ಗೆಲ್ಲುವ ಪಂದ್ಯವನ್ನು ಸೋಲುವುದು ಹೇಗೆ ಎಂದು ತೋರಿಸಿಕೊಟ್ಟ ಕೆಕೆಆರ್, ಮುಂಬೈ ಪಾಲಿಗೆ ಹಿರೋ ಆದ ರಾಣಾ

ಡಿಜಿಟಲ್ ಕನ್ನಡ ಟೀಮ್:

ಗೆಲ್ಲುವ ಪಂದ್ಯವನ್ನು ಹೇಗೆ ಸೋಲಬಹುದು ಎಂದು ತೋರಿಸಿಕೊಟ್ಟಿದೆ ಕೋಲ್ಕತಾ ನೈಟ್ ರೈಡರ್ಸ್. ಪಂದ್ಯದುದ್ದಕ್ಕು ಶಿಸ್ತಿನ ಪ್ರದರ್ಶನ ನೀಡಿ ಗೆಲುವಿಗೆ ಸನಿಹವಾದಾಗ ಎಸಗಿದ ಸ್ವಯಂಕೃತ ತಪ್ಪುಗಳು ಕೆಕೆಆರ್ ತಂಡಕ್ಕೆ ಮುಳುವಾಗಿ ಪರಿಣಮಿಸಿತು. ಪರಿಣಾಮ ಆತಿಥೇಯ ಮುಂಬೈ ಇಂಡಿಯನ್ಸ್ ತಂಡ ಜಯದ ನಗೆ ಬೀರಿತು.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 4 ವಿಕೆಟ್ ಗಳ ಅಂತರದಲ್ಲಿ ಜಯಿಸಿತು. ಅದರೊಂದಿಗೆ ಮೊದಲ ಪಂದ್ಯದಲ್ಲಿ ಅನುಭವಿಸಿದ ಸೋಲನ್ನು ಮರೆತು ವಿಜಯದ ಹಾದಿಗೆ ಬಂದಿದೆ. ಇತ್ತ ಕೆಕೆಆರ್ ತಂಡ ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದಿತ್ತಾದರೂ ಈ ಪಂದ್ಯ ಸೋತು ಕೈ ಕೈ ಹಿಸುಕಿಕೊಂಡಿತು. ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಕರ್ನಾಟಕದ ಆಟಗಾರ ಮನೀಷ್ ಪಾಂಡೆ (ಅಜೇಯ 81 ರನ್, 47 ಎಸೆತ) ಆಕರ್ಷಕ ಇನಿಂಗ್ಸ್ ನೆರವಿನಿಂದ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 178 ರನ್ ಕಲೆ ಹಾಕಿತು. ಈ ಮೊತ್ತ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್, ನಿತೀಶ್ ರಾಣಾ (50 ರನ್, 29 ಎಸೆತ) ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ 19.5 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 180 ರನ್ ದಾಖಲಿಸಿತು.

ಕಳೆದ ಪಂದ್ಯದಲ್ಲಿ ವಿಕೆಟ್ ಕಳೆದುಕೊಳ್ಳದೇ ದಾಖಲೆಯ ಜತೆಯಾಟವಾಡಿ ಗೆದ್ದಿದ್ದ ಕೆಕೆಆರ್, ಇಂದು ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ವೈಫಲ್ಯ ಎದುರಿಸಿತು. ಈ ಹಂತದಲ್ಲಿ ತಂಡದ ಜವಾಬ್ದಾರಿ ಹೊತ್ತಿದ್ದು ಮನೀಷ್ ಪಾಂಡೆ. 5 ಬೌಂಡರಿ ಹಾಗೂ 5 ಸಿಕ್ಸರ್ ಬಾರಿಸಿ ತಂಡಕ್ಕೆ ಹೊಸ ಉತ್ಸಾಹ ತುಂಬಿದರು. ಹೀಗೆ ಮುಂಬೈ ಪಡೆಗೆ ಸ್ಪರ್ಧಾತ್ಮಕ ಗುರಿ ನೀಡಿದ ಕೆಕೆಆರ್, ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿತ್ತು. ಮುಂಬೈ ಇನಿಂಗ್ಸ್ ನ 17ನೇ ಓವರ್ ವರೆಗೂ ಬೌಲಿಂಗ್ ನಲ್ಲಿ ಶಿಸ್ತುಬದ್ಧ ದಾಳಿ ನಡೆಸಿದ ಕೆಕೆಆರ್ ಈ ಪಂದ್ಯವನ್ನು ಗೆಲ್ಲುವ ಸೂಚನೆ ನೀಡಿತ್ತು. ಆದರೆ ಅಂತಿಮ ಮೂರು ಓವರ್ ಗಳಲ್ಲಿ ಕ್ಷೇತ್ರ ರಕ್ಷಣೆಯಲ್ಲಿ ಎಡವಿದ್ದು ಹಾಗೂ ಬೌಲರ್ ಗಳ ಸಡಿಲ ಎಸೆತಗಳು ಮುಂಬೈ ಇಂಡಿಯನ್ಸ್ ಪಾಲಿಗೆ ವರದಾನವಾದವು. ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಮುಂಬೈ ಆಟಗಾರರಾದ ನಿತೀಶ್ ರಾಣಾ ಹಾಗೂ ಹಾರ್ದಿಕ್ ಪಾಂಡ್ಯ (ಅಜೇಯ 29, 11 ಎಸೆತ) ಬೌಂಡರಿ, ಸಿಕ್ಸರ್ ಬಾರಿಸಿದರು. ಅಂತಿಮ ಮೂರು ಓವರ್ ಗಳಲ್ಲಿ 50 ರನ್ ಕಲೆ ಹಾಕುವ ಮೂಲಕ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿ ಜಯದ ಹಾದಿಯಲ್ಲಿ ಮುನ್ನಡೆಸಿದರು. ಆಕರ್ಷಕ ಬ್ಯಾಟಿಂಗ್ ಮಾಡಿದ ನಿತೀಶ್ ರಾಣಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Leave a Reply