣೆಯಲ್ಲಿ ಝಣ ಝಣ ಕಾಂಚಾಣ: ಹಣ ಹಂಚಿಕೆ ಬಗ್ಗೆ ಕಾಂಗ್ರೆಸ್ ವಿರುದ್ಧದ ಬಿಜೆಪಿ ಆರೋಪಕ್ಕೆ ಸಿಕ್ತಿದೆ ಹೆಚ್ಚಿನ ಬಲ

ಡಿಜಿಟಲ್ ಕನ್ನಡ ಟೀಮ್:

ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಚಣದ ಸದ್ದು ಬಹಳ ಜೋರಾಗಿಯೇ ನಡೆಯುತ್ತಿದೆ. ಚುನಾವಣಾ ಪ್ರಚಾರ ಆರಂಭವಾದ ದಿನದಿಂದಲೂ ಆಡಳಿತ ಪಕ್ಷ ಕಾಂಗ್ರೆಸ್ ಈ ಚುನಾವಣೆಗೆ ಹಣದ ಹೊಳೆ ಹರಿಸುತ್ತಿದೆ ಎಂಬ ಆರೋಪ ಮಾಡುತ್ತಲೇ ಬಂದಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆ ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೋಟಿನ ಕಂತೆ ಹಿಡಿದು ಹಂಚುತ್ತಿದ್ದ ವಿಡಿಯೋ ಹೊರಬಂದಿತ್ತು. ಇದರ ಬೆನ್ನಲ್ಲೇ ಇಂದು ಗುಂಡ್ಲುಪೇಟೆಯಲ್ಲಿ ಮಾಜಿ ಸಚಿವ ದಿವಂಗತ ಮಹದೇವ್ ಪ್ರಸಾದ್ ಅವರ ಮಾಜಿ ಆಪ್ತ ಕಾರ್ಯದರ್ಶಿ ದ್ವಿಚಕ್ರ ವಾಹನದಲ್ಲಿ 4 ಲಕ್ಷ ಹಣದೊಂದಿಗೆ ಸಿಕ್ಕಿ ಬಿದ್ದಿದ್ದಾರೆ.

ತಾವು ಹಣ ಕೊಡುತ್ತಿದ್ದದ್ದು ಕಾರ್ಯಕರ್ತರ ಊಟ-ಸಾರಿಗೆ ಖರ್ಚುಗಳಿಗೆ ಎಂಬುದು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪ್ರತಿಕ್ರಿಯೆ. ಅದಕ್ಕೆ ಲಕ್ಷಗಟ್ಟಲೇ ಮೌಲ್ಯದ ನೋಟುಗಳ ಕಂತೆ ಬೇಕೆ ಎಂಬುದು ಬಿಜೆಪಿ ಪ್ರತಿಪ್ರಶ್ನೆ. ಶಾಸಕ ಬಿ ಎನ್ ವಿಜಯಕುಮಾರ್ ನೇತೃತ್ವದಲ್ಲಿ ಹೆಬ್ಬಾಳ್ಕರ್ ಅವರ ಹಣ ಹಂಚಿದ ವಿದ್ಯಮಾನಕ್ಕೆ ಸಂಬಂಧಿಸಿದಂತೆ ಬಿಜೆಪಿಯು ರಾಜ್ಯ ಚುನಾವಣಾ ಆಯೋಗದಲ್ಲಿ ದೂರನ್ನೂ ದಾಖಲಿಸಿದೆ.

ಏಪ್ರಿಲ್ 9ನೇ ತಾರೀಕಿನಂದು ಚುನಾವಣೆ ನಡೆಯಲಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾಗಿದೆ. ಹೀಗಾಗಿ ಎಲ್ಲ ಪಕ್ಷಗಳ ನಾಯಕರ ಪ್ರಚಾರ ಮಾತ್ರ ಜೋರಾಗಿರದೆ, ಕಾಂಚಾಣದ ಓಡಾಟವೂ ತೀವ್ರವಾಗಿದೆ. ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಹಠದಿಂದ ಮತದಾರರಿಗೆ ಹಣ, ಹೆಂಡ ಹಂಚುತ್ತಿದ್ದಾರೆ ಎಂಬುದು ಬಿಜೆಪಿಯವರ ಆರೋಪ. ಕೇವಲ ಆರೋಪ ಮಾಡಲಷ್ಟೇ ಸೀಮಿತವಾಗದ ಬಿಜೆಪಿ ಕಾರ್ಯಕರ್ತರು ತಂಡಗಳನ್ನು ರಚಿಸಿಕೊಂಡು ಕಾಂಗ್ರೆಸ್ ಪಕ್ಷದಿಂದ ಎಲ್ಲೆಲ್ಲಿ ಹಣ ಹಂಚಿಕೆ ಮಾಡುತ್ತಿರುವ ಮಾಹಿತಿ ಬರುತ್ತದೋ ಅಲ್ಲೆಲ್ಲ ದಾಳಿ ನಡೆಸಿ ಪೊಲೀಸರಿಗೆ ಹಿಡಿದುಕೊಡುವ ಕೆಲಸ ಮಾಡುತ್ತಿದ್ದಾರೆ.

ಅದೇ ರೀತಿ ದಿವಂಗತ ಮಾಜಿ ಸಚಿವ ಮಹದೇವ್ ಪ್ರಸಾದ್ ಅವರ ಮಾಜಿ ಆಪ್ತ ಕಾರ್ಯದರ್ಶಿ ಮಂಜು ಇನ್ನಿಬ್ಬರು ವ್ಯಕ್ತಿಗಳ ಜತೆ ಮತದಾರರಿಗೆ ಹಂಚಲು ₹ 4 ಲಕ್ಷ ಹಣ ತೆಗೆದುಕೊಂಡು ಹೋಗುತ್ತಿರುವುದನ್ನು ಬಿಜೆಪಿ ಕಾರ್ಯಕರ್ತರು ಬಯಲು ಮಾಡಿದ್ದಾರೆ. ಅಶ್ವಿನಿ ಲೇಔಟ್ ನಲ್ಲಿ ಮಂಜು ಅವರು ಹಣ ಹಂಚುವ ಬಗ್ಗೆ ಖಚಿತ ಮಾಹಿತಿ ಪಡೆದ ಬಿಜೆಪಿ ಕಾರ್ಯಕರ್ತರು ಅವರನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದರು. ಪೊಲೀಸರು ಇವರನ್ನು ಬಂಧಿಸಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ಮಂಜು ₹ 4 ಲಕ್ಷ ಹಣವನ್ನು ಹೊಂದಿದ್ದು, ಆ ಪೈಕಿ ₹ 2 ಲಕ್ಷ ಹಣ ಕಳ್ಳತನವಾಗಿದೆ. ಆದರೆ ಈ ಹಣಕ್ಕೆ ಸರಿಯಾದ ಲೆಕ್ಕ ಇಲ್ಲದ ಹಿನ್ನೆಲೆಯಲ್ಲಿ ಇವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಸಾಧ್ಯವಾಗಿಲ್ಲ.

ಇನ್ನು ಇಂತಹುದೇ ಮತ್ತೊಂದು ಪ್ರಕರಣದಲ್ಲಿ ಕರ್ನಾಟಕ ರಾಜ್ಯ ವಾಯುವ್ಯ ರಸ್ತೆ ಸಾರಿಗೆ ನಿರ್ದೇಶಕರ ಕಾರಿನಲ್ಲಿ ₹ 20 ಲಕ್ಷ ನಗದು ಪತ್ತೆಯಾಗಿದ್ದು, ಇದು ಸಹ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ವಿರುದ್ಧದ ಹಣ ಹಂಚಿಕೆ ಬಗ್ಗೆ ಬಿಜೆಪಿ ಮಾಡುತ್ತಿರುವ ಆರೋಪಗಳಿಗೆ ಈ ಪ್ರಕರಣಗಳು ಹೆಚ್ಚು ಪುಷ್ಟಿ ನೀಡುತ್ತಿವೆ.

Leave a Reply