ತಲೆಗವಸು ಧರಿಸದೇ ಸೌದಿಗೆ ಭೇಟಿ ನೀಡಿದ ಬ್ರಿಟನ್ ಪ್ರಧಾನಿ ಥೆರೆಸ್ಸಾ ಮೇ, ಇಸ್ಲಾಂ ಸಾಮ್ರಾಜ್ಯಕ್ಕೆ ನೀಡುತ್ತಿರುವ ಸಂದೇಶ ಏನು?

ಡಿಜಿಟಲ್ ಕನ್ನಡ ಟೀಮ್:

ಇಸ್ಲಾಂ ಸಂಪ್ರದಾಯಬದ್ಧ ದೇಶ ಸೌದಿ. ಇಲ್ಲಿಗೆ ಯಾರೇ ಭೇಟಿ ನೀಡಿದರೂ ಆ ದೇಶ ರೀತಿ ರಿವಾಜು ಪಾಲಿಸುವುದು ಸಹಜ. ಆ ಪೈಕಿ ಆ ದೇಶಕ್ಕೆ ತೆರಳುವ ಮಹಿಳೆಯರು ತಲೆಗವಸು ಧರಿಸುವುದು ಒಂದು. ಆದರೆ ಮೊನ್ನೆಯಷ್ಟೇ ಬ್ರಿಟನ್ ಪ್ರಧಾನಿ ಥೆರೆಸ್ಸಾ ಮೇ ಸೌದಿ ಅರೆಬಿಯಾಗೇ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ತಲೆಗವಸು ಧರಿಸಲು ನಿರಾಕರಿಸಿದ್ದಾರೆ.

ರಾಜರ ಆಡಳಿತದಲ್ಲಿರುವ ಸೌದಿಯಲ್ಲಿ ಇಸ್ಲಾಂ ಸಂಪ್ರದಾಯ ಪಾಲನೆ ಬಹಳ ಕಟ್ಟು ನಿಟ್ಟಾಗಿದೆ. ಈ ಸಂದರ್ಭದಲ್ಲಿ ಥೆರೆಸ್ಸಾ ಮೇ, ತಲೆಗವಸು ಧರಿಸದೇ, ತಮ್ಮ ಕೂದಲನ್ನು ಬಿಟ್ಟು ಅಧಿಕಾರಿಗಳನ್ನು ಭೇಟಿ ಮಾಡುವುದರ ಜತೆಗೆ ಸಾರ್ವನಿಕವಾಗಿ ಕಾಣಿಸಿಕೊಂಡು ಸುದ್ದಿ ಮಾಡಿದ್ದಾರೆ.

ಈ ವಿಚಾರದ ಬಗ್ಗೆ ಬ್ರಿಟೀಷ್ ಸರ್ಕಾರದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ‘ಇದು ಮೇ ಅವರ ವೈಯಕ್ತಿಕ ನಿರ್ಧಾರ’ ಎಂದು ಹೇಳಿದ್ದರೆ, ಮೇ ಜತೆಗೆ ಸೌದಿಗೆ ಭೇಟಿ ಮಾಡಿರುವ ಮೂಲಗಳ ಪ್ರಕಾರ ಮೇ ಅವರು ಉದ್ದೇಶಪೂರ್ವಕವಾಗಿಯೇ ಈ ನಿಯಮ ಪಾಲಿಸಲು ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.

ಸೌದಿ ಅರೆಬಿಯಾದಲ್ಲಿನ ಮಹಿಳೆಯರಿಗೆ ಇನ್ನಷ್ಟು ಸ್ವಾತಂತ್ರ್ಯ ಸಿಗಬೇಕಿದೆ. ಗೌರವ ವಿಷಯದಲ್ಲಿ ಅಲ್ಲಿನ ಮಹಿಳೆಯರಿಗೆ ಪುರುಷರಷ್ಟೇ ಸಮಾನತೆ ಇದ್ದರೂ ಪಾಶ್ಚಿಮಾತ್ಯ ರಾಷ್ಟ್ರಗಳ ಮಹಿಳೆಯರು ಅನುಭವಿಸುವ ಸ್ವಾತಂತ್ರ್ಯ ಅವರಿಗೆ ಇಲ್ಲವಾಗಿದೆ. ಉದಾಹರಣೆಗೆ ಸೌದಿಯಲ್ಲಿ ಮಹಿಳೆಯರು ಕಾರು ಓಡಿಸುವಂತಿಲ್ಲ. ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಮೇ ಅಭಿಪ್ರಾಯ ಪಟ್ಟಿದ್ದು ಈ ಬಗ್ಗೆ ಸಂದೇಶ ರವಾನಿಸುವ ಉದ್ದೇಶದಿಂದ ತಲೆಗವಸು ಧರಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

1985 ಬ್ರಿಟನ್ನಿನ ಮೊದಲ ಮಹಿಳಾ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಸೌದಿಗೆ ಭೇಟಿ ನೀಡಿದ್ದಾಗ ಅವರು ತಲೆಗೆ ಟೋಪಿ, ಕೈ ಹಾಗೂ ಪಾದಗಳು ಕಾಣಿಸದಂತೆ ಬಟ್ಟೆ ಧರಿಸಿ ಅಲ್ಲಿನ ಸಂಪ್ರದಾಯಕ್ಕೆ ಮನ್ನಣೆ ನೀಡಿದ್ದರು. ಆದರೆ ಈಗ ಥೆರೆಸ್ಸಾ ಮೇ ಇದಕ್ಕೆ ವಿರುದ್ಧವಾದ ನಡೆಯಿಂದ ಗಮನ ಸೆಳೆದಿದ್ದಾರೆ.

ಅಷ್ಟೇ ಅಲ್ಲ, ಮಾತುಕತೆ ವೇಳೆ ಸೌದಿ ಅರೇಬಿಯಾದಲ್ಲಿ ಆಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ವಿಷಯವನ್ನು ಪ್ರಸ್ತಾಪಿಸಿರುವುದಾಗಿ ಹೇಳಿದ್ದಾರೆ ಬ್ರಿಟನ್ ಪ್ರಧಾನಿ.

Leave a Reply