ತಂದೆಯನ್ನು ಕಳೆದುಕೊಂಡ ನೋವಿನಲ್ಲೂ ಆಕರ್ಷಕ ಪ್ರದರ್ಶನ ನೀಡಿದ ಪಂತ್, ಆರ್ ಸಿಬಿ ಮೊದಲ ಜಯದಲ್ಲಿತ್ತು ಜಾಧವ್ ಜಾದೂ

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರಿನ ಚಿನ್ನಸ್ವಾಮಿ ಅಂಗಣದಲ್ಲಿ ಶನಿವಾರ ನಡೆದ ರೋಚಕ ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15 ರನ್ ಗಳ ಅಂತರದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಮಣಿಸಿದೆ.

ಆದರೆ…,

ಈ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಸೋತಿದ್ದರೂ, ಆ ತಂಡದ ಆಟಗಾರ ರಿಶಬ್ ಪಂತ್ ಆಟ ಎಲ್ಲರ ಮನ ಗೆದ್ದಿತು. ನಿನ್ನೆಯಷ್ಟೆ (ಶುಕ್ರವಾರ) ತನ್ನ ತಂದೆಯ ಅಂತ್ಯಕ್ರಿಯೆ ಮುಗಿಸಿದ ಪಂತ್, ನೇರವಾಗಿ ಬೆಂಗಳೂರಿಗೆ ಆಗಮಿಸಿ ತಂಡವನ್ನು ಸೇರಿಕೊಂಡಿದ್ದರು. ಮಾನಸಿಕವಾಗಿ ಸಾಕಷ್ಟು ಕುಗ್ಗಿರುವ ಮನಸ್ಥಿತಿಯಲ್ಲಿ ಪಂತ್ ಆಡುವುದು ಅನುಮಾನ ಎಂದೇ ಎಲ್ಲರು ಭಾವಿಸಿದ್ದರು. ಆದರೆ ಈ ಪಂದ್ಯದಲ್ಲಿ ಕಣಕ್ಕಿಳಿದು ಆಕರ್ಷಕ ಪ್ರದರ್ಶನ ನೀಡಿರುವ ಪಂತ್ ಆರ್ ಸಿಬಿ ತಂಡಕ್ಕೆ ಸಡ್ಡು ಹೊಡೆದ ರೀತಿ ನಿಜಕ್ಕೂ ಗಮನಾರ್ಹ. ಚುರುಕಿನ ವಿಕೆಟ್ ಕೀಪಿಂಗ್ ಹಾಗೂ ಈತನ ಬ್ಯಾಟ್ ನಿಂದ ಚಿಮ್ಮಿದ ಸ್ಫೋಟಕ ಹೊಡೆತಗಳು ಈತನ ಸಾಮರ್ಥ್ಯಕ್ಕೆ ಸಾಕ್ಷಿಯಾಗಿತ್ತು. 19 ವರ್ಷದ ಈ ಯುವ ಆಟಗಾರ ತನ್ನ ವೈಯಕ್ತಿಕ ಜೀವನದಲ್ಲಿ ಎದುರಾದ ಸಮಸ್ಯೆಗಳಿಗೆ ವಿಚಲಿತನಾಗದೇ ಪಂದ್ಯದಲ್ಲಿ ತೋರಿದ ಬದ್ಧತೆ ಹಾಗೂ ಮನೋಸ್ಥೈರ್ಯ ಪ್ರಶಂಸನೀಯ.

ಇನ್ನು ಪಂದ್ಯದ ಬಗ್ಗೆ ನೋಡುವುದಾದರೆ, ಪಿಚ್ ಸ್ಪಿನ್ ಬೌಲರ್ ಗಳಿಗೆ ಸಾಥ್ ನೀಡುವ ಸೂಚನೆ ಇದ್ದಿದ್ದರಿಂದ ಟಾಸ್ ಗೆದ್ದ ಆರ್ ಸಿಬಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿದ್ದರೂ ಅಗ್ರ ಕ್ರಮಾಂಕದ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ಆರ್ ಸಿಬಿ ತಂಡ ಕಡಿಮೆ ಮೊತ್ತಕ್ಕೆ ಕುಸಿಯುವ ಆತಂಕಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಏಕಾಂಗಿಯಾಗಿ ಆರ್ ಸಿಬಿ ಇನಿಂಗ್ಸ್ ಕಟ್ಟಿದ್ದು ಕೇದಾರ್ ಜಾಧವ್. ಆರಂಭದಲ್ಲಿ ರಕ್ಷಣಾತ್ಮಕ ಆಟವಾಡಿದ್ರು, ನಂತರ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಜಾಧವ್ 37 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 69 ರನ್ ಪೇರಿಸಿದರು. ಅದರೊಂದಿಗೆ ತಂಡ 150ರ ರನ್ ಗಡಿ ದಾಟುವುದು ಸುಲಭವಾಗಿಸಿದರು. ಜಾಧವ್ ವಿಕೆಟ್ ಬಿದ್ದ ನಂತರ ಆರ್ ಸಿಬಿ ರನ್ ವೇಗಕ್ಕೆ ಬ್ರೇಕ್ ಬಿದ್ದಿತು ಪರಿಣಾಮ ಆರ್ ಸಿಬಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ದಾಖಲಿಸಿತು.

ಆರಂಭದಲ್ಲಿ ಈ ಮೊತ್ತ ಸುಲಭವಾಗಿ ಕಂಡಿತಾದರೂ ಡೆಲ್ಲಿ ಡೇರ್ ಡೆವಿಲ್ಸ್ ಆರಂಭದಿಂದಲೇ ಪರದಾಟ ನಡೆಸಿತು. ತಂಡ ಪ್ರಮುಖರಾದ ಸ್ಯಾಮ್ ಬಿಲ್ಲಿಂಗ್ಸ್, ಕರುಣ್ ನಾಯರ್, ಸಂಜು ಸ್ಯಾಮ್ಸನ್, ಬ್ರಾಥ್ ವೈಟ್, ಕ್ರಿಸ್ ಮೊರಿಸ್ ಜತೆಯಾಟಗಳ ಮೂಲಕ ಇನಿಂಗ್ಸ್ ಕಟ್ಟುವಲ್ಲಿ ವಿಫಲವಾದರು. ಆದರೆ 5ನೇ ಕ್ರಮಾಂಕದಲ್ಲಿ ಕ್ರೀಸಿಗೆ ಇಳಿದ ಪಂತ್ ಏಕಾಂಗಿ ಹೋರಾಟ ನಡೆಸಿದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ತನ್ನ ಆಟದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೇ ಆಕ್ರಮಣಕಾರಿ ಆಟವಾಡಿದ ಪಂತ್ ಆರ್ ಸಿಬಿ ತಂಡಕ್ಕೆ ಸವಾಲೆಸೆದರು. ತಂಡದ ಇತರೆ ಆಟಗಾರರಿಂದ ಸರಿಯಾದ ಬೆಂಬಲ ಸಿಗದ ಹಿನ್ನೆಲೆಯಲ್ಲಿ ತಂಡವನ್ನು ಜಯದ ದಡ ಸೇರಿಸುವಲ್ಲಿ ಪಂತ್ ವಿಫಲರಾದರು.

ಬ್ಯಾಟಿಂಗ್ ನಲ್ಲಿ ಸಂಘಟಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಆರ್ ಸಿಬಿ ಆಟಗಾರರು, ಬೌಲಿಂಗ್ ನಲ್ಲಿ ಇದನ್ನು ಸಾಧಿಸಿದರು. ಸ್ಟಾನ್ಲೆಕ್, ಇಕ್ಬಾಲ್ ಅಬ್ದುಲ್ಲಾ ಹಾಗೂ ನೇಗಿ ತಲಾ 2, ಚಾಹಲ್, ಮಿಲ್ಸ್, ವಾಟ್ಸನ್ ತಲಾ 1 ವಿಕೆಟ್ ಪಡೆದರು. ಆರ್ ಸಿಬಿ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿ ನಿಂತ ಕೇದಾರ್ ಜಾಧವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Leave a Reply