ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ‘ಭಗವಾನ್ ಮಹಾವೀರ ಶಾಂತಿ’ ಹಾಗೂ ಡಾ.ಮಲ್ಲಿಕಾ ಘಂಟಿ ಅವರಿಗೆ ‘ಅಕ್ಕಮಹಾದೇವಿ’ ಪ್ರಶಸ್ತಿ

ಡಿಜಿಟಲ್ ಕನ್ನಡ ಟೀಮ್:

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇದೇ ಮೊದಲ ಬಾರಿಗೆ ನೀಡಲಾಗುತ್ತಿರುವ ಶ್ರೀ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಗೆ ಡಾ.ಶಿವಕುಮಾರ ಸ್ವಾಮೀಜಿಯವರನ್ನು ಹಾಗೂ ಅಕ್ಕಮಹಾದೇವಿ ಪ್ರಶಸ್ತಿಗೆ ಡಾ.ಮಲ್ಲಿಕಾ ಘಂಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಚಿವೆ ಉಮಾಶ್ರೀ ಹೇಳಿದ್ದಾರೆ.

‘110 ವರ್ಷಗಳನ್ನು ಪೂರೈಸಿರುವ ಶಿವಕುಮಾರ ಸ್ವಾಮೀಜಿಗಳು ಸಿದ್ದಗಂಗೆ ಪೀಠದ ನೇತೃತ್ವ ವಹಿಸಿಕೊಂಡು ತ್ರಿವಿಧ ದಾಸೋಹದಿಂದ ಜಾತಿ, ಮತ, ಪಂಥಗಳ ಬೇಧವಿಲ್ಲದೇ ಅಕ್ಷರ, ವಸತಿ ಮತ್ತು ಅನ್ನದಾಸೋಹದ ಕೇಂದ್ರವನ್ನಾಗಿ ಬೆಳೆಸಿದರು. ಗ್ರಾಮೀಣ ಮಕ್ಕಳಿಗೆ ವಿಶೇಷ ಆದ್ಯತೆ ನೀಡಿ ಅವರ ಬದುಕು ರೂಪಿಸುವಲ್ಲಿ ಶ್ರೀಗಳ ಪಾತ್ರ ಅಸಮಾನ್ಯವಾದದ್ದು. ಅವರ ಈ ಸೇವೆಯನ್ನು ಪರಿಗಣಿಸಿ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.’

ಡಾ.ಮಲ್ಲಿಕಾ ಘಂಟಿ

‘ಇನ್ನು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಅಗಸಬಾಳುವಿನಲ್ಲಿ ಹುಟ್ಟಿದ ಡಾ.ಮಲ್ಲಿಕಾ ಘಂಟಿ ತಮ್ಮ ವಿಶಿಷ್ಟ ಬರಹಗಳ ಮೂಲಕ ಗುರುತಿಸಿಕೊಂಡವರು. ಕವಿತೆ, ವಿಮರ್ಶೆ, ನಾಟಕ, ಜೀವನ ಚರಿತ್ರೆ ಮುಂತಾದ ಎಲ್ಲಾ ಸಾಹಿತ್ಯ ಪ್ರಾಕಾರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ತುಳಿಯದಿರಿ ನನ್ನ, ಈ ಹೆಣ್ಣುಗಳೇ ಹೀಗೆ, ರೊಟ್ಟಿ ಮತ್ತು ಹುಡುಗಿ, ಬೆಲ್ಲದಚ್ಚು ಮತ್ತು ಇರುವೆ ದಂಡು ಎಂಬ ಕವನ ಸಂಕಲನಗಳು ಇವರಿಗೆ ಹೆಸರು ತಂದುಕೊಟ್ಟಿವೆ. ಸಾಹಿತ್ಯದ ಜತೆಗೆ ದಲಿತ ಬಂಡಾಯ ಚಳುವಳಿ ಸೇರಿದಂತೆ ಜನಪರ ಹೋರಾಟಗಳಲ್ಲಿ ಇವರು ಗುರುತಿಸಿಕೊಂಡಿದ್ದಾರೆ. ಇವರ ಮಹಿಳಾ ಸಂವೇದನಾ ಪರವಾದ ಚಿಂತನೆ ಮತ್ತು ಹೋರಾಟಗಳು ಶಿವಶರಣೆಯರ ಆಶಯಗಳಿಗೆ ಅನುಗುಣವಾಗಿದೆ ಎಂದು ಪರಿಗಣಿಸಿ ಪ್ರಶಸ್ತಿ ಆಯ್ಕೆ ಸಮಿತಿ ಅಕ್ಕಮಹಾದೇವಿ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಿದೆ’ ಎಂದು ಇಲಾಖೆ ವತಿಯಿಂದ ಬಿಡುಗಡೆ ಮಾಡಲಾಗಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಶ್ರೀ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಯನ್ನು ಇದೇ ತಿಂಗಳು 9ರಂದು ನಡೆಯಲಿರುವ ಮಹಾವೀರ ಜಯಂತಿ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು. ಇನ್ನು ಇದೇ ತಿಂಗಳು 11ರಂದು ನಡೆಯಲಿರುವ ಅಕ್ಕಮಹಾದೇವಿ ಜಯಂತಿ ಸಂದರ್ಭದಲ್ಲಿ ಮಲ್ಲಿಕಾ ಘಂಟಿ ಅವರಿಗೆ ಪ್ರಶಸ್ತಿ ನೀಡಲಾಗುವುದು. ಇದೇ ಮೊದಲ ಬಾರಿಗೆ ಈ ಎರಡು ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಈ ಪ್ರಶಸ್ತಿಗಳು ತಲಾ ₹ 3 ಲಕ್ಷ ನಗದು ಹಾಗೂ ಸ್ಮರಣ ಫಲಕಗಳನ್ನು ಒಳಗೊಂಡಿದೆ.

Leave a Reply