ಎಬಿಡಿ ಆಡಿದ್ರು… ಆರ್ ಸಿಬಿ ಗೆಲ್ಲಿಲ್ಲ… ಕ್ರಿಸ್ ಗೇಲ್ ಕೈಬಿಟ್ಟಿದ್ದು ತಂಡಕ್ಕೆ ದುಬಾರಿಯಾಯ್ತೆ?

ಡಿಜಿಟಲ್ ಕನ್ನಡ ಟೀಮ್:

ಎಬಿ ಡಿವಿಲಿಯರ್ಸ್ ಆಟವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳ ಆಸೆ ಇಂದು ಈಡೇರಿತು. ಆದರೆ… ಎಬಿಡಿ ಹೊರತಾಗಿ ಇತರೆ ಆಟಗಾರರ ನೀರಸ ಪ್ರದರ್ಶನದಿಂದ ಆರ್ ಸಿಬಿ ತಂಡದ ಸೋಲಿಗೆ ಪ್ರಮುಖ ಕಾರಣವಾಯ್ತು. ಪಂದ್ಯದಲ್ಲಿ ಆರ್ ಸಿಬಿ ತಂಡ ಸಂಘಟಿತ ಪ್ರದರ್ಶನ ನೀಡಲು ಎಡವಿದ ಪರಿಣಾಮ ಆತಿಥೇಯ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 8 ವಿಕೆಟ್ ಗಳ ಅಂತರದಲ್ಲಿ ಸೋತು ತಲೆ ಬಾಗಿತು.

ಇಂಧೋರಿನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ತಪ್ಪು ನಿರ್ಧಾರ ತೆಗೆದುಕೊಂಡಿತು. ರಾತ್ರಿ ವೇಳೆ ಬೀಳುವ ಇಬ್ಬನಿಯಿಂದಾಗಿ ಬೌಲಿಂಗ್ ಹಾಗೂ ಫೀಲ್ಡಿಂಗ್ ಗೆ ಸವಾಲಾಗುವ ಸಾಧ್ಯತೆ ಇದ್ದರೂ ಆರ್ ಸಿಬಿ ನಾಯಕ ಶೇನ್ ವಾಟ್ಸನ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಬೃಹತ್ ಮೊತ್ತ ಪೇರಿಸುವ ಗುರಿಯೊಂದಿಗೆ ಕಣಕ್ಕಿಳಿದ ಆರ್ ಸಿಬಿ ಲೆಕ್ಕಾಚಾರ ಸಂಪೂರ್ಣವಾಗಿ ತಲೆಕೆಳಗಾಯಿತು. ಡಿವಿಲಿಯರ್ಸ್ ಹೊರತಾಗಿ ಇತರೆ ಬ್ಯಾಟ್ಸ್ ಮನ್ ಗಳು ನಿರೀಕ್ಷಿತ ಪ್ರದರ್ಶನ ನೀಡದ ಪರಿಣಾಮ ಆರ್ ಸಿಬಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 148 ರನ್ ಗಳನ್ನಷ್ಟೇ ಪೇರಿಸಲು ಶಕ್ತವಾಯಿತು. ಈ ಸಾಧಾರಣ ಗುರಿ ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ತಂಡ 14.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿ ಜಯ ಸಾಧಿಸಿತು.

ಈ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ತಂಡಕ್ಕೆ ಮರಳಿದ್ದು ಬಲಬಂದಂತಾಯಿತಾದರೂ, ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರನ್ನು ಕೈ ಬಿಟ್ಟಿದ್ದು ಆರ್ ಸಿಬಿ ಪಾಲಿಗೆ ದುಬಾರಿ ನಿರ್ಧಾರವಾಯಿತು. ಗೇಲ್ ರನ್ನು ತಂಡದಿಂದ ಕೈಬಿಟ್ಟಿದ್ದಾದರೂ ಏಕೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿತು. ಒಂದು ತಂಡದಲ್ಲಿ ಕೇವಲ ನಾಲ್ಕು ವಿದೇಶಿ ಆಟಗಾರರು ಆಡಲು ಅವಕಾಶ ಇರುವುದರಿಂದ ಆರ್ ಸಿಬಿ ಎಬಿ ಡಿವಿಲಿಯರ್ಸ್ ರನ್ನು ಸೇರಿಸಿಕೊಂಡು ಗೇಲ್ ಅವರನ್ನು ಕೈಬಿಟ್ಟಿತು. ಕಳೆದ ಪಂದ್ಯದಲ್ಲಿ ಇಬ್ಬರು ವಿದೇಶಿ ಬೌಲರ್ ಗಳಾಗ ಸ್ಟಾನ್ಲೇಕ್ ಹಾಗೂ ಮಿಲ್ಸ್ ಉತ್ತಮ ಪ್ರದರ್ಶನ ನೀಡಿದ್ದರಿಂದ ಬೌಲಿಂಗ್ ನಲ್ಲಿ ಯಾವುದೇ ಬದಲಾವಣೆ ಮಾಡಲು ಆರ್ ಸಿಬಿ ಧೈರ್ಯ ಮಾಡಲಿಲ್ಲ. ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಶೇನ್ ವಾಟ್ಸನ್ ನಾಯಕರಾಗಿದ್ದರು. ಉಳಿದ ಒಂದು ಸ್ಥಾನದಲ್ಲಿ ಡಿವಿಲಿಯರ್ಸ್ ಗೆ ಜಾಗ ನೀಡಲು ಗೇಲ್ ತಂಡದಿಂದ ಹೊರಗುಳಿಯಬೇಕಾಯಿತು.

ಹೀಗೆ ಗೇಲ್ ಅವರನ್ನು ಕೈಬಿಟ್ಟು ಕಣಕ್ಕಿಳಿದ ಆರ್ ಸಿಬಿ ತಂಡ ಇನಿಂಗ್ಸ್ ನ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಲು ಸಾಧ್ಯವಾಗಲಿಲ್ಲ. ಗೇಲ್ ಅನುಪಸ್ಥಿತಿಯನ್ನು ಬಳಸಿಕೊಂಡ ಪಂಜಾಬ್ ಪಡೆ ಶಿಸ್ತುಬದ್ಧ ದಾಳಿ ನಡೆಸಿತು. ಪರಿಣಾಮ ಆರ್ ಸಿಬಿ ಆರಂಭಿಕ 15 ಓವರ್ ಗಳಲ್ಲಿ ಗಳಿಸಿದ್ದು ಕೇವಲ 71 ರನ್ ಮಾತ್ರ. ಇದು ಸಹಜವಾಗಿಯೇ ತಂಡದ ರನ್ ಅಭಾವಕ್ಕೆ ಕಾರಣವಾಯಿತು. ಆರಂಭಿಕರಾಗಿ ಕಣಕ್ಕಿಳಿದ ವಾಟ್ಸನ್ (1), ವಿನೋದ್ (7), ಜಾಧವ್ (1) ಹೀಗೆ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಬೇಗನೆ ಪೆವಿಲಿಯನ್ ಸೇರಿಕೊಂಡರು. ಪರಿಣಾಮ ತಂಡದ ಮೇಲೆ ಒತ್ತಡ ಏರಿತು. ಈ ವೇಳೆ ರಕ್ಷಣಾತ್ಮಕ ಆಟಕ್ಕೆ ಮೋರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಯಿತು. ಇನಿಂಗ್ಸ್ ನ ಅಂತಿಮ ಘಟ್ಟದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಡಿವಿಲಿಯರ್ಸ್ (ಅಜೇಯ 89 ರನ್, 46 ಎಸೆತ, 3 ಬೌಂಡರಿ, 9 ಸಿಕ್ಸರ್) ತಂಡ ಗೌರವಾನ್ವಿತ ಮೊತ್ತ ಗಳಿಸುವಂತೆ ನೋಡಿಕೊಂಡರು. ಡಿವಿಲಿಯರ್ಸ್ ಗಳಿಸಿದ ರನ್ ಅನ್ನು ಹೊರತು ಪಡಿಸಿದ್ರೆ ಆರ್ ಸಿಬಿ ತಂಡದ ಮೊತ್ತ ಕೇವಲ 57 ರನ್ ಮಾತ್ರ. ಇದು ಇನಿಂಗ್ಸ್ ಆರಂಭದಲ್ಲಿ ಆರ್ ಸಿಬಿ ತಂಡ ಕ್ರಿಸ್ ಗೇಲ್ ಅವರ ಆಕ್ರಮಣಕಾರಿ ಆಟದ ಅನುಪಸ್ಥಿತಿಗೆ ಸಾಕ್ಷಿಯಾಗಿತ್ತು.

ಆರ್ ಸಿಬಿ ನೀಡಿದ ಗುರಿ ಬೆನ್ನಟ್ಟಲು ಆರಂಭಿಸಿದ ಕಿಂಗ್ಸ್ ಇಲೆವೆನ್ ಪಡೆ ಯಾವುದೇ ಹಂತದಲ್ಲೂ ಒತ್ತಡಕ್ಕೆ ಸಿಲುಕಲೇ ಇಲ್ಲ. ಆರಂಭಿಕರಾದ ವೊಹ್ರಾ (34), ಆಮ್ಲಾ (ಅಜೇಯ 58, 38 ಎಸೆತ) 62 ರನ್ ಗಳ ಜತೆಯಾಟ ನೀಡಿ ಉತ್ತಮ ಆರಂಭ ನೀಡಿದರು. ನಂತರ ಬಂದ ಮ್ಯಾಕ್ಸ್ ವೆಲ್ (ಅಜೇಯ 43, 22 ಎಸೆತ) ತಂಡವನ್ನು ಸುಲಭವಾಗಿ ಗೆಲುವಿನತ್ತ ಕೊಂಡೊಯ್ದರು. ಆರ್ ಸಿಬಿ ಈ ಪಂದ್ಯದಲ್ಲಿ ಸೋಲುವ ಮೂಲಕ ಆಡಿದ ಮೂರು ಪಂದ್ಯಗಳಲ್ಲಿ 2ರಲ್ಲಿ ಸೋತು 1ರಲ್ಲಿ ಗೆದ್ದು 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇತ್ತ ಕಿಂಗ್ಸ್ ಇಲೆವೆನ್ ತಂಡ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು 4 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿದೆ.

ಈ ಪಂದ್ಯ ನಡೆದಿದ್ದು ಪಂಜಾಬ್ ತವರಿನ ಅಂಗಣದಲ್ಲಾದರೂ ಪ್ರೇಕ್ಷಕರ ಸಂಪೂರ್ಣ ಬೆಂಬಲ ಸಿಕ್ಕಿದ್ದು ಮಾತ್ರ ಆರ್ ಸಿಬಿ ತಂಡಕ್ಕೆ. ಎಬಿ ಡಿವಿಲಿಯರ್ಸ್ ಒಂದೊಂದು ಹೊಡೆತಕ್ಕೂ ಕುಣಿದು ಕುಪ್ಪಳಿಸಿದ ಪ್ರೇಕ್ಷಕರು ತಂಡ ಸೋತಾಗ ನಿರಾಸೆಯಾಗೊಂಡರು. ಇದು ಆರ್ ಸಿಬಿ ತಂಡದ ಅಭಿಮಾನಿ ಬಳಗ ಎಷ್ಟರ ಮಟ್ಟಿಗೆ ವಿಸ್ತರಿಸಿದೆ ಎಂಬುದಕ್ಕೆ ಸಾಕ್ಷಿಯಾಗಿತ್ತು.

Leave a Reply