ಭಾರತದ ಮೇಜರ್ ಹಾಗೂ ಬಾಂಗ್ಲಾ ಪ್ರಧಾನಿ: ಈ ಚಿತ್ರ ಪ್ರತಿನಿಧಿಸುವ ರೋಚಕ ಕತೆ ಗೊತ್ತೇ?

ಡಿಜಿಟಲ್ ಕನ್ನಡ ವಿಶೇಷ:

ಶನಿವಾರ ದೆಹಲಿಯಲ್ಲಿ ನಡೆದ ಯೋಧರನ್ನು ನಮಿಸುವ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ನಿವೃತ್ತ ಮೇಜರ್ ತಾರಾ ಅವರು ವಿಶೇಷ ಆಹ್ವಾನಿತರಾಗಿದ್ದರು. ಪ್ರಧಾನಿ ಮೋದಿ ಮಾತುಗಳಲ್ಲೂ ಇವರ ವಿಶೇಷ ಪ್ರಸ್ತಾಪವಾಯಿತು. 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಬಂಗಬಂಧು ಮುಜಿಬುರ್ ರೆಹ್ಮಾನರ ಕುಟುಂಬವನ್ನು ರಕ್ಷಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ಇತಿಹಾಸದ ಆ ಮಹತ್ತರ ಗಳಿಗೆಯಲ್ಲಿ ಮೇಜರ್ ತಾರಾ ಮತ್ತವರ ತಂಡದ ಉಪಸ್ಥಿತಿ ಆ ಕ್ಷಣದಲ್ಲಿ ಅಲ್ಲಿರದಿದ್ದರೆ ಮುಜಿಬುರ್ ಮಗಳು ಹಸೀನಾರ ಜೀವವೇ ಉಳಿಯುತ್ತಿರಲಿಲ್ಲ. ಹಾಗೆಂದೇ ಇಂದು ಮೋದಿ, ಮೋಜರ್ ತಾರಾ, ಶೇಖ್ ಹಸೀನಾ ಎಲ್ಲ ಜತೆಯಾಗಿ ತೆಗೆಸಿಕೊಂಡ ಚಿತ್ರಕ್ಕೆ ಆಮಟ್ಟಿಗಿನ ಭಾವನಾತ್ಮಕ ಮಹತ್ವವಿದೆ.

ಅವತ್ತು ಆಗಿದ್ದಿಷ್ಟು…

1971ರ ಡಿಸೆಂಬರ್ ಎರಡನೇ ವಾರದಲ್ಲಿ ಪಾಕಿಸ್ತಾನವು ಬಾಂಗ್ಲಾ ಯುದ್ಧವನ್ನೇನೋ ಸೋತಿತ್ತು. ಆದರೆ ಮುಜಿಬುರ್ ಕುಟುಂಬವನ್ನು ಧನಮಂಡಿಯ ಮನೆಯೊಂದರಲ್ಲಿ ಒತ್ತೆಯಿಡಲಾಗಿತ್ತು. ಹಸೀನಾ ಸೇರಿದಂತೆ ಎಲ್ಲರನ್ನೂ ಮುಗಿಸಿಬಿಡಬೇಕೆಂಬ ಸಂದೇಶ ಆಗಲೇ ರವಾನೆ ಆಗಿತ್ತು. ಅದನ್ನು ಪಾಕ್ ಯೋಧರು ಇನ್ನೇನು ಅನುಷ್ಠಾನಕ್ಕೆ ತರುವಷ್ಟರಲ್ಲೇ ಅಲ್ಲಿಗೆ ತಲುಪಿದ್ದ ಭಾರತೀಯ ಸೇನೆಯ ಮೇಜರ್ ಅಶೋಕ್ ತಾರಾ, ಆ ಅಳಿದುಳಿದ ಸೈನಿಕರಿಗೆ ಪಾಕಿಸ್ತಾನವು ಶರಣಾಗಿರುವ ಸುದ್ದಿ ತಿಳಿಸಿ, ಬಂದ ಕಾರ್ಯವನ್ನು ಅಲ್ಲಿಗೇ ಬಿಟ್ಟು ತೆರಳಿದರೆ ನಿಮಗೆ ಬೇರೆ ಯುದ್ಧಾಪರಾಧಿಗಳ ಜತೆ ಶಿಕ್ಷೆ ಆಗುವುದಿಲ್ಲ ಅಂತ ಎಚ್ಚರಿಸಿ ಮನದಟ್ಟು ಮಾಡುವಲ್ಲಿ ಯಶಸ್ವಿಯಾದರು. ಹಾಗವತ್ತು ಮುಜಿಬುರ್ ರೆಹಮಾನ್ ಕುಟುಂಬವನ್ನು ರಕ್ಷಿಸಿ, ಮುಂದಿನ ಬಾಂಗ್ಲಾ ರಾಜಕೀಯ ನೇತಾರಿಕೆಯಲ್ಲಿ ಪಾಲ್ಗೊಳ್ಳುವ ಅವಕಾಶ ಹಸಿಯಾಗಿಟ್ಟ ಶ್ರೇಯಸ್ಸು ಭಾರತಕ್ಕೇ ಸಲ್ಲುತ್ತದೆ. ಅವತ್ತು ಭಾರತೀಯ ಸೇನಾ ಸಮವಸ್ತ್ರದಲ್ಲಿರುವರ ಆಗಮನವಾಗುತ್ತಲೇ ಜೀವ ಖಾತ್ರಿಯಾಗಿ, ಹರ್ಷೋದ್ವೇಗಕ್ಕೆ ಒಳಗಾದ ಮುಜಿಬುರ್ ರೆಹಮಾನ್ ಪತ್ನಿ ಬೇಗಂ ಮುಜಿಬುರ್, ಆ ಮನೆಯ ಟೆರೇಸ್ ಹತ್ತಿ ಅಲ್ಲಿದ್ದ ಪಾಕಿಸ್ತಾನದ ಧ್ವಜವನ್ನು ಸೆಳೆದು ಕಾಲಡಿ ತುಳಿದು, ‘ಜೊಯ್ ಬಾಂಗ್ಲಾ’ ಎಂದು ಕೂಗುತ್ತಾಳೆ. ನೀನು ನನ್ನ ಮಗನೇ ಕಣಪ್ಪಾ ಅಂತ ಮೇಜರ್ ಅಶೋಕ್ ತಾರಾರನ್ನು ಆಲಂಗಿಸಿಕೊಂಡ ಆ ತಾಯಿ, ಮುಜಿಬುರ್ ರೆಹಮಾನ್ ಪಾಕಿಸ್ತಾನದ ಜೈಲಿನಿಂದ ವಾಪಸಾಗುವವರೆಗೆ ತಮ್ಮ ಜತೆಯೇ ಇರತಕ್ಕದು ಎಂದು ಪ್ರೀತಿಯ ತಾಕೀತು ಹೊರಡಿಸುತ್ತಾಳೆ…

ಹಾಗೊಂದು ಭಾವಬಂಧ ಇಂದಿಗೂ ಮುಂದುವರಿದಿದೆ.

Leave a Reply