ಆರ್.ಕೆ ನಗರದಲ್ಲಿ ಮತದಾರರಿಗೆ ಶಶಿಕಲಾ ಬಣ ಹಂಚುತ್ತಿದ್ದ ಹಣ ಏಷ್ಟು? ಮುಂದೂಡಲ್ಪಡುತ್ತದೆಯೇ ಉಪಚುನಾವಣೆ?

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡಿನಲ್ಲಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಆರ್.ಕೆ ನಗರ ಉಪಚುನಾವಣೆಯಲ್ಲಿ ಹಣ ಹೊಳೆಯೇ ಹರಿಯುತ್ತಿದೆ. ಈ ಕ್ಷೇತ್ರದ ಮತದಾರರಿಗೆ ಒಂದು ಓಟಿಗೆ ₹ 4000 ಹಣ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನು ತೆರಿಗೆ ಇಲಾಖೆ ಅಧಿಕಾರಿಗಳೇ ಬಹಿರಂಗ ಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದ ಹಿನ್ನೆಲೆಯಲ್ಲಿ ಈ ಕ್ಷೇತ್ರ ತೆರವಾಗಿತ್ತು. ಈ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಜನರು ಅಮ್ಮಾ ನಂತರ ತಮಗೆ ಬೆಂಬಲ ನೀಡುತ್ತಿದ್ದಾರೆ ಎಂದು ಬಿಂಬಿಸಿ ಪಕ್ಷದ ಮೇಲಿನ ಬಿಗಿ ಹಿಡಿತ ಸಾಧಿಸಲು ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ಅವರ ಬಣ ತೀವ್ರ ಪೈಪೋಟಿ ನಡೆಸುತ್ತಿದೆ. ಇದಕ್ಕಾಗಿ ನಾರಾರು ಕೋಟಿಯನ್ನು ಖರ್ಚು ಮಾಡಲಾಗುತ್ತಿದೆ ಎಂಬ ಮಾಹಿತಿ ಬಂದಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಕ್ಷೇತ್ರದ ಉಪ ಚುನಾವಣೆಯನ್ನು ಮುಂದೂಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕಳೆದ ಶುಕ್ರವಾರ ಚೆನ್ನೈನ ವಿವಿಧೆಡೆಗಳಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಸಿಕ್ಕಿರುವ ದಾಖಲೆಗಳ ಪ್ರಕಾರ, ಈ ಚುನಾವಣೆಗೆ ಎಐಡಿಎಂಕೆ ಪಕ್ಷದ ಶಶಿಕಲಾ ನೇತೃತ್ವದ ಬಣ ಸುಮಾರು ₹ 100 ಕೋಟಿಯಷ್ಟು ಹಣವನ್ನು ಖರ್ಚು ಮಾಡುತ್ತಿದೆ. ಈ ಬಣ ಒಂದು ಮತಕ್ಕೆ ₹ 4000 ವರೆಗೂ ಮೊತ್ತ ನಿಗದಿಪಡಿಸಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಈ ಬಗ್ಗೆ ಐಟಿ ಅಧಿಕಾರಿಗಳು ಹೇಳಿರುವುದು ಹೀಗೆ…

‘ನಾವು ದಾಳಿಯ ಕುರಿತಾದ ವರದಿಯನ್ನು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಗೆ ಸಲ್ಲಿಸಿದ್ದೇವೆ. ಈ ದಾಳಿ ವೇಳೆ ಸಿಕ್ಕ ದಾಖಲೆಗಳನ್ನು ನಮ್ಮ ವರದಿಯಲ್ಲಿ ಸೇರಿಸಲಾಗಿದೆ. ಡ್ರಗ್ ಸಾಗಾಣೆ ಮಾಡುವವರಿಂದ ಲಂಚ ಪಡೆದು ಆರ್.ಕೆ ನಗರ ಮತದಾರರಿಗೆ ಹಂಚುತ್ತಿರುವ ಬಗ್ಗೆ ದಾಖಲೆಗಳು ಸಿಕ್ಕಿದ್ದು, ವರದಿಯಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾವ ನಾಯಕರ ಮೇಲೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ನಾವು ಈಗಲೇ ಹೇಳಲು ಸಾಧ್ಯವಿಲ್ಲ.’

ಐಟಿ ಅಧಿಕಾರಿಗಳ ದಾಳಿಯ ವೇಳೆ ಸಿಕ್ಕ ಕೆಲವು ದಾಖಲೆಗಳು ಮಾಧ್ಯಮಗಳಿಗೆ ಸೋರಿಕೆಯಾಗಿದ್ದು, ಇದರ ಆಧಾರದ ಮೇಲೆ ಬಂದಿರುವ ವರದಿಗಳು ಹೀಗಿವೆ… ‘ಶಶಿಕಲಾ ಅವರ ಬಣ, ₹ 89.50 ಕೋಟಿಯನ್ನು ಏಳು ಸಚಿವರಿಗೆ ಹಂಚಿದ್ದು, ಅವರು ಆರ್.ಕೆ ನಗರದ ಮತದಾರರಿಗೆ ತಲುಪಿಸುವ ಜವಾಬ್ದಾರಿ ಹೊತ್ತಿದ್ದಾರೆ. 2,24,145 ಮತದಾರರಿರುವ ಆರ್.ಕೆ ನಗರದಲ್ಲಿ ಶೇ.85 ರಷ್ಟು ಜನರಿಗೆ ಹಣ ಹಂಚುವ ಗುರಿ ಶಶಿಕಲಾ ಅವರ ಬಣದ್ದಾಗಿದೆ.’ ಈ ವರದಿಗಳನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿರುವ ವಿರೋಧ ಪಕ್ಷದ ನಾಯಕ ಎಂ.ಕೆ ಸ್ಟಾಲಿನ್, ‘ಈ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಯಬೇಕು. ಹಣ ಹಂಚಲು ಮುಂದಾಗಿರುವ ಸಚಿವರುಗಳು ಮುಂದೆ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಜಯಲಲಿತಾ ಅವರ ಕ್ಷೇತ್ರವನ್ನು ಗೆಲ್ಲುವ ಮೂಲಕ ಇಡೀ ಪಕ್ಷದ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಳ್ಳಬೇಕೆಂದು ಶಶಿಕಲಾ ಬಣ ಪಣ ತೊಟ್ಟಿರುವುದು ಸ್ಪಷ್ಟವಾಗಿದೆ.

Leave a Reply