ಮಿಂಚಿದ ಅಫ್ಘಾನಿಸ್ತಾನ್ ಸ್ಪಿನ್ನರ್, ಹಾಲಿ ಚಾಂಪಿಯನ್ ಸನ್ ರೈಸರ್ಸ್ ಗೆ ಎರಡನೇ ಜಯ

ಡಿಜಿಟಲ್ ಕನ್ನಡ ಟೀಮ್:

ವಿಶ್ವ ಕ್ರಿಕೆಟ್ ನಲ್ಲಿ ಅಂಬೆಗಾಲಿಡುತ್ತಾ ಹಂತ ಹಂತವಾಗಿ ಬೆಳೆಯುತ್ತಿರುವ ಅಫ್ಘಾನಿಸ್ತಾನದ ಸ್ಪಿನ್ ಪ್ರತಿಭೆ ರಶೀದ್ ಖಾನ್ ಐಪಿಎಲ್ ನಂತಹ ವಿಶ್ವ ದರ್ಜೆ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಆ ಮೂಲಕ ಹಾಲಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ತಂಡ ಟೂರ್ನಿಯಲ್ಲಿ ಸತತ ಎರಡನೇ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಹೈದರಾಬಾದಿನ ಉಪ್ಪಾಳ್ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಆತಿಥೇಯ ಸನ್ ರೈಸರ್ಸ್ ತಂಡ ಪ್ರಾಬಲ್ಯ ಮೆರೆಯುವ ಮೂಲಕ 27 ಎಸೆತ ಬಾಕಿ ಇರುವಾಗಲೇ 9 ವಿಕೆಟ್ ಅಂತರದ ಸುಲಭ ಗೆಲವು ತನ್ನದಾಗಿಸಿಕೊಂಡಿತು. ಮತ್ತೊಂದೆಡೆ ಗುಜರಾತ್ ಲಯನ್ಸ್ ತಂಡ ಆರಂಭಿಕ ಎರಡೂ ಪಂದ್ಯಗಳನ್ನು ಸೋತು ಒತ್ತಡಕ್ಕೆ ಸಿಲುಕಿದೆ. ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಲಯನ್ಸ್ ಪಡೆಯನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿತು. ನಂತರ ತನ್ನ ರಶೀದ್ ಖಾನ್ (19ಕ್ಕೆ 3) ಅವರ ಅಮೋಘ ಪ್ರದರ್ಶನದಿಂದ ಗುಜರಾತ್ ತಂಡವನ್ನು 20 ಓವರ್ ಗಳಲ್ಲಿ 7 ವಿಕೆಟ್ ಕಬಳಿಸಿ 135 ರನ್ ಗಳಿಗೆ ನಿಯಂತ್ರಿಸಿತು. ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಆತಿಥೇಯ ತಂಡ ಆರಂಭಿಕ ಡೇವಿಡ್ ವಾರ್ನರ್ (ಅಜೇಯ 76 ರನ್, 45 ಎಸೆತ) ಹಾಗೂ ಹೆನ್ರಿಕ್ಸ್ (ಅಜೇಯ 52 ರನ್, 39 ಎಸೆತ) ಅವರ ಶತಕದ ಜತೆಯಾಟದ ನೆರವಿನಿಂದ 15.3 ಓವರ್ ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 140 ರನ್ ಪೇರಿಸಿತು.

ಗುಜರಾತ್ ತಂಡದ ದೈತ್ಯ ಬ್ಯಾಟ್ಸ್ ಮನ್ ಗಳಾದ ಬ್ರೆಂಡನ್ ಮೆಕಲಂ, ಸುರೇಶ್ ರೈನಾ ಹಾಗೂ ಎರಾನ್ ಫಿಂಚ್ ಅವರನ್ನು ಎಲ್ ಬಿ ಬಲೆಗೆ ಕೆಡವಿದ ರಶೀದ್ ಖಾನ್ ತಮ್ಮ ತಂಡ ಪಂದ್ಯದ ಮೇಲೆ ನಿಯಂತ್ರಣ ಸಾಧಿಸುವಂತೆ ಮಾಡಿದರು. ಅಷ್ಟೇ ಅಲ್ಲದೆ ಐಪಿಎಲ್ ಪಂದ್ಯವೊಂದರಲ್ಲಿ ಮೂರು ಎಲ್ ಬಿಡಬ್ಲ್ಯೂ ಮಾಡಿದ ಮೊದಲ ಬೌಲರ್ ಎಂಬ ಖ್ಯಾತಿಗೆ ಪಾತ್ರರಾದರು. ಜತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಇನ್ನು ಆಕರ್ಷಕ ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ನಾಯಕ ಡೇವಿಡ್ ವಾರ್ನರ್ ಟಿ20 ಕ್ರಿಕೆಟ್ ನಲ್ಲಿ 7000 ರನ್ ಪೂರೈಸಿದರು.

Leave a Reply