ಜೆಡಿಎಸ್ ಗೆ ಜಿಗಿತಿದ್ದಾರೆ ಸುರೇಶ್ ಗೌಡ- ಶಿವರಾಮೆಗೌಡ! ಇದು ಚೆಲುವರಾಯಸ್ವಾಮಿಗೆ ತಿರುಗೇಟು ನೀಡುವ ಪ್ರಯತ್ನವೇ?

ಕಾಂಗ್ರೆಸ್ ಪಕ್ಷದ ಸುರೇಶ್ ಗೌಡ ಹಾಗೂ ಶಿವರಾಮೆಗೌಡ ಅವರು ಜೆಡಿಎಸ್ ಮುಖಂಡ ಎಚ್.ಡಿ ದೇವೇಗೌಡ ಅವರನ್ನು ಭೇಟಿ ಮಾಡಿದ ಸಂದರ್ಭ…

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗಷ್ಟೇ ಜೆಡಿಎಸ್ ವರಿಷ್ಠ ದೇವೇಗೌಡ್ರು ‘ಉಪಚುನಾವಣೆಗಳ ನಂತರ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನವಾಗಲಿದ್ದು, ರಾಜಕೀಯ ನಾಯಕರ ಪಕ್ಷಾಂತರ ಪರ್ವ ಜೋರಾಗಿ ನಡೆಯಲಿದೆ’ ಎಂದು ಭವಿಷ್ಯ ನುಡಿದಿದ್ರು. ಅವರ ಈ ಮಾತಿಗೆ ಪುಷ್ಠಿ ನೀಡುವಂತೆ ಶನಿವಾರ ಕಾಂಗ್ರೆಸ್ ನಾಯಕರಾದ ಸುರೇಶ್ ಗೌಡ ಹಾಗೂ ಶಿವರಾಮೆಗೌಡ ಅವರು ದೇವೇಗೌಡರನ್ನು ಭೇಟಿ ಮಾಡಿ ಜೆಡಿಎಸ್ ಸೇರ್ಪಡೆಯಾಗುವ ಬಗ್ಗೆ ಚರ್ಚೆ ನಡೆಸಿದ್ದಾರೆ.

ವರದಿಗಳ ಪ್ರಕಾರ ದೇವೇಗೌಡರು ಈ ಇಬ್ಬರು ನಾಯಕರ ಸೇರ್ಪಡೆಗೆ ಸಮ್ಮತಿ ಸೂಚಿಸಿದ್ದು, ಇದೇ ತಿಂಗಳು 10ರಂದು ಜೆಡಿಎಸ್ ಸೇರುವ ಬಗ್ಗೆ ಮಾಹಿತಿ ಬಂದಿದೆ. ಈ ಬೆಳವಣಿಗೆಯನ್ನು ನಾಗಮಂಗಲ ಶಾಸಕ ಹಾಗೂ ಮಾಜಿ ಸಚಿವ ಚೆಲುವರಾಯ ಸ್ವಾಮಿ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ನಿರ್ಧಾರ ಉಲ್ಲಂಘಿಸಿ ವಿರುದ್ಧ ದಿಕ್ಕಿನಲ್ಲಿ ಹೆಜ್ಜೆ ಇಟ್ಟು ಪಕ್ಷದ ನಾಯಕರಿಗೆ ಸೆಡ್ಡು ಹೊಡೆದಿದ್ದಕ್ಕಾಗಿ ಈ ಇಬ್ಬರು ಕಾಂಗ್ರೆಸ್ ನಾಯಕರನ್ನು ಸೆಳೆದುಕೊಳ್ಳುವ ಮೂಲಕ ಈ ಪರೋಕ್ಷವಾಗಿ ಪೆಟ್ಟು ನೀಡುವ ಪ್ರಯತ್ನ ದೇವೇಗೌಡರದ್ದು ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್ ಪಕ್ಷದಲ್ಲಿ ನಮ್ಮನ್ನು ಕಡೆಗಣಿಸಲಾಗಿದೆ ಎಂದು ಸುರೇಶ್ ಗೌಡರು ಆರೋಪಿಸಿದ್ದು, ‘ಯಾವುದೇ ಷರತ್ತುಗಳನ್ನು ಹಾಕದೇ ಜೆಡಿಎಸ್ ಸೇರುತ್ತಿದ್ದೇನೆ’ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ ವಿಧಾನಸಭೆ ಚುನಾವಣೆಯಲ್ಲಿ ನಾಗಮಂಗಲದಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೌದು ನಾಗಮಂಗಲದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸುವ ನಿರೀಕ್ಷೆ ಇದೆ’ ಎಂದಿದ್ದಾರೆ. ಇನ್ನು ಶಿವರಾಮೆಗೌಡ ಅವರು, ‘ರಾಜ್ಯದ ನೆಲ, ಜಲ ಸಂರಕ್ಷಣೆಗೆ ಸ್ಥಳೀಯ ಪಕ್ಷದ ಅಗತ್ಯವಿದೆ. ಹೀಗಾಗಿ ನಾವು ಜೆಡಿಎಸ್ ಸೇರುತ್ತಿದ್ದೇವೆ. ಹಲವು ದಿನಗಳಿಂದ ಜೆಡಿಎಸ್ ಸೇರ್ಪಡೆ ಬಗ್ಗೆ ಜೆಡಿಎಸ್ ನಾಯಕರಾದ ಎಚ್.ಡಿ ಕುಮಾರಸ್ವಾಮಿ, ಸಂಸದ ಪುಟ್ಟರಾಜು ಅವರ ಜತೆ ಚರ್ಚಿಸಿದ್ದೇವೆ. ನಾನು ಬಿಜೆಪಿ ಸೇರುತ್ತಿಲ್ಲ ಎಂಬುದನ್ನು ಮತ್ತೆ ಸ್ಪಷ್ಟಪಡಿಸುತ್ತಿದ್ದು, ಕಾಂಗ್ರೆಸ್ ಪಕ್ಷ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ನನಗೆ ಯಾವುದೇ ಟಿಕೆಟ್ ನೀಡುವುದು ಬೇಡ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರಿಗೆ ಬೇಕಾದವರಿಗೆ ಟಿಕೆಟ್ ನೀಡಲಿ’ ಎಂದಿದ್ದಾರೆ.

ಒಟ್ಟಿನಲ್ಲಿ ಚೆಲುವರಾಯಸ್ವಾಮಿ ಅವರನ್ನು ಪಕ್ಷದಿಂದ ಹೊರಹಾಕಿದ ನಂತರ ಅವರ ಬದಲಿಗೆ ಅದೇ ಕ್ಷೇತ್ರದ ಇಬ್ಬರು ನಾಯಕರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ಜೆಡಿಎಸ್ ಬಂಡಾಯ ಶಾಸಕರಿಗೆ ಬಿಸಿ ಮುಟ್ಟಿಸುತ್ತಿದೆ.

Leave a Reply