ಹುತಾತ್ಮ ಯೋಧರ ಕುಟುಂಬಕ್ಕೆ ಆಸರೆಯಾಗುವ ಅಕ್ಷಯ್ ಕುಮಾರ್ ಕನಸಿಗೆ ಬಂತು ಜೀವ!

ಡಿಜಿಟಲ್ ಕನ್ನಡ ಟೀಮ್:

ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರತೀಯ ಯೋಧರ ಬಗ್ಗೆ ವಿಶೇಷ ಕಾಳಜಿ ಹೊಂದಿರುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಮೂಲತಃ ಯೋಧನ ಮಗನಾಗಿರುವ ಅಕ್ಷಯ್ ಕುಮಾರ್ ಈ ಹಿಂದೆ ದೇಶಕ್ಕಾಗಿ ಪ್ರಾಣ ಬಿಟ್ಟು ಹುತಾತ್ಮರಾದ ಸೈನಿಕರ ಕುಟುಂಬಕ್ಕೆ ನೆರವಾಗಿರುವ ಅನೇಕ ಉದಾಹರಣೆಗಳನ್ನು ಕಂಡಿದ್ದೇವೆ. ಈ ನೆರವಿನ ಕಾರ್ಯವನ್ನು ವಿಸ್ತರಿಸುವ ಅಕ್ಷಯ್ ಕುಮಾರ್ ಅವರ ಕನಸಿಗೆ ಈಗ ಜೀವ ಬಂದಿದೆ. ಅದೇನೆಂದರೆ ಹುತಾತ್ಮ ಯೋಧರ ಕುಟುಂಬಕ್ಕೆ ಪರಿಹಾರ ನೀಡಲು ಅಕ್ಷಯ್ ಕುಮಾರ್ ಒಂದು ವೇದಿಕೆ ಕಲ್ಪಿಸಬೇಕು ಎಂಬ ಕನಸಿಗೆ ಕೇಂದ್ರ ಸರ್ಕಾರ ಜೀವ ತುಂಬಿದೆ. ಅದುವೇ bharatkeveer.gov.in ವೆಬ್ ಸೈಟ್.

ಹೌದು, ಮೂರು ತಿಂಗಳ ಹಿಂದೆಯಷ್ಟೇ ದೇಶಕ್ಕಾಗಿ ಪ್ರಾಣ ಬಿಡುವ ವೀರ ಯೋಧರ ಕುಟುಂಬಕ್ಕೆ ನೆರವಾಗಲು ಸಾರ್ವಜನಿಕರಿಗೆ ಒಂದು ವೇದಿಕೆ ಕಲ್ಪಿಸಬೇಕಿದೆ ಎಂಬ ಆಲೋಚನೆ ಅಕ್ಷಯ್ ಕುಮಾರ್ ಅವರಿಗೆ ಬಂತು. ಸಾಮಾಜಿಕ ಜಾಲತಾಣಗಳಲ್ಲೂ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರದ ಜತೆಗೂ ಚರ್ಚಿಸಿದ್ದರು. ಇದನ್ನು ಪರಿಗಣಿಸಿದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದು, ಭಾನುವಾರ ನಡೆದ ಸಿಆರ್ ಪಿಎಫ್ ಶೌರ್ಯ ದಿನ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಈ ವೆಬ್ ಸೈಟ್ ಅನ್ನು ಉದ್ಘಾಟಿಸಿದ್ದಾರೆ, ಇದರೊಂದಿಗೆ ಅಕ್ಷಯ್ ಕುಮಾರ್ ಅವರ ಕನಸಿನ ಯೋಜನೆ ಒಂದು ಸ್ವರೂಪ ಪಡೆದು ಜೀವತಾಳಿದೆ. ಅಂದಹಾಗೆ ಈ ವೆಬ್ ಸೈಟ್ ಮೂಲಕ ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ ಯೋಧರ ಕುಟುಂಬಕ್ಕೆ ಸಾರ್ವಜನಿಕರು ₹ 15 ಲಕ್ಷದವರೆಗೂ ದಾನ ಮಾಡಬಹುದು.

ಸಿಆರ್ ಪಿಎಫ್, ಸಿಐಎಸ್ಎಫ್, ಬಿಎಸ್ಎಫ್, ಐಟಿಬಿಪಿ, ಎಸ್ಎಸ್ ಬಿ ನಂತಹ ವಿವಿಧ ಭದ್ರತಾ ಪಡೆಗಳ ಸಾವಿರಾರು ಯೋಧರನ್ನು ಉದ್ದೇಶಿಸಿ ಮಾತನಾಡಿದ ಅಕ್ಷಯ್ ಕುಮಾರ್ ಹೇಳಿದಿಷ್ಟು…

‘ನಾನಿಂದು ಒಬ್ಬ ನಟನಾಗಿ ನಿಮ್ಮ ಮುಂದೆ ನಿಂತಿಲ್ಲ. ಒಬ್ಬ ಸೈನಿಕನ ಮಗನಾಗಿ ನಿಂತಿದ್ದೇನೆ. ದೇಶದ ಕೆಲವು ಯುವಕರ ಮನಸನ್ನು ಬೇರೆಡೆಗೆ ಸೆಳೆದು ತಪ್ಪು ದಾರಿ ತುಳಿಯುವಂತೆ ಮಾಡಲಾಗುತ್ತಿದೆ. ಆದರೆ ಅಂತಹವರ ಬೆಂಬಲಕ್ಕೆ ಕೆಲವೇ ಜನರಿದ್ದಾರೆ ಎಂಬ ಸತ್ಯ ಅವರಿಗೆ ತಿಳಿದಿಲ್ಲ. ನಮ್ಮ ಯೋಧರು ಅಂತಹವರ ವಿರುದ್ಧ ಹೋರಾಡುತ್ತಿದ್ದಾರೆ. ಹೀಗಾಗಿ ನಮ್ಮ ಯೋಧರಿಗೆ ದೇಶದ 125 ಕೋಟಿ ಜನರ ಬೆಂಬಲ ಬೇಕಿದೆ. ಯೋಧರು ಉತ್ತಮ ಕೆಲಸ ಮಾಡುತ್ತಿರುವಾಗ ಜನರು ಉತ್ತಮ ಕೆಲಸಗಳಲ್ಲಿ ಭಾಗಿಯಾಗಬೇಕಿದೆ.’

ಇದೇವೇಳೆ ಮಾತನಾಡಿದ ರಾಜನಾಥ್ ಸಿಂಗ್, ‘ನಮ್ಮ ಯೋಧರು ದೇಶಕ್ಕಾಗಿ ಪ್ರಾಣ ಅರ್ಪಿಸಿದರೆ ಅವರ ಕುಟುಂಬಕ್ಕೆ ಕನಿಷ್ಟ ₹  ಕೋಟಿ ಪರಿಹಾರ ಮೊತ್ತ ಸಿಗುವಂತಾಗಬೇಕು ಎಂಬುದು ನಮ್ಮ ಉದ್ದೇಶ. ಸದ್ಯ ಹುತಾತ್ಮ ಯೋಧರ ಕುಟುಂಬಕ್ಕೆ ₹ 40 ಲಕ್ಷದಿಂದ ₹ 50 ಲಕ್ಷದ ವರೆಗೂ ಪರಿಹಾರ ನೀಡಲಾಗುತ್ತಿದೆ. ಇದನ್ನು ₹ 1 ಕೋಟಿಗೆ ವಿಸ್ತರಿಸುವಂತಾಗಬೇಕು. ಕೆಲವು ರಾಜ್ಯಗಳಲ್ಲಿ ಹುತಾತ್ಮ ಯೋಧರ ಕುಟುಂಬಕ್ಕೆ ನೀಡಲಾಗುವ ಪರಿಹಾರ ಕಡಿಮೆ ಇದ್ದು ಅದ್ದನ್ನು ಹೆಚ್ಚಿಸುವ ಬಗ್ಗೆ ಸೂಚನೆ ನೀಡಿದ್ದೇವೆ’ ಎಂದರು.

ಇತ್ತೀಚೆಗೆ ಸುಖ್ಮಾ ಪ್ರದೇಶದಲ್ಲಿ ನಕ್ಸಲರ ದಾಳಿಗೆ ಬಲಿಯಾದ 11 ಯೋಧರ ಕುಟುಂಬಕ್ಕೆ ಅಕ್ಷಯ್ ಕುಮಾರ್ ₹ 1.09 ಕೋಟಿಯಷ್ಟು ಹಣ ನೀಡಿ ಆಸರೆಯಾಗಿದ್ದಾರೆ. ಆ ಮೂಲಕ ಇತರರು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿಯಾಗಿದ್ದಾರೆ. ಒಟ್ಟಿನಲ್ಲಿ ತಮ್ಮ ಸಾಹಸ ಹಾಗೂ ದೇಶಭಕ್ತಿ ಆಧಾರಿತ ಚಿತ್ರಗಳ ಮೂಲಕ ಸಾಕಷ್ಟು ಯುವಕರಿಗೆ ಅಕ್ಷಯ್ ಕುಮಾರ್ ಸ್ಫೂರ್ತಿಯಾಗಿದ್ದರೆ, ಆದರೆ ಅಕ್ಷಯ್ ಕುಮಾರ್ ಅವರಿಗೆ ನಮ್ಮ ಯೋಧರೇ ಸ್ಫೂರ್ತಿ.

Leave a Reply