ಚಿನ್ನಸ್ವಾಮಿಯಲ್ಲಿ ಅಭ್ಯಾಸ ಆರಂಭಿಸಿದ್ರು ಕೊಹ್ಲಿ-ಎಬಿಡಿ! ನಾಳಿನ ಪಂದ್ಯದಲ್ಲಿ ಆಡ್ತಾರಾ ಈ ಇಬ್ಬರು?

ಡಿಜಿಟಲ್ ಕನ್ನಡ ಟೀಮ್:

ಗಾಯದ ಸಮಸ್ಯೆಯಿಂದ ಪ್ರಸಕ್ತ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಕಣಕ್ಕಿಳಿಯದ ಆರ್ ಸಿಬಿ ತಂಡದ ತಾರಾ ಆಟಗಾರರಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಚಿನ್ನಸ್ವಾಮಿ ಅಂಗಣದಲ್ಲಿ ತಾಲೀಮು ಆರಂಭಿಸಿದ್ದಾರೆ. ಆ ಮೂಲಕ ಈ ಇಬ್ಬರೂ ಆಟಗಾರರು ಗುಣಮುಖರಾಗಿದ್ದು, ಮುಂದಿನ ಪಂದ್ಯದಲ್ಲಿ ಆಡುವ ಸೂಚನೆ ಕಂಡು ಬಂದಿವೆ.

ಆರಂಭಿಕ ಪಂದ್ಯದಲ್ಲಿ ಈ ಇಬ್ಬರು ಆಟಗಾರರ ಅನುಪಸ್ಥಿತಿ ತಂಡಕ್ಕೆ ಪ್ರಮುಖವಾಗಿ ಕಾಡಿತ್ತು. ಪರಿಣಾಮ ತಂಡ ಹಾಲಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನುಭವಿಸಿತ್ತು. ಈ ಇಬ್ಬರು ಆಟಗಾರರು ಅಭ್ಯಾಸ ಆರಂಭಿಸಿದ್ದು, ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಎಬಿಡಿ ಜತೆಗಿರುವ ಫೋಟೊ ಹಾಕಿಕೊಂಡಿದ್ದು, ‘ಶೀಘ್ರದಲ್ಲೇ ನಾವಿಬ್ಬರೂ ಕಣಕ್ಕಿಳಿಯಲಿದ್ದೇವೆ’ ಎಂದು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಆ ಮೂಲಕ ನಾಳೆ ತವರಿನ ಅಂಗಳದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆಡುವ ಸಾಧ್ಯತೆ ಹೆಚ್ಚಾಗಿದೆ. ಈ ಇಬ್ಬರು ಆಟಗಾರರು ಕಣಕ್ಕಿಳಿಯುವುದನ್ನು ಅಬಿಮಾನಿಗಳು ಕಾತುರಗೊಂಡಿದ್ದು, ತಂಡ ಮತ್ತೆ ಗೆಲುವಿನ ಲಯಕ್ಕೆ ಮರಳಲಿ ಎಂಬುದು ಅಭಿಮಾನಿಗಳ ನಿರೀಕ್ಷೆ.

ಈ ಹಿಂದೆ ಕೊಹ್ಲಿ ತಾವೂ ಸಂಪೂರ್ಣ ಪ್ರಮಾಣದಲ್ಲಿ ಗುಣಮುಖರಾಗುವವರೆಗೂ ಕಣಕ್ಕಿಳಿಯುವುದಿಲ್ಲ. ಗಾಯದ ವಿಚಾರದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದರು. ಮತ್ತೊಂದೆಡೆ ಎಬಿ ಡಿವಿಲಿಯರ್ಸ್ ಈ ಬಾರಿ ತಾವು ವಿಕೆಟ್ ಕೀಪಿಂಗ್ ಮಾಡುವುದಿಲ್ಲ ಅಂತಲೂ ಸ್ಪಷ್ಟನೆ ನೀಡಿದ್ದಾರೆ. ಆ ಮೂಲಕ ಕೆ.ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಕೇದಾರ್ ಜಾಧವ್ ಅವರೇ ಮುಂದುವರಿಸುವುದು ಖಚಿತವಾಗಿದೆ.

Leave a Reply