ಮೋದಿ ಮಾತಾಡುತ್ತಿದ್ದರೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾರ ಕಣ್ಣುಗಳು ಹನಿಗೂಡಿದ್ದವು!

ಡಿಜಿಟಲ್ ಕನ್ನಡ ಟೀಮ್:

ನಾಲ್ಕು ದಿನಗಳ ಭಾರತ ಭೇಟಿಯಲ್ಲಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಶನಿವಾರ ನಡೆದ ಮಾತುಕತೆಯಲ್ಲಿ ಸುಮಾರು 22 ಒಪ್ಪಂದಗಳಿಗೆ ಸಹಿ ಬಿದ್ದಿದ್ದು, ಬಾಂಗ್ಲಾ ಮಿಲಿಟರಿಗೆ ಭಾರತ ನೆರವು ಘೋಷಿಸಿರುವುದು ಇವೆಲ್ಲ ಮುಖ್ಯಾಂಶಗಳೇ.

ಈ ಎಲ್ಲ ಅಂಕಿಅಂಶಗಳನ್ನು ಮೀರಿದ ಭಾವನಾತ್ಮಕ ಸಮಾರಂಭವೊಂದಕ್ಕೆ ಭಾರತ ಸಾಕ್ಷಿಯಾಯಿತು. 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಭಾರತೀಯ ವೀರರನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮ ದೆಹಲಿಯ ಮಾಣೆಕ್ ಶಾ ಕೇಂದ್ರದಲ್ಲಿ ನಡೆಯಿತು. ಬಾಂಗ್ಲಾ ವಿಮೋಚನೆ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಕುಟುಂಬವನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಬಾಂಗ್ಲಾದೇಶವನ್ನು ವಿಮೋಚನೆಗೊಳಿಸಿದ ಭಾರತೀಯ ಸೈನಿಕರಿಗೆ, ಹುತಾತ್ಮ ಸೈನಿಕರ ಕುಟುಂಬಗಳಿಗೆ ಸದಾ ಕೃತಜ್ಞ ಎಂದರು ಶೇಖ್ ಹಸೀನಾ.

ಅವತ್ತು ಹಸೀನಾರ ಕುಟುಂಬವನ್ನು ರಕ್ಷಿಸಿದ್ದ ಮೇಜರ್ ಜನರಲ್ ತಾರಾ ಅವರು ಕಾರ್ಯಕ್ರಮದಲ್ಲಿ ಮಿಲಿಟರಿ ಪೋಷಾಕಿನಲ್ಲಿ ಹಾಜರಿದ್ದದ್ದು ಭಾವವೀಣೆಯೊಂದನ್ನು ಮೀಟುವಂತಿತ್ತು. ಪ್ರಧಾನಿ ಮೋದಿ ಸಹ ತಮ್ಮ ಮಾತಿನಲ್ಲಿ ‘ಅಂದು ಯುದ್ಧದಲ್ಲಿ ಹಸೀನಾ ಕುಟುಂಬವನ್ನು ರಕ್ಷಿಸಿದವರು ಮೇಜರ್ ತಾರಾ. ಈ ಸಂದರ್ಭದಲ್ಲಿ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ’ ಎಂದಾಗ, ನಿವೃತ್ತ ಯೋಧ ಸಭೆ ಮಧ್ಯೆ ಎದ್ದುನಿಂತು ಚಪ್ಪಾಳೆ ಸ್ವೀಕರಿಸಿದರು.

‘ಹಸೀನಾ ಕುಟುಂಬದ 16 ಮಂದಿ ಯುದ್ಧದಲ್ಲಿ ಬಲಿಯಾಗಿಹೋಗಿದ್ದರು. ಆದರೆ ಇವರು ಮಾತ್ರ ಸೋನಾರ್ ಬಾಂಗ್ಲಾ ಕನಸಿನ ಸಾಕಾರಕ್ಕೆ ಅಚಲವಾಗಿ ನಿಂತರು’ ಎಂದು ಪ್ರಧಾನಿ ಮೋದಿ ಪ್ರಶಂಸೆಯ ಮಾತನಾಡಿದಾಗ ಶೇಖ್ ಹಸೀನಾರ ಕಣ್ಣುಗಳಲ್ಲಿ ನೀರು ಜಿನುಗಿತ್ತು.

ಹಸೀನಾ ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರ ಹೋರಾಟವನ್ನೂ ಮೋದಿ ತಮ್ಮ ಮಾತುಗಳಲ್ಲಿ ವರ್ಣಿಸಿದರು.

ಬಾಂಗ್ಲಾದೇಶದ ವಿಷಯದಲ್ಲಿ ಭಾರತವು ದೊಡ್ಡಣ್ಣ ಎಂಬಂಥ ಭಾವ ತಾಳದೇ, ಮಾತಿನುದ್ದಕ್ಕೂ ಆ ದೇಶವನ್ನು ಮೋದಿ ಪ್ರಶಂಸಿಸಿದ ರೀತಿ ಅನನ್ಯವಾಗಿತ್ತು. ‘ಆಯಸ್ಸು ದರ, ಶಿಶುಮರಣ ಪ್ರಮಾಣದಲ್ಲಿ ಇಳಿಕೆ ಇತ್ಯಾದಿ ವಿಷಯಗಳಲ್ಲಿ ಭಾರತಕ್ಕೂ ಮಾದರಿಯಾಗುವಂಥ ಅಂಕಿಅಂಶಗಳನ್ನು ಬಾಂಗ್ಲಾದೇಶ ಹೊಂದಿದೆ. ಶೇಖ್ ಹಸೀನಾರ ನಾಯಕತ್ವದಲ್ಲಿ ಅಭಿವೃದ್ಧಿಗಾಥೆ ತೆರೆದುಕೊಳ್ಳುತ್ತಿದೆ. ಇದಕ್ಕೆ ಒಬ್ಬ ಸ್ನೇಹಿತನಾಗಿ ಏನೆಲ್ಲ ಸಹಕಾರ ಮಾಡಬೇಕೋ ಅದನ್ನು ಭಾರತ ಮಾಡುತ್ತದೆ’ ಎಂದರು ಮೋದಿ.

ಅಲ್ಲದೇ ತಮ್ಮ ಜನಪ್ರಿಯ ಬ್ರಾಂಡ್ ವಾಕ್ಯ- ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಜಳಪಳಿಸುವುದಕ್ಕೂ ಮೋದಿ ಮರೆಯಲಿಲ್ಲ. ಎಲ್ಲರ ವಿಕಾಸವೆಂದರೆ ಕೇವಲ ಭಾರತೀಯರದ್ದಷ್ಟೇ ಅಲ್ಲ ನೆರೆ ರಾಷ್ಟ್ರಗಳ ಶಾಂತಿ-ಸಮೃದ್ಧಿಯೂ ಭಾರತದ ಉದ್ದೇಶವಾಗಿದೆ ಎಂದರು. ಈ ಹಂತದಲ್ಲಿ ಪರೋಕ್ಷವಾಗಿ ಪಾಕಿಸ್ತಾನವನ್ನು ಹಣಿಯುವುದಕ್ಕೂ ಮೋದಿ ಮರೆಯಲಿಲ್ಲ. ನಮ್ಮೆಲ್ಲ ಸಹಕಾರದ ಹೊರತಾಗಿಯೂ ದಕ್ಷಿಣ ಏಷ್ಯದಲ್ಲಿ ವಿಕಾಸವಲ್ಲದೇ ವಿನಾಶವನ್ನು ನಂಬಿರುವ, ಮಾನವತೆಯನ್ನಲ್ಲದೇ ಉಗ್ರವಾದ ಪ್ರೇರೇಪಿಸುವವರು ಉಳಿದುಹೋಗಿದ್ದಾರೆ ಎಂದು ಕುಟುಕಿದರು ಮೋದಿ.

ಇದಕ್ಕೂ ಮೊದಲು ಹೈದರಾಬಾದ್ ಹೌಸ್ ನಲ್ಲಿ 22 ಒಪ್ಪಂದಗಳಿಗೆ ಸಹಿ ಬಿತ್ತು. ಎಲ್ಲರೂ ನಿರೀಕ್ಷಿಸಿದ್ದ ತೀಸ್ತಾ ನದಿ ನೀರು ಹಂಚಿಕೆ ವಿಷಯದಲ್ಲಿ ಮಾತ್ರ ಯಾವ ತೀರ್ಮಾನವೂ ಆಗಿಲ್ಲ. ಹಾಗಾದರೆ ಒಪ್ಪಂದಗಳಾಗಿರುವುದು ಏನೆಲ್ಲ ಎಂದು ನೋಡುವುದಾದರೆ…

– ಬಾಂಗ್ಲಾದೇಶಕ್ಕೆ 4.5 ಬಿಲಿಯನ್ ಡಾಲರುಗಳ ಸಾಲವನ್ನು ಹಂತ ಹಂತವಾಗಿ ನೀಡುವುದಕ್ಕೆ ಭಾರತದ ಒಪ್ಪಿಗೆ. ಬಾಂಗ್ಲಾದೇಶವು ಮಿಲಿಟರಿ ಸಲಕರಣೆಗಳನ್ನು ಖರೀದಿಸುವುದಕ್ಕೆ 500 ಮಿಲಿಯನ್ ಡಾಲರುಗಳ ಸಾಲ.

– ಭಾರತ ಮತ್ತು ಬಾಂಗ್ಲಾದೇಶಗಳ ಹಲವು ಮಿಲಿಟರಿ ಕಾಲೇಜುಗಳ ನಡುವೆ ಶೈಕ್ಷಣಿಕ ವಿನಿಮಯಕ್ಕೆ ಒಪ್ಪಂದ.

– ಬಾಂಗ್ಲಾದ ಖುಲ್ನಾದಿಂದ ಕೋಲ್ಕತ್ತಕ್ಕೆ ಪ್ರಯಾಣಿಕರ ರೈಲು. ರಾಧಿಕಾಪುರ ಮತ್ತು ಬಿರೋಲ್ ಗಳ ನಡುವೆ ಸರಕು ಸಾಗಣೆ ರೈಲು.

– ನುಮಾಲಿಘಡ ಮತ್ತು ಪ್ರಭಾತಿಪುರಗಳ ನಡುವೆ ತೈಲ ಕೊಳವೆ ಮಾರ್ಗ. ಈ ಮೂಲಕ ಬಾಂಗ್ಲಾದೇಶಕ್ಕೆ ಡಿಸೇಲ್ ಪೂರೈಸಲಿರುವ ಭಾರತೀಯ ಕಂಪನಿಗಳು.

– ಸೈಬರ್ ಭದ್ರತೆ ವಿಷಯದಲ್ಲಿ ಸಹಕಾರ ಒಪ್ಪಂದ.

Leave a Reply