‘ನಾನು ಆಡಲು ಸಿದ್ಧ… ಆದ್ರೆ ಒಂದು ಕಂಡೀಷನ್’ ಅಂತಿದ್ದಾರೆ ಎಬಿ ಡಿವಿಲಿಯರ್ಸ್

ಡಿಜಿಟಲ್ ಕನ್ನಡ ಟೀಮ್:

ಪ್ರಸಕ್ತ ಐಪಿಎಲ್ ಋತುವಿನಲ್ಲಿ ಕ್ರಿಕೆಟ್ ಅಭಿಮಾನಿಗಳು ಎಬಿ ಡಿವಿಲಿಯರ್ಸ್ ಅನುಪಸ್ಥಿತಿ ಎದುರಿಸುತ್ತಿದ್ದಾರೆ. ಗಾಯದ ಸಮಸ್ಯೆಯಿಂದ ಪೂರ್ಣ ಗುಣಮುಖರಾಗದ ಹಿನ್ನೆಲೆಯಲ್ಲಿ ಎಬಿ ಡಿವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ. ಈಗ ತಾನು ಕಣಕ್ಕಿಲಿಯಲು ಸಿದ್ಧವಾಗಿರುವುದಾಗಿ ತಿಳಿಸಿರುವ ಡಿವಿಲಿಯರ್ಸ್ ಒಂದು ಕಂಡೀಷನ್ ಹಾಕಿದ್ದಾರೆ. ಅದೇನಂದ್ರೆ, ‘ನಾನು ಆಡುತ್ತೇನೆ ಆದರೆ ವಿಕೆಟ್ ಕೀಪಿಂಗ್ ಮಾಡುವುದಿಲ್ಲ’ ಎಂದು.

ಕಳೆದ ಆವೃತ್ತಿಯಲ್ಲಿ ಆರ್ ಸಿಬಿ ತಂಡದ ಪರ ವಿಕೆಟ್ ಕೀಪಿಂಗ್ ಮಾಡಿದ್ದು, ಕೆ.ಎಲ್ ರಾಹುಲ್. ಈ ಬಾರಿ ಭುಜದ ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ರಾಹುಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ತಂಡದ ಪರ ಯಾರು ಕೀಪಿಂಗ್ ಮಾಡುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದ್ದಾಗ ಎಲ್ಲರ ನೋಟ ನೆಟ್ಟಿದ್ದು ಡಿವಿಲಿಯರ್ಸ್ ಕಡೆಗೆ. ಆದರೆ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಡಿವಿಲಿಯರ್ಸ್ ವಿಕೆಟ್ ಕೀಪಿಂಗ್ ಹೊರೆ ಹೊತ್ತುಕೊಳ್ಳಲು ಸಿದ್ಧರಿಲ್ಲ. ಹೀಗಾಗಿ ಅವರು ವಿಕೆಟ್ ಕೀಪಿಂಗ್ ಮಾಡಲು ಬಿಲ್ ಕುಲ್ ಸಿದ್ಧರಿಲ್ಲ. ಇತ್ತೀಚೆಗಷ್ಟೇ ವಿಕೆಟ್ ಕೀಪಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಡಿವಿಲಿಯರ್ಸ್, ‘ಒಂದು ವೇಳೆ ನಾನು ವಿಕೆಟ್ ಕೀಪಿಂಗ್ ಮಾಡಲು ಆರಂಭಿಸಿದರೆ, ಮುಂದಿನ ಐದು ವರ್ಷಗಳ ಆಟದಿಂದ ದೂರ ಉಳಿಯಬೇಕಾಗುತ್ತದೆ’ ಎಂದು ಹೇಳಿದ್ದರು.

ಈ ಮಧ್ಯೆ ರಾಹುಲ್ ಹಾಗೂ ಡಿವಿಲಿಯರ್ಸ್ ಅನುಪಸ್ಥಿತಿಯಲ್ಲಿ ಆರ್ ಸಿಬಿ ತಂಡದ ಮೊದಲ ಪಂದ್ಯದಲ್ಲಿ ಕೇದಾರ್ ಜಾಧವ್ ಈ ಜವಾಬ್ದಾರಿ ಹೊತ್ತಿದ್ದರು. ಇನ್ನು ಡೆರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಬದಲಿಗೆ ಸ್ಥಾನಕ್ಕೆ ಆಯ್ಕೆಯಾಗಿರುವ ಕೇರಳದ ಯುವ ವಿಕೆಟ್ ಕೀಪರ್ ವಿಷ್ಣು ವಿನೋದ್ ಕೀಪಿಂಗ್ ಮಾಡಿದ್ದರು. ಹೀಗಾಗಿ ಸದ್ಯಕ್ಕೆ ಆರ್ ಸಿಬಿ ವಿಕೆಟ್ ಕೀಪಿಂಗ್ ಸಮಸ್ಯೆ ಬಗೆಹರಿದಿದ್ದು, ಡಿವಿಲಿಯರ್ಸ್ ಕಣಕ್ಕಿಳಿಯಲು ಯಾವುದೇ ಅಡ್ಡಿ ಇಲ್ಲ. ಇನ್ನು ತಮ್ಮ ಫಿಟ್ನೆಸ್ ಹಾಗೂ ತಂಡದ ಪರ ಕಣಕ್ಕಿಳಿಯುವ ಬಗ್ಗೆ ಡಿವಿಲಿಯರ್ಸ್ ಹೇಳಿರುವುದಿಷ್ಟು…

‘ಆದಷ್ಟು ಬೇಗ ಕಣಕ್ಕಿಳಿಯಲು ಸಾಕಷ್ಟು ಕಾತುರನಾಗಿದ್ದೇನೆ. ಆದರೆ, ಶೇ.100 ರಷ್ಟು ಫಿಟ್ ಆಗದ ಹೊರತಾಗಿ ನಾನು ಕಣಕ್ಕಿಳಿಯುವುದಿಲ್ಲ. ಒಂದು ವೇಳೆ ಸಂಪೂರ್ಣವಾಗಿ ಫಿಟ್ ಆಗದೇ ಕಣಕ್ಕಿಳಿದರೆ, ನಂತರ ಇನ್ನು ಹೆಚ್ಚಿನ ಕಾಲ ಮೈದಾನದಿಂದ ದೂರ ಉಳಿಯಬೇಕಾಗಬಹುದು. ಹೀಗಾಗಿ ಆತುರದಲ್ಲಿ ಕಣಕ್ಕಿಳಿಯುವುದರಲ್ಲಿ ಅರ್ಥವಿಲ್ಲ. ಅಭ್ಯಾಸದ ವೇಳೆ ನನ್ನ ಫಿಟ್ನೆಸ್ ಪರೀಕ್ಷಿಸಿ ನಂತರ ನಾನು ಕಣಕ್ಕಿಳಿಯಲು ಸಮರ್ಥನೋ ಇಲ್ಲವೋ ಎಂಬುದನ್ನು ನಿರ್ಧರಿಸುತ್ತೇನೆ. ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ವಿಶ್ವಾಸ ಇದೆ.’

Leave a Reply