ಮ್ಯಾಕ್ಸ್ ವೆಲ್ ಮಿಂಚಿನ ಬ್ಯಾಟಿಂಗ್, ಪುಣೆಗೆ ಸೋಲಿನ ಶಾಕ್!

ಡಿಜಿಟಲ್ ಕನ್ನಡ ಟೀಮ್:

ತಂಡ ಸೋಲಿನತ್ತ ಸಾಗುವಂತಹ ಪರಿಸ್ಥಿತಿಯಲ್ಲಿ ಕ್ರೀಸಿಗೆ ಇಳಿದ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಗ್ಲೆನ್ ಮ್ಯಾಕ್ಸ್ ವೆಲ್ ತಮ್ಮ ಮಿಂಚಿನ ಬ್ಯಾಟಿಂಗ್ ಮೂಲಕ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ.

ಇಂದೋರಿನ ಹೋಲ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಕಿಂಗ್ಸ್ ಇಲೆವೆನ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪುಣೆ ಸ್ಟೋಕ್ಸ್ (50 ರನ್, 32 ಎಸೆತ), ಮನೋಜ್ ತಿವಾರಿ (ಅಜೇಯ 40, 23 ಎಸೆತ), ಸ್ಮಿತ್ (26 ರನ್, 27 ಎಸೆತ) ಅವರ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 163 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್ ಮ್ಯಾಕ್ಸ್ ವೆಲ್ (ಅಜೇಯ 44, 20 ಎಸೆತ), ಮಿಲ್ಲರ್ (ಅಜೇಯ 30, 27 ಎಸೆತ) ಹಾಗೂ ಆಮ್ಲಾ (28 ರನ್, 27 ಎಸೆತಗಳ) ಅವರ ಬ್ಯಾಟಿಂಗ್ ನಿಂದ 19 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 164 ರನ್ ದಾಖಲಿಸಿ ಗೆಲುವಿನ ನಗೆ ಬೀರಿತು.

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡ ಆರಂಭಿಕ ಆಘಾತ ಅನುಭವಿಸಿತು. ನಂತರ ಬಂದ ಬ್ಯಾಟ್ಸ್ ಮನ್ ಗಳು ನಿರೀಕ್ಷಿತಮಟ್ಟದಲ್ಲಿ ರನ್ ಗಳಿಸದ ಪರಿಣಾಮ ರನ್ ರೇಟ್ ಹಂತ ಹಂತವಾಗಿ ಹೆಚ್ಚಿತು. ಪಂದ್ಯದ ಮಹತ್ವದ ಘಟ್ಟದಲ್ಲಿ ಕಣಕ್ಕಿಳಿದ ಮ್ಯಾಕ್ಸ್ ವೆಲ್ 2 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಬಾರಿಸಿ ತಂಡವನ್ನು ಜಯದ ದಡ ಸೇರಿಸಿದರು.

ಈ ಪಂದ್ಯ ಗೆದ್ದುಕೊಳ್ಳುವ ಮೂಲಕ ಪಂಜಾಬ್ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿದರೆ, ಆರಂಭಿಕ ಪಂದ್ಯದಲ್ಲಿ ಜಯ ಸಾಧಿಸಿ ಬೀಗುತ್ತಿದ್ದ ಪುಣೆ ತಂಡಕ್ಕೆ ಸೋಲಿನ ಆಘಾತ ಎದುರಾಗಿದೆ. ಇನ್ನು ಪಂದ್ಯದಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಮ್ಯಾಕ್ಸ್ ವೆಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Leave a Reply