ಗೋರಕ್ಷಣೆ ಹೆಸರಲ್ಲಿ ಹಿಂಸೆಗೆ ಆರೆಸ್ಸೆಸ್ ಮುಖ್ಯಸ್ಥರ ಖಂಡನೆ, ಅತ್ತ.. ಬಿಜೆಪಿ ಶಾಸಕನಿಂದ ತಲೆ ಕಡಿಯುವ ಹೇಳಿಕೆ

ಡಿಜಿಟಲ್ ಕನ್ನಡ ಟೀಮ್:

ಗೋರಕ್ಷಣೆ ಹೆಸರಲ್ಲಿ ಹಿಂಸಾಪ್ರವೃತ್ತಿಯಲ್ಲಿ ತೊಡಗಬಾರದು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಸ್ಪಷ್ಟವಾಗಿ ಹೇಳಿದ್ದಾರೆ.

ರಾಜಸ್ಥಾನದ ಆಳ್ವಾರ್ ನಲ್ಲಿ ಇತ್ತೀಚೆಗೆ ಗೋರಕ್ಷಕರೆಂದು ಕರೆದುಕೊಳ್ಳುವವರು ಪೆಹ್ಲು ಖಾನ್ ಎಂಬ ವ್ಯಕ್ತಿಯನ್ನು ಥಳಿಸಿ ಸಾಯಿಸಿದ್ದ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ.

‘ದೇಶದೆಲ್ಲೆಡೆ ಗೋಹತ್ಯೆ ನಿಷೇಧದ ಕಾನೂನು ಜಾರಿಯಾಗಬೇಕು. ಇದೇ ಸಂದರ್ಭದಲ್ಲಿ ಗೋರಕ್ಷಣೆಗೆಂದು ಹಿಂಸೆಯಲ್ಲಿ ತೊಡಗಿದರೆ ಅದು ಉದ್ದೇಶವನ್ನೇ ಹಾಳು ಮಾಡುತ್ತದೆ. ಕಾನೂನಿಗೆ ಯಾವತ್ತೂ ಬೆಲೆ ಕೊಡಬೇಕು’ ಎಂದಿದ್ದಾರೆ ಮೋಹನ ಭಾಗ್ವತ್.

ಹೀಗೆ ಆರೆಸ್ಸೆಸ್ ಕಡೆಯಿಂದ ಹಿಂಸೆ-ಪ್ರಚೋದನೆಗಳಿಂದ ದೂರ ಇರಬೇಕೆಂಬ ಸಂದೇಶ ವ್ಯಕ್ತವಾಗುತ್ತಿದ್ದರೆ, ಅತ್ತ ಹೈದರಾಬಾದಿನಲ್ಲಿ ಬಿಜೆಪಿ ಶಾಸಕ ರಾಜಾ ಸಿಂಗ್ ತಲೆ ಕಡಿಯುವ ಮಾತನಾಡಿ ವಿವಾದಕ್ಕೆ ಈಡಾಗಿದ್ದಾರೆ. ‘ರಾಮಮಂದಿರ ನಿರ್ಮಾಣವಾದರೆ ಪರಿಣಾಮ ನೆಟ್ಟಗಿರುವುದಿಲ್ಲ ಅಂತ ಕೆಲವರು ಹೆದರಿಸುತ್ತಿದ್ದಾರೆ. ಅಂಥವರ ತಲೆ ಕಡಿಯುವುದಕ್ಕೆ ನಾವು ಸಿದ್ಧರಾಗಿದ್ದೇವೆ’ ಎಂದು ಸಾರ್ವಜನಿಕ ಭಾಷಣದಲ್ಲಿ ಶಾಸಕರು ಮಾತನಾಡಿದ್ದಾರೆ.

Leave a Reply