ಏಪ್ರಿಲ್ 11ರ ರಾತ್ರಿ `ಪಿಂಕ್ ಮೂನ್’ ದರ್ಶನವಾಗುತ್ತದೆಯೆ? ಇದನ್ನು ಎಲ್ಲರೂ ನೋಡಲು ಸಾಧ್ಯವೆ?

ಇದೇ ಏಪ್ರಿಲ್ 11, ಮಂಗಳವಾರ ರಾತ್ರಿ `ಪಿಂಕ್ ಮೂನ್’ ದರ್ಶನವಾಗುತ್ತದೆ, ಮಿಸ್ ಮಾಡಿಕೊಳ್ಳಬೇಡಿ ಎಂದು ಈಗಾಗಲೇ ವಾಟ್ಸ್ ಆ್ಯಪ್ ನಲ್ಲಿ ಸಂದೇಶಗಳು ಭರ್ಜರಿಯಾಗಿ ಹರಿದಾಡುತ್ತಿವೆ. ಸಹಸ್ರಾರು ಮಂದಿ ಕಿರಿಯರು ತಮ್ಮ ಕಂಪ್ಯೂಟರ್ ನೋಟ್ ಬುಕ್ಕಿನಲ್ಲಿ ಗುರುತು ಹಾಕಿಕೊಂಡು ಆ ದಿನಕ್ಕಾಗಿ ಕಾತರದಿಂದ ಎದುರುನೋಡುತ್ತಿದ್ದಾರೆ. ಮತ್ತೆ ಕೆಲವರಿಗೆ ಗೊಂದಲ. ಬರಿಗಣ್ಣಿನಲ್ಲಿ ನೋಡಬಹುದೆ ಅಥವಾ ಬೈನಾಕ್ಯುಲರ್ ಇಲ್ಲವೇ ದೂರದರ್ಶಕ ಬಳಸಬೇಕೆ? ‘ಇದೇನು ಚಂದ್ರ ಹೊಸ ಅವತಾರ’ ಎಂದು ಕೆಲವರು ಏನೋ ನಿರೀಕ್ಷೆ ಇಟ್ಟುಕೊಂಡು ಪ್ರಶ್ನಿಸಬಹುದು. ಸಾಮಾಜಿಕ ಜಾಲತಾಣದಲ್ಲಿ ಇಂಥ ಸುದ್ದಿ ಬಂದರೆ ಅದು ಎಷ್ಟು ಬೇಗ ಹರಡುತ್ತದೆಂಬುದು ಎಲ್ಲರ ಅನುಭವಕ್ಕೂ ಬಂದಿದೆ. ಪಾಡ್ಯದಿಂದ ಚತುರ್ದಶಿಯವರೆಗೆ ಅನಂತರ ಬರುವ ಹುಣ್ಣಿಮೆ ಇಲ್ಲವೆ ಅಮಾವಾಸ್ಯೆ ತಿಥಿಗಳನ್ನು ಹಿಂದೆಲ್ಲ ಶಾಲೆಗಳಲ್ಲೇ ಬಾಯಿಪಾಠ ಮಾಡಿಸುತ್ತಿದ್ದರು. ಋತುಗಳ ಹೆಸರುಗಳನ್ನೂ ಉರುಹಚ್ಚಬೇಕಾಗಿತ್ತು. ಆಗ ಯಾರೂ ಜನಾಂಗದ ಧರ್ಮದ ಹೆಸರಿನಲ್ಲಿ ಕ್ಯಾತೆ ತೆಗೆಯುತ್ತಿರಲಿಲ್ಲ.

ಹುಣ್ಣಿಮೆ ಏಕೆ ಆಗುತ್ತದೆ? ಅಮಾವಾಸ್ಯೆ ಏಕೆ ಬರುತ್ತದೆ ಎಂದು ಚಂದ್ರನ ಚಲನೆ ಕುರಿತು ಮಕ್ಕಳಿಗೆ ಅರ್ಥಮಾಡಿಕೊಳ್ಳುವಂತೆ ಹೇಳುವವರೇ `ಸರಿಯಾದ ಮೇಷ್ಟ್ರು’. ನಾವು ಮತ್ತೊಮ್ಮೆ ನಮ್ಮ ವಿದ್ಯಾರ್ಥಿ ಜೀವನಕ್ಕೆ ಹೋಗೋಣ. ಭೂಮಿಯ ಸುತ್ತ ಚಂದ್ರ ಒಂದು ಬಾರಿ ಪರಿಭ್ರಮಿಸಲು 29 ದಿನ 12 ಗಂಟೆ, 44 ನಿಮಿಷ, 2.8 ಸೆಕೆಂಡುಗಳು ಬೇಕು. ಕಂಪ್ಯೂಟರ್ ಯುಗಕ್ಕೆ ಮೊದಲೇ ಪಂಚಾಗಕರ್ತೃಗಳು, ಖಗೋಳವಿಜ್ಞಾನಿಗಳು ಇದನ್ನು ಸರಿಯಾಗಿಯೇ ಲೆಕ್ಕ ಹಾಕಿದ್ದರು. ಇದನ್ನೇ ನಾವು ಚಂದ್ರಮಾಸ ಎನ್ನುವುದು. ಈ ಅವಧಿಯಲ್ಲಿ ಬಾಲಚಂದ್ರ, ವೃದ್ಧಿಚಂದ್ರ, ಅರ್ಧಾಧಿಕ್ಯ ಚಂದ್ರ (Gibbous) ಮತ್ತು ಪೂರ್ಣಚಂದ್ರ (ಪೌರ್ಣಮಿ) ಎಂದು ಚಂದ್ರನ ಕಲೆಯ (phase) ಆಧಾರದ ಮೇಲೆ ಲೆಕ್ಕ ಹಾಕಿ ಅನಂತರ ಅದೇ ಗತಿಯಲ್ಲಿ ಇಳಿಮುಖವಾಗುತ್ತ ಚಂದ್ರ ನಾಪತ್ತೆಯಾದಾಗ ಅಮಾವಾಸ್ಯೆ ಆಗಮನವಾಗುತ್ತದೆ. ಖಗೋಳ ಭಾಷೆಯಲ್ಲಿ ಚಂದ್ರೋದಯವಾಗಿ ಹದಿನೈದು ದಿನಗಳ ನಂತರ ಭೂಮಿಯಿಂದ ವೀಕ್ಷಿಸಿದಾಗ, ಸೂರ್ಯ-ಚಂದ್ರ ವಿರುದ್ಧ ದಿಕ್ಕಿನಲ್ಲಿರುತ್ತವೆ. ಅಂದರೆ ರೇಖಾಂಶ ವ್ಯತ್ಯಾಸ 180 ಡಿಗ್ರಿ. ಅದು ಹುಣ್ಣಿಮೆ. ಇದಾದ ಹದಿನೈದು ದಿನಗಳಲ್ಲಿ ರೇಖಾಂಶ ವ್ಯತ್ಯಾಸ 360 ಡಿಗ್ರಿ ಅಂದರೆ `0’-ಇದು ಅಮಾವಾಸ್ಯೆ. ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗಿನ ಹದಿನೈದು ದಿನ ಶುಕ್ಲಪಕ್ಷ, ಮುಂದಿನ ಹದಿನೈದು ದಿನ ಕೃಷ್ಣಪಕ್ಷ.

ಈಗ ಜನರಲ್ಲಿ ಕಾತರ ಮೂಡಿಸಿರುವ `ಪಿಂಕ್ ಮೂನ್’ ವಿಚಾರಕ್ಕೆ ಬರೋಣ. ಈ ಏಪ್ರಿಲ್  11ರ ರಾತ್ರಿ ಚಂದ್ರನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ನಿರಾಶೆಯಾಗಬಹುದು. `ಅರೆರೆ, ಪಿಂಕ್ ಮೂನ್ ಎಷ್ಟು ಕಾಲ ಇತ್ತು, ಕೈಕೊಟ್ಟಿತಲ್ಲ’ ಎಂದು ಪರಿತಪಿಸಬಹುದು. ಮಿಸ್ ಮಾಡಿಕೊಳ್ಳುವುದೇ ಬೇಡ ಎಂದು ಹಿಂದಿನ ದಿನ ಅಂದರೆ ಸೋಮವಾರ ರಾತ್ರಿ ಅದೇ ಕುತೂಹಲದಿಂದ ನೋಡಿದರೂ ಉದ್ಗಾರ ಬದಲಾಗಿರುತ್ತದೆ. `ಅಯ್ಯೋ, ಇನ್ನೂ ಎಷ್ಟು ಹೊತ್ತಿಗೆ ಪಿಂಕ್ ಮೂನ್ ದರ್ಶನ?’ ಈ ಎರಡು ದಿನಗಳಲ್ಲೂ ನೀವು ವಾಸ್ತವವಾಗಿ ಏನನ್ನೂ ಮಿಸ್ ಮಾಡಿಕೊಂಡಿರುವುದಿಲ್ಲ.

ನಮ್ಮ ಪಂಚಾಂಗದ ಪ್ರಕಾರ ಈ ಸಲದ ಹುಣ್ಣಿಮೆ ಪ್ರಾರಂಭವಾಗುವುದು ಸೋಮವಾರ 10ನೇ ತಾರೀಖು ಬೆಳಗ್ಗೆ 9.20 ಗಂಟೆಗೆ, ಹುಣ್ಣಿಮೆ ಕೊನೆಯಾಗುವುದು ಮಂಗಳವಾರ ಬೆಳಗ್ಗೆ 10.04ಕ್ಕೆ. ಆದ್ದರಿಂದ ವಾಟ್ಸಪ್ ಮೇಸೆಜನ್ನು ಅನುಸರಿಸಿ 11ನೇ ತಾರೀಖು ನೀವು ರಾತ್ರಿ ಚಂದ್ರನನ್ನು ವೀಕ್ಷಿಸಿದರೂ ಅಥವಾ ಹಿಂದಿನ ರಾತ್ರಿ ವೀಕ್ಷಿಸಿದರೂ ನಿಮಗೆ ದರ್ಶನವಾಗುವುದು ಹುಣ್ಣಿಮೆ ಚಂದ್ರ ಅಷ್ಟೇ. ಹಾಗಾದರೆ ಪಿಂಕ್? ಅದು ನಮ್ಮ ಭ್ರಮೆ ಅಷ್ಟೇ. ಇದರ ಹಿಂದೆ ಪುಟ್ಟ ಕಥೆ ಇದೆ. ನಮ್ಮಲ್ಲಿ ಪಾಟಲ ವರ್ಣದ ಕಾಶಿ ಕಣಿಗಲೆ ಹೂವಿಲ್ಲವೆ ಹಾಗೆ ಉತ್ತರ ಅಮೆರಿಕದ ಕೆಲವು ಭಾಗದಲ್ಲಿ ತಂಡ್ರಾ ವಾತಾವರಣದಲ್ಲಿ ವೈಲ್ಡ್ ಗ್ರೌಂಡ್ ಫ್ಲೋಕ್ಸ್ (Wild ground phlox) ಎಂಬ ಪೊದೆ ಸಸ್ಯ ವಸಂತಮಾಸದಲ್ಲಿ ಪಾಟಲ ವರ್ಣದ (Pink) ಹೂಗಳನ್ನು ಬಿಟ್ಟು ಮುದನೀಡುವ ದೃಶ್ಯ ಕಲ್ಪಿಸುತ್ತದೆ. ಮೊದಲ ಹುಣ್ಣಿಮೆಯನ್ನು ಈ ಹಿನ್ನೆಲೆಯಲ್ಲಿ ಅಮೆರಿಕದ ಮೂಲ ನಿವಾಸಿಗಳಾದ `ಆಲ್ ಗನ್ ಕ್ವಿನ್’ ಬುಡಕಟ್ಟು `ಪಿಂಕ್ ಮೂನ್’ ಎಂದು ಕರೆಯಿತು. ಚಂದ್ರ ಜಗತ್ತಿನ ಎಲ್ಲ ಸಂಸ್ಕೃತಿಯನ್ನು ಪ್ರಭಾವಿಸಿರುವ ಕಾಯ. ನಮ್ಮಲ್ಲೂ ವರಕವಿ ಬೇಂದ್ರೆ ಅವರು `ಬಿದಿಗೆ ಚಂದ್ರ ಬಂದ ನೋಡು, ಮೂಡಿದಂತೆ ಎರಡು ಕೋಡು’ ಎಂದು ಸುಂದರ ಪದಗಳಲ್ಲಿ ಬಾಲ ಚಂದ್ರನನ್ನು ವರ್ಣಿಸಿದ್ದಾರಲ್ಲವೆ?

ಮುಂದೆ ಅಮೆರಿಕದಲ್ಲಿ ನೆಲೆನಿಂತ ಅನ್ಯರು `ಪಿಂಕ್ ಮೂನ್’ ಎಂಬ ಹೆಸರನ್ನೇ ಸ್ಥಿರಗೊಳಿಸಿದರು. ನಂತರ ಅವರವರಿಗೆ ತೋಚಿದಂತೆ ವೂಲ್ಫ್ ಮೂನ್, ವರ್ಮ್ ಮೂನ್, ಫ್ಲವರ್ ಮೂನ್, ಸ್ಟ್ರಾಬೆರಿ ಮೂನ್, ಬಕ್ ಮೂನ್, ಸ್ಟರ್ಜನ್ ಮೂನ್, ಹಾರ್ವೆಸ್ಟ್ ಮೂನ್ ಇತ್ಯಾದಿ ಹೆಸರುಗಳು ಬಂದವು. ಶರದೃತುವಿನ ಪೂರ್ಣಚಂದ್ರ ಭಾರತೀಯರನ್ನೂ ಪ್ರಭಾವಿಸಿದೆ. ಶರಚ್ಚಂದ್ರ ಎಂದೊಡನೆ ಬಂಗಾಳಿ ಕಾದಂಬರಿಕಾರ ಶರಚ್ಚಂದ್ರ ಚಟರ್ಜಿ ನೆನಪಾಗುತ್ತಾರಲ್ಲವೆ? ಪೂರ್ಣಚಂದ್ರ ಎಂದೊಡನೆ ತೇಜಸ್ವಿಯ ನೆನಪೂ ಬರುತ್ತದೆಯಲ್ಲವೆ?

`ಪಿಂಕ್ ಮೂನ್’ ಗೆ ಕೊಟ್ಟ ವಿವರಣೆಯನ್ನು ಇತರ ಸಂದರ್ಭಗಳಲ್ಲಿ ವಿಸ್ಮಯ ತರುವ ಚಂದ್ರನಿಗೆ ವಿಸ್ತರಿಸುವುದು ಸಾಧ್ಯವಾಗದು. `ಬ್ಲೂಮೂನ್’ ಎನ್ನುವುದು `ಒನ್ಸ್ ಇನ್ ಅ ಬ್ಲೂ ಮೂನ್’ ಎಂಬ ನುಡಿಗಟ್ಟನ್ನೇ ಸೃಷ್ಟಿಸಿದೆ. `ಅಪರೂಪ’ ಎನ್ನುವ ಅರ್ಥದಲ್ಲಿ. ಆದರೆ ನಿಜಕ್ಕೂ ಕೆಲವು ತಿಂಗಳಲ್ಲಿ ಎರಡು ಬಾರಿ ಚಂದ್ರ ಕಾಣಿಸಿಕೊಳ್ಳುವುದೂ ಉಂಟು. ಎರಡನೆಯ ಬಾರಿ ಕಂಡ ಚಂದ್ರನಿಗೆ `ಬ್ಲೂ ಮೂನ್’ ಎಂಬ ಹೆಸರು ಇದೆ. ಇನ್ನೂ ಒಂದು ವಿಶೇಷವೆಂದರೆ ಕೆಲವೊಮ್ಮೆ ಚಂದ್ರ ನೀಲವರ್ಣವನ್ನು ತಳೆಯುವುದೂ ಉಂಟು. ನಿಜಕ್ಕೂ ಅಗ್ನಿಪರ್ವತದಿಂದ ಹೊರಹೊಮ್ಮಿದ ಸಣ್ಣ ಸಣ್ಣ ಕಣಗಳೂ ವಾಯುಗೋಳಕ್ಕೆ ತಲುಪಿ, ಬೆಳಕಿನ ಚದರಿಕೆಯಿಂದಾಗಿ ಮುನ್ನಲೆ ನೀಲಿಯಾಗಿ ಕಾಣುವುದರಿಂದ ಹಿಂಬದಿಯ ಚಂದ್ರ ಕೂಡ ಅದೇ ಬಣ್ಣದಲ್ಲಿ ಕಾಣುವುದುಂಟು. 1883ರಲ್ಲಿ ಇಂಡೋನೇಷ್ಯದ ಕ್ರಕಟೋವ ಎನ್ನು ಜ್ವಾಲಾಮುಖಿ ಸ್ಫೋಟಿಸಿದಾಗ, ಅದರಿಂದ ಎದ್ದ ದೂಳಿನಿಂದಾಗಿ ಎರಡು ವರ್ಷದವರೆಗೆ `ನೀಲಿಚಂದ್ರ’ನ ದರ್ಶನ ಆಗಿತ್ತು.

`ಪಿಂಕ್ ಮೂನ್’ ನಿರೀಕ್ಷಿಸುತ್ತಿದ್ದ ನಿಮಗೆ ನಿರಾಶೆಯಾಗಿದ್ದರೆ ಕ್ಷಮಿಸಿಬಿಡಿ. ಅದಕ್ಕೆ ಕಾರಣ ನನ್ನ ಲೇಖನವಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಮೆಸೇಜುಗಳೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿದಾಗ ಹೀಗಾಗಬಹುದು. ಏಪ್ರಿಲ್ 1ನೇ ತಾರೀಖು ಇಂಥ ಮೆಸೇಜ್ ಹರಿದಾಡಿದ್ದರೆ ಒಪ್ಪಬಹುದಾಗಿತ್ತು!

Leave a Reply