ಉಪಚುನಾವಣೆ: ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ನಾಲ್ವರ ಸಾವು, ಮಧ್ಯ ಪ್ರದೇಶದಲ್ಲೂ ಗಲಭೆ

ಡಿಜಿಟಲ್ ಕನ್ನಡ ಟೀಮ್:

ಜಮ್ಮು ಕಾಶ್ಮೀರದ ಎರಡು ಕ್ಷೇತ್ರಗಳ ಉಪಚುನಾವಣೆಯ ವೇಳೆ ಹಿಂಸಾಚಾರ ನಡೆದಿದ್ದು, ಈ ವೇಳೆ ಭದ್ರತಾ ಪಡೆಯ ಗುಂಡಿಗೆ ನಾಲ್ವರು ಸತ್ತಿದ್ದಾರೆ. ಶ್ರೀನಗರ ಮತ್ತು ಬುದ್ಗಾಮ್ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಉಪಚುನಾವಣೆ ನಡೆಯುತ್ತಿದ್ದು, ಪ್ರತ್ಯೇಕತಾವಾದಿಗಳು ಇದನ್ನು ಬಹಿಷ್ಕರಿಸಿದ್ದರು. ಭಾನುವಾರ ಬುದ್ಗಾಮ್ ಕ್ಷೇತ್ರದ ದಲ್ವಾನ್ ಗ್ರಾಮದಲ್ಲಿ ಮತದಾನ ನಡೆಯುತ್ತಿದ್ದ ವೇಳೆ ದುಷ್ಕರ್ಮಿಗಳ ಗುಂಪು, ಮತಗಟ್ಟೆಗಳ ಮೇಲೆ ಹಾಗೂ ಚುನಾವಣಾ ಅಧಿಕಾರಿಗಳ ಮೇಲೆ ದಾಳಿ ನಡೆಸಿ ಮತದಾನ ನಿಲ್ಲಿಸುವ ಪ್ರಯತ್ನ ನಡೆಸಿತು. ಈ ಹಂತದಲ್ಲಿ ಈ ಗುಂಪನ್ನು ನಿಯಂತ್ರಿಸುವ ಪ್ರಯತ್ನ ಭಧ್ರತಾ ಪಡೆಯಿಂದ ನಡೆಯಿತು. ಈ ಹಂತದಲ್ಲಿ ಪರಿಸ್ಥಿತಿ ಕೈ ಮೀರಿದ ಪರಿಣಾಮ ಗುಂಡು ಹಾರಿಸಲಾಯಿತು.

ಕೇವಲ ಜಮ್ಮು ಕಾಶ್ಮೀರವಲ್ಲದೇ, ಮಧ್ಯ ಪ್ರದೇಶದ ಅತೆರ್ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲೂ ಅಹಿತಕರ ಘಟನೆ ಸಂಭವಿಸಿದೆ. ಇಲ್ಲಿ ಮತಯಂತ್ರಗಳನ್ನು ತಿರುಚಲಾಗಿದೆ ಎಂಬ ವಿಡಿಯೋ ಹರಿದಾಡಿದ ಬೆನ್ನಲ್ಲೇ, ಪ್ರತಿಪಕ್ಷಗಳು ಚುನಾವಣ ಅಧಿಕಾರಿಗಳು ತಮ್ಮ ಬಿಜೆಪಿ ಪರವಾಗಿ ಮತಯಂತ್ರವನ್ನು ತಿರುಚಿದ್ದಾರೆ ಎಂದು ಆರೋಪಿಸಿವೆ. ಅಲ್ಲದೆ ಎರಡು ಮತಗಟ್ಟೆಗಳಲ್ಲಿ ಗಲಭೆ ಉಂಟಾಗಿದ್ದು, ಕಾರನ್ನು ಜಕಂಗೊಳಿಸಲಾಗಿದೆ. ಈ ಗಲಭೆಯಲ್ಲಿ ಗುಂಡು ಹಾರಿದ ಸದ್ದು ಕೇಳಿಬಂದಿದ್ದು, ಹಲವರಿಗೆ ಗಾಯವಾಗಿದೆ ಎಂಬ ವರದಿ ಬಂದಿದೆ.

ಇಂದು ಕರ್ನಾಟಕದ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭೆ ಸೇರಿದಂತೆ 9 ರಾಜ್ಯಗಳಲ್ಲಿ ವಿವಿಧ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸಲಾಗುತ್ತಿದೆ.

Leave a Reply