ಶಿವಸೇನೆಯ ಗಾಯಕವಾಡ್ ಗೂಂಡಾಗಿರಿಗೆ ವಿಜಯ, ನಿಷೇಧ ಹಿಂಪಡೆದ ಭಾರತೀಯ ವಿಮಾನಯಾನ ಒಕ್ಕೂಟ

ಡಿಜಿಟಲ್ ಕನ್ನಡ ಟೀಮ್:

ನಿನ್ನೆಯಷ್ಟೇ ಶಿವಸೇನೆ ಸಂಸದ ರವೀಂದ್ರ ಗಾಯಕವಾಡ್ ಅವರಿಗೆ ವಿಧಿಸಿದ್ದ ನಿಷೇಧವನ್ನು ಏರ್ ಇಂಡಿಯಾ ಹಿಂಪಡೆದ ಬೆನ್ನಲ್ಲೇ, ಈಗ ಭಾರತೀಯ ವಿಮಾನಯಾನ ಒಕ್ಕೂಟ ಇವರ ಮೇಲಿನ ನಿಷೇಧ ತೆರವುಗೊಳಿಸಿದೆ. ಆ ಮೂಲಕ ರವೀಂದ್ರ ಗಾಯಕವಾಡ್ ಅವರು ಖಾಸಗಿ ವಿಮಾನಯಾನಗಳಲ್ಲೂ ಪ್ರಯಾಣಕ್ಕೆ ಅವಕಾಶ ಸಿಕ್ಕಿದ್ದು, ಶಿವಸೇನೆಯ ನಾಯಕನ ಗೂಂಡಾಗಿರಿಗೆ ಜಯ ಸಿಕ್ಕಂತಾಗಿದೆ.

‘ರವೀಂದ್ರ ಗಾಯಕವಾಡ್ ಅವರು ನೀಡಿರುವ ಕ್ಷಮೆ ಹೇಳಿಕೆ ಪರಿಗಣಿಸಿರುವ ಏರ್ ಇಂಡಿಯಾ ಶುಕ್ರವಾರ ರವೀಂದ್ರ ಅವರ ಮೇಲಿನ ನಿಷೇಧ ತೆರವುಗೊಳಿಸಿ ಪ್ರಯಾಣ ಮಾಡಲು ಅನುವು ಮಾಡಿಕೊಟ್ಟಿದೆ. ಅದೇ ರೀತಿ ಭಾರತೀಯ ವಿಮಾನಯಾನ ಒಕ್ಕೂಟ (ಎಫ್ಐಎ) ಸದಸ್ಯ ವಿಮಾನಯಾನ ಕಂಪನಿಗಳು ಸಹ ಇವರ ಮೇಲಿನ ನಿಷೇಧವನ್ನು ಹಿಂಪಡೆಯಲು ನಿರ್ಧರಿಸಿವೆ. ಇದೇ ವೇಳೆ ಮುಂದಿನ ದಿನಗಳಲ್ಲಿ ಗಾಯಕವಾಡ್ ಅವರು ನಮ್ಮ ಸಂಸ್ಥೆಗಳ ವಸ್ತು ಹಾಗೂ ಸಿಬ್ಬಂದಿಗೆ ಯಾವುದೇ ರೀತಿಯಲ್ಲಿ ತೊಂದರೆ ನೀಡದೆ ಅವರನ್ನು ಗೌರವಿಸಬೇಕು’ ಎಂದು ಎಫ್ಐಎನ ನಿರ್ದೇಶಕ ಉಜ್ವಲ್ ಡೇ ಮಾಹಿತಿ ನೀಡಿದ್ದಾರೆ.

ಮಾರ್ಚ್ 24ರ ಘಟನೆ ನಂತರ ಏರ್ ಇಂಡಿಯಾ ಗಾಯಕವಾಡ್ ವಿರುದ್ಧ ನಿಷೇಧ ಹೇರಿದ್ದರಿಂದ ಎಫ್ಐಎ ಸಂಸ್ಥೆಯ ಸದಸ್ಯ ವಿಮಾನಯಾನಗಳಾದ ಇಂಡಿಗೋ, ಜೆಟ್, ಸ್ಪೈಸ್ ಜೆಟ್, ಗೋಏರ್, ಟಾಟಾ ಗ್ರೂಪ್ ವಿಮಾನಯಾನ ವಿಸ್ತಾರ ಹಾಗೂ ಏರ್ ಏಷ್ಯಾ ಇಂಡಿಯಾ ಕಂಪನಿಗಳು ನಿಷೇಧ ಹೇರಿದ್ದವು. ಇದರ ಪರಿಣಾಮವಾಗಿ ಗಾಯಕವಾಡ್ ಅವರು ಹಲವು ಬಾರಿ ವಿಮಾನ ಪ್ರಯಾಣಕ್ಕೆ ಮುಂದಾದರೂ ಅವರ ಟಿಕೆಟ್ ಗಳನ್ನು ಈ ಸಂಸ್ಥೆಗಳು ರದ್ದುಗೊಳಿಸಿದ್ದವು.

Leave a Reply