ಯಡಿಯೂರಪ್ಪ, ಸಿದ್ರಾಮಯ್ಯ ಹೋರಾಟ ಮೀರಿಸಿದ ಜಾತಿ, ದುಡ್ಡಿನ ಹಾರಾಟ!

ಮುಂದಿನ ವಿಧಾನಸಭೆ ಚುನಾವಣೆ, ಮುಂದಿನ ಸರಕಾರ, ಮುಂದಿನ ಮುಖ್ಯಮಂತ್ರಿ – ಈ ಎಲ್ಲವುದರ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರದ ಮರುಚುನಾವಣೆ ಭಾನುವಾರ ಮುಗಿದಿದೆ. ತಿಂಗಳೊಪ್ಪತ್ತಿನಿಂದ ನಿಧಾನವಾಗಿ ಗರಿಗೆದರಿ, ಹತ್ತು ದಿನಗಳಿಂದ ಇಡೀ ರಾಜ್ಯಾಡಳಿತ ತಮ್ಮ ಸುತ್ತಲೇ ಸುತ್ತುವಂತೆ ಮಾಡಿಕೊಂಡಿದ್ದ ಈ ಎರಡೂ ಕ್ಷೇತ್ರಗಳ ಚುನಾವಣೆಯು ಕಣದಲ್ಲಿದ್ದ ಅಭ್ಯರ್ಥಿಗಳ ರಾಜಕೀಯ ಭವಿಷ್ಯದ ಆಚೆಗೆ ಅನೇಕ ಆಯಾಮಗಳನ್ನು ತೆರೆದಿಟ್ಟಿದೆ. ಅವುಗಳಲ್ಲಿ ಬಹುಮುಖ್ಯ ಸ್ಥಾನ ಪಡೆದುಕೊಂಡಿರುವುದು ಹಣ ಮತ್ತು ಜಾತಿ.

ನಿಜ, ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ಮತದಾರರ ಭಾವನೆಗಳನ್ನು ಅಳೆಯಲು ಉರುಳಿಸಿದ್ದು ಆ ಎರಡೂ ದಾಳಗಳನ್ನೇ. ಯಾರೂ ಹೆಚ್ಚೂ ಇಲ್ಲ, ಯಾರೂ ಕಡಿಮೆಯೂ ಇಲ್ಲ. ಸೇರಿಗೆ ಸವ್ವಾಸೇರು ಎಂಬಂತೆ ಒಬ್ಬರನ್ನು ಮೀರಿಸಿ ಮತ್ತೊಬ್ಬರು ಜಾತಿ ಮತ್ತು ಹಣಬಲ ಬಳಸಿ ಚುನಾವಣೆಯ ಮೂಲಗುಣವನ್ನೇ ಮಣ್ಣು ಮಾಡಿದ್ದಾರೆ. ಕ್ಲೀಷೆ ಎನಿಸಿದರೂ ಹಣದ ಹುಚ್ಚು ಕೋಡಿಯನ್ನೇ ಹರಿಸಿದ್ದಾರೆ. ಮತದಾನದ ಕೊನೆಯ ಎರಡು ದಿನಗಳಲ್ಲಂತೂ ಬೆಲೆಯೇ ಇಲ್ಲದಂತೆ ದುಡ್ಡು ಚೆಲ್ಲಾಡಿದ್ದಾರೆ. ಚುನಾವಣೆ ನೀತಿ ಸಂಹಿತೆ, ಮತದಾರರ ಆತ್ಮಗೌರವವನ್ನೇ ಅಣಕ ಮಾಡುವಷ್ಟರ ಮಟ್ಟಿಗೆ ಹಣದ ದರ್ಪ ಮೆರೆದಿದ್ದಾರೆ. ಹಾಗೆಂದು ಮತದಾರರೂ ಕಡಿಮೆಯೇನಿಲ್ಲ. ರಾಜಕೀಯ ಪಕ್ಷಗಳೇ ನಾಚಿ ನೀರಾಗುವಂತೆ ಅವರ ಮನೋಗುಣಕ್ಕೆ ಅನುಗುಣವಾಗಿ ತಮ್ಮನ್ನು ರಬ್ಬರ್ ಗೊಂಬೆಗಳಾಗಿ ಪರಿವರ್ತಿಸಿಕೊಂಡಿದ್ದಾರೆ. ಅವರು ಒಡ್ಡಿದ ಆಮಿಷ, ಬೀಸಿದ ಜಾಲದಿಂದ ತಪ್ಪಿಸಿಕೊಳ್ಳಲು ಅವರಿಂದಾಗಲಿಲ್ಲ. ಅದೇ ಈ ಚುನಾವಣೆಯ ಹೈಲೈಟ್!

ಕೆಲವು ಕಡೆ ಕ್ಷೇತ್ರಗಳ ಅಭ್ಯರ್ಥಿಗಳು ಮುಖ್ಯರಾಗುತ್ತಾರೆ. ಇನ್ನೂ ಕೆಲವು ಕಡೆ ಪಕ್ಷಗಳು ಮುಖ್ಯವೆನಿಸುತ್ತವೆ. ಇನ್ನೂ ಕೆಲವು ಕಡೆ ಆ ಪಕ್ಷಗಳ ನಾಯಕರು ಮುಖ್ಯರಾಗುತ್ತಾರೆ. ಒಂದು ಚುನಾವಣೆಯಲ್ಲಿ ಈ ಮೂರೂ ಅಂಶಗಳು ಬಿಡಿಬಿಡಿಯಾಗಿ ಕೆಲಸ ಮಾಡಬಹುದು, ಇಲ್ಲವೇ ಎಲ್ಲದರ ಸಮ್ಮಿಶ್ರಸಾರ ಫಲಿತಾಂಶದಲ್ಲಿ ಹೊಮ್ಮಬಹುದು. ಆದರೆ ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಅಭ್ಯರ್ಥಿಗಳ ಬಗ್ಗೆ ಜನರ ಮೂಲ ಒಲವು-ನಿಲುವು ಬದಲಿಸುವಲ್ಲಿ ಎರಡೂ ಪಕ್ಷದ ನಾಯಕರು ಶಕ್ತಿ ಮೀರಿ ಶ್ರಮಿಸಿದ್ದಾರೆ. ಅಭ್ಯರ್ಥಿಗಳನ್ನು ನೆಪವಾಗಿಸಿ ತಮ್ಮನ್ನೇ ನಿಜಾರ್ಥದಲ್ಲಿ ಅಭ್ಯರ್ಥಿಗಳನ್ನಾಗಿ ಮಾಡಿಕೊಂಡಿದ್ದಾರೆ. ಹೀಗಾಗಿ ಇದು ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ನಡುವಣ ನೇರ ಸಮರವೆಂಬುದು ಸರಿ ಪ್ರಯೋಗ.

ನಂಜನಗೂಡಿನಲ್ಲಿ ಮತ್ತೊಂದು ಹೆಚ್ಚುವರಿ ಅಂಶ ಅಡಕವಾಗಿದೆ. ಇಲ್ಲಿ ಸಿದ್ದರಾಮಯ್ಯನವರಿಗೆ ಬರೀ ಯಡಿಯೂರಪ್ಪ ಅವರೊಬ್ಬರೇ ಅಲ್ಲ, ಕಾಂಗ್ರೆಸ್ ತೊರೆದು ಬಿಜೆಪಿ ಅಭ್ಯರ್ಥಿ ಆಗಿರುವ ಶ್ರೀನಿವಾಸ ಪ್ರಸಾದ್ ಕೂಡ ಸಮರವೈರಿಯೇ. ಸಿದ್ದರಾಮಯ್ಯನವರು ಈ ಎರಡೂ ಕ್ಷೇತ್ರಗಳ ಪೈಕಿ ನಂಜನಗೂಡನ್ನು ಅತ್ಯಂತ ಪ್ರತಿಷ್ಠಿತ ಕ್ಷೇತ್ರ ಎಂದು ಪರಿಗಣಿಸಿದ್ದಾರೆ. ಬಿಜೆಪಿ ಸೇರಿದ ನಂತರ ಶ್ರೀನಿವಾಸ ಪ್ರಸಾದ್ ಒಂದು ಕಾಲದ ಗೆಳೆಯ ಸಿದ್ದರಾಮಯ್ಯ ಅವರನ್ನು ಅವರ ಮುಖ್ಯಮಂತ್ರಿ ಹುದ್ದೆಗೂ ಕಿಂಚಿತ್ ಗೌರವ ಕೊಡದೆ ಹಾದಿಬೀದಿಯಲ್ಲಿ ಬಾಯಿಗೆ ಬಂದಂತೆ ನಿಂದಿಸಿದ್ದಾರೆ. ಅದೂ ಏಕವಚನದಲ್ಲಿ. ಇಂಥ ಶ್ರೀನಿವಾಸ ಪ್ರಸಾದ್ ಚುನಾವಣೆಯಲ್ಲಿ ಗೆದ್ದು ಬಂದು ತಮ್ಮ ಎದುರು ವಿಧಾನಸಭೆಯ ಪ್ರತಿಪಕ್ಷ ಸಾಲಿನಲ್ಲಿ ಕೂರುವುದು, ಅಲ್ಲಿಂದ ತಮ್ಮನ್ನು ಪ್ರಶ್ನೆ ಮಾಡುವುದು ಸಿದ್ದರಾಮಯ್ಯ ಅವರಿಗೆ ಬೇಕಿಲ್ಲ. ಏಕೆಂದರೆ ಶಾಸನಸಭೆಯ ಹೊರಗೆ ತಮ್ಮನ್ನು ನಿಕೃಷ್ಟವಾಗಿ ಅವಹೇಳನ ಮಾಡಿರುವ, ಬಾಯಿಗೆ ಬಂದಂತೆ ಪ್ರಶ್ನೆ ಮಾಡಿರುವ ಪ್ರಸಾದ್ ನಾಳೆ ವಿಧಾನಸಭೆ ಒಳಗೂ ಅದನ್ನೇ ಮಾಡುತ್ತಾರೆ ಎಂಬುದು ಅವರಿಗೆ ಚೆನ್ನಾಗಿಯೇ ಗೊತ್ತು. ಹೀಗಾಗಿ ಹೇಗಾದರೂ ಮಾಡಿ ಅವರು ಶಾಸನಸಭೆ ಪ್ರವೇಶಿಸದಂತೆ ಮಾಡಲು ಸಾಧ್ಯವಿರುವ ಎಲ್ಲ ರಾಜಕೀಯ ಅಸ್ತ್ರಗಳನ್ನು ಪ್ರಯೋಗಿಸಿದ್ದಾರೆ. ಹಣವನ್ನು ಹುರುಳಿ ಕಾಳಿನಂತೆ ಚೆಲ್ಲಿಸಿದ್ದಾರೆ. ಲಿಂಗಾಯತ, ದಲಿತ, ಉಪ್ಪಾರ, ನಾಯಕ, ಗಾಣಿಗ, ಒಕ್ಕಲಿಗ ಸಮುದಾಯದ ಮತವಿಭಜನೆಗೂ ಪ್ರಯತ್ನಿಸಿದ್ದಾರೆ.

ಹೌದು, ಅದು ಪ್ರಯತ್ನ ಮಾತ್ರ. ಎರಡೂ ಕ್ಷೇತ್ರಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವವರು ಲಿಂಗಾಯತರು ಮತ್ತು ದಲಿತರು. ನಂತರದ ಸ್ಥಾನ ನಾಯಕರು, ಉಪ್ಪಾರರು, ಗಾಣಿಗರು, ಕುರುಬರು, ಮುಸ್ಲಿಮರು ಮತ್ತು ಒಕ್ಕಲಿಗರು. ಏನೇ ಪ್ರಯತ್ನ ಪಟ್ಟರೂ ದಲಿತ ಮತಗಳನ್ನು ಸಂಪೂರ್ಣ ವಿಭಜಿಸಲು ಸಾಧ್ಯವಾಗಿಲ್ಲ. ಸಮುದಾಯದ ಬಹುತೇಕರು ಶ್ರೀನಿವಾಸ ಪ್ರಸಾದ್ ಜತೆ ಬಂಡೆಗಲ್ಲಿನಂತೆ ನಿಂತಿದ್ದಾರೆ. ಕಾರಣ ಸಿದ್ದರಾಮಯ್ಯ ಮಂತ್ರಿ ಸ್ಥಾನ ಕಿತ್ತುಕೊಂಡು ಪ್ರಸಾದ್ ಅವರಿಗೆ ಮೋಸ ಮಾಡಿದರು ಎಂಬುದು ಅವರ ಮನದಲ್ಲಿ ಫೆವಿಕ್ವಿಕ್‌ನಂತೆ ಬಲವಾಗಿ ಕಚ್ಚಿಕೊಂಡಿರುವುದು. ಹಾಗೊಂದು ಭಾವನೆಯನ್ನು ಶ್ರೀನಿವಾಸ ಪ್ರಸಾದ್ ಮೂಡಿಸಿದ್ದಾರೆ. ಕಾಂಗ್ರೆಸ್ ಏನೇ ಪ್ರಯತ್ನಪಟ್ಟರೂ, ಎಷ್ಟೆಲ್ಲ ದುಡ್ಡು ಸುರಿದರೂ ಶೇಕಡಾ 20 ರಷ್ಟು ದಲಿತ ಮತಗಳನ್ನು ಅಲ್ಲಾಡಿಸಲೂ ಸಾಧ್ಯವಾಗಿಲ್ಲ. ಅದೇ ಕಾಲಕ್ಕೆ ಎದಿರು ಪಾಳೆಯದ ಬಿಜೆಪಿ ಕೂಡ ಅಂಥದೇ ಪ್ರತ್ಯಸ್ತ್ರ ಪ್ರಯೋಗಿಸಿದೆ. ಹಣ, ಜಾತಿ ಅಸ್ತ್ರಪ್ರಯೋಗದಲ್ಲಿ ಕೈಗೆ ಸರಿಸೈ ಎಂದಿದೆ. ಒಂದೊಂದೇ ಎಳೆಯನ್ನು ಹಿಂಜಿ ಕಾಂಗ್ರೆಸ್ ವಿರುದ್ಧ ಬತ್ತಿ ಹೊಸೆದಿದೆ.

ಹಾಗೆ ನೋಡಿದರೆ ನಂಜನಗೂಡಲ್ಲಿ ಮತದಾರರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ ಮತ್ತು ನಾಯಕರ ಬಗ್ಗೆ ವಿರೋಧಾಭಾಸದ ನಿಲುವು. ಕಾಂಗ್ರೆಸ್ ಬಗ್ಗೆ ಒಲವು ಹೊಂದಿರುವ ಮತದಾರರಿಗೆ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಬಗ್ಗೆ ಇರುವ ಪ್ರೀತಿ ಸಿದ್ದರಾಮಯ್ಯ ಬಗ್ಗೆ ಇಲ್ಲ. ಅವರಿಗೆ ಕೇಶವಮೂರ್ತಿ ಬೇಕು. ಆದರೆ ಸಿದ್ದರಾಮಯ್ಯ ಬೇಡ. ಹೀಗಾಗಿ ಬಿಜೆಪಿ ಅವರ ಅನಿವಾರ್ಯ ಆಯ್ಕೆ. ಅದೇ ರೀತಿ ಬಿಜೆಪಿ ಬಗ್ಗೆ ಒಲವು ಹೊಂದಿರುವ ಮತದಾರರ ಪೈಕಿ ಅದರಲ್ಲೂ ವಿಶೇಷವಾಗಿ ಲಿಂಗಾಯತ ಸಮುದಾಯಕ್ಕೆ ಯಡಿಯೂರಪ್ಪ ಮೇಲಿರುವ ಪ್ರೀತಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಬಗ್ಗೆ ಇಲ್ಲ. 20 ವರ್ಷಗಳ ಹಿಂದೆ ಬದನವಾಳು ಗ್ರಾಮದಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ಸಂಘರ್ಷ ನಡೆದಾಗ ಹೊತ್ತಿಕೊಂಡ ದ್ವೇಷದ ಜ್ವಾಲೆ ಇವತ್ತಿಗೂ ಆರಿಲ್ಲ. ಅವತ್ತು ಲಿಂಗಾಯತ ಮುಖಂಡ ಬೆಂಕಿ ಮಹದೇವು ಮತ್ತು ಪರಿಶಿಷ್ಟರ ನಾಯಕ ಶ್ರೀನಿವಾಸ ಪ್ರಸಾದ್ ಈ ಜಾತಿ ದ್ವೇಷದ ವಾರಸುದಾರರು. ಬೆಂಕಿ ಮಹದೇವು ಇವತ್ತು ಬದುಕುಳಿದಿಲ್ಲ. ಆದರೆ ಅವರು ಪ್ರತಿನಿಧಿಸುವ ಲಿಂಗಾಯತ ಸಮುದಾಯದ ಮನದಲ್ಲಿ ಶ್ರೀನಿವಾಸ ಪ್ರಸಾದ್ ವಿರುದ್ಧ ಉರಿಯುತ್ತಿರುವ ಬೆಂಕಿ ಇಂದಿಗೂ ನಂದಿಲ್ಲ. ಅದನ್ನು ಆರಿಸಲು ಯಡಿಯೂರಪ್ಪನವರು ನೀರಿನ ಪಾತ್ರ ವಹಿಸಿದ್ದಾರೆ. ಆದರೂ ಅದು ಎಷ್ಟರ ಮಟ್ಟಿಗೆ ಕೆಲಸ ಮಾಡಿದೆಯೋ ಗೊತ್ತಿಲ್ಲ. ಶ್ರೀನಿವಾಸ ಪ್ರಸಾದ್ ಕೂಡ ಅಷ್ಟೇ. ಎದೆತುಂಬ ಲಿಂಗಾಯತ ವಿರೋಧಿ ಬೇಗೆಯನ್ನೇ ತುಂಬಿಕೊಂಡಿರುವವರು. ಅದು ಎಷ್ಟರ ಮಟ್ಟಿಗೆ ಅಂದರೆ, ಬೆಂಕಿ ಮಹದೇವು ಮನೆಯಲ್ಲೇ ಬಿಜೆಪಿ ಪ್ರಚಾರ ಕಾರ್ಯಾಲಯ ತೆರೆದಿದ್ದರೂ ಒಂದೇ ಒಂದು ದಿನ ಅವರು ಅಲ್ಲಿಗೆ ಕಾಲಿಡಲಿಲ್ಲ. ಇದರಿಂದ ಲಿಂಗಾಯತರು ಇನ್ನಷ್ಟು ಕೆರಳಿ ಹೋಗಿದ್ದರು. ಆದರೆ ಯಡಿಯೂರಪ್ಪ ಇಲ್ಲಿ ಬೇರೆಯದೇ ಬಾಣ ಪ್ರಯೋಗಿಸಿದರು. ‘ನನ್ನ ಮರ್ಯಾದೆ ಉಳಿಸಲು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಲು, ಮೋದಿ ಅವರು ನನ್ನ ಮೇಲಿಟ್ಟಿರುವ ನಂಬಿಕೆ ನಿಜವಾಗಿಸಲು, ಎಲ್ಲಕ್ಕಿಂತ ಮಿಗಿಲಾಗಿ ನಾನೇ ಮುಂದಿನ ಮುಖ್ಯಮಂತ್ರಿ ಆಗಲು ಬಿಜೆಪಿಗೇ ಮತ ನೀಡಿ, ಇದು ಮುಂದಿನ ಚುನಾವಣೆ ಪ್ರವೇಶದ್ವಾರ’ ಎಂದೆಲ್ಲ ಕೈಮುಗಿದು ಬೇಡಿಕೊಂಡರು. ಬದನವಾಳು ಆದಿಯಾಗಿ ಎಲ್ಲ ಗ್ರಾಮಗಳ ಬಹುತೇಕ ಲಿಂಗಾಯತರ ಮನೆಗೆ ಎಡತಾಕಿದರು. ಸಮುದಾಯದಲ್ಲಿ ಭಾವನಾತ್ಮಕ ಬೀಜ ಬಿತ್ತಿದರು. ರಾಜ್ಯ ಬಿಜೆಪಿಯ ಎಲ್ಲ ಮುಖಂಡರನ್ನು ಬೆಂಕಿ ಮಹದೇವು ಮನೆಬಾಗಿಲು ತುಳಿಸಿ, ವೀರಶೈವರ ಮನತಣಿಸಲು ಯತ್ನಿಸಿದರು.

ಕಾಂಗ್ರೆಸ್ಸಿಗೆ ಇದೆಲ್ಲ ಗೊತ್ತಿಲ್ಲದೆ ಏನಿರಲಿಲ್ಲ. ವೀರಶೈವರಿಗೆ ಶ್ರೀನಿವಾಸ ಪ್ರಸಾದ್ ಬಗ್ಗೆ ಇದ್ದ ಅಸಮಾಧಾನ ಸದ್ಬಳಕೆ ಮಾಡಿಕೊಳ್ಳಲು ಯತ್ನಿಸಿತು. ಮುಖ್ಯಮಂತ್ರಿಯವರೇ ಖುದ್ದು ಮೊಕ್ಕಾಂ ಹೂಡಿ ಮತವಿಭಜನೆ ಕಾರ್ಯತಂತ್ರಗಳ ಉಸ್ತುವಾರಿ ವಹಿಸಿಕೊಂಡರು. ಒಂದೆಡೆ ಕಳಲೆ ಕೇಶವಮೂರ್ತಿ ಬಗ್ಗೆ ಇರುವ ಪ್ರೀತಿ ಮತ್ತೊಂದೆಡೆ ಶ್ರೀನಿವಾಸ ಪ್ರಸಾದ್ ವಿರುದ್ಧದ ರೊಚ್ಚು ಇವರೆಡನ್ನೂ ಇದಕ್ಕೆ ಅಸ್ತ್ರ ಮಾಡಿದರು. ಈ ಅಸ್ತ್ರ ಮೊನಚಿಗೆ ಧನಬಲದ ಮೊರೆ ಹೋದರು. ಆದರೆ ಯಡಿಯೂರಪ್ಪನವರೂ ಅದೇ ತಂತ್ರ ಅನುಸರಿಸಿದ್ದರಿಂದ, ಜಾತಿ ಮತ್ತು ಹಣಬಲವನ್ನೇ ಪ್ರತ್ಯಸ್ತ್ರ ಮಾಡಿದ್ದರಿಂದ ಕಾಂಗ್ರೆಸ್ಸಿನ ಮತವಿಭಜನೆ ಪ್ರಯತ್ನ ಅಂದುಕೊಂಡಷ್ಟು ಪ್ರಮಾಣದಲ್ಲಿ ಆಗಿಲ್ಲ. ಲಿಂಗಾಯತರು ಮತ್ತು ದಲಿತರ ನಂತರದ ಸಂಖ್ಯೆಯಲ್ಲಿರುವ ನಾಯಕರು, ಉಪ್ಪಾರರು, ಒಕ್ಕಲಿಗರು, ಬೋವಿಗಳು, ವಿಶ್ವಕರ್ಮರು ಎರಡೂ ಕಡೆ ಹಂಚಿ ಹೋದರು. ಕುರುಬರು, ಮುಸ್ಲಿಮರು ಸಿದ್ದರಾಮಯ್ಯ ಜತೆ, ಬ್ರಾಹ್ಮಣರು ಬಿಜೆಪಿ ಪರ ನಿಂತರು.

ಇನ್ನು ಗುಂಡ್ಲುಪೇಟೆ ವಿಚಾರ. ಇಲ್ಲೊಂದು ವಿಚಿತ್ರ ಇತಿಹಾಸವಿದೆ. ಸಚಿವೆ, ವಿಧಾನಸಭೆ ಸ್ಪೀಕರ್ ಆಗಿದ್ದ ಲಿಂಗಾಯತ ಸಮುದಾಯದ ನಾಗರತ್ನಮ್ಮನವರು ಹತ್ತು ಬಾರಿ ಕ್ಷೇತ್ರ ಪ್ರತಿನಿಧಿಸಿದ್ದರು. ದಿವಂಗತ ಮಾಜಿ ಸಚಿವ ಮಹದೇವಪ್ರಸಾದ್ ಮತ್ತು ಅವರ ತಂದೆ ತಲಾ ಎರಡೆರಡು ಬಾರಿ ಅವರ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ನಾಗರತ್ನಮ್ಮನವರ ನಿಧನದ ನಂತರವಷ್ಟೇ ಮಹದೇವ ಪ್ರಸಾದ್ ಗೆಲ್ಲಲು ಸಾಧ್ಯವಾಗಿದ್ದು. ಅದೇ ರೀತಿ ಈಗ ಮಹದೇವಪ್ರಸಾದ್ ಪತ್ನಿ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಪ್ರಸಾದ್ ವಿರುದ್ಧ ಸ್ಪರ್ಧಿಸಿರುವ ನಿರಂಜನ್ ಕೂಡ ಹಿಂದೆ ಎರಡು ಬಾರಿ ಸೋತವರು. ಅದೂ ಮಹದೇವಪ್ರಸಾದ್ ವಿರುದ್ಧವೇ. ಈಗ ಮಹದೇವ ಪ್ರಸಾದ್ ನಿಧನರಾಗಿದ್ದಾರೆ. ನಿರಂಜನ್ ಹಳೇ ಸೋಲಿನ ಅನುಕಂಪವನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಪ್ರತೀತಿ ನಿಜವಾಗುತ್ತದೆಯೇ, ಇತಿಹಾಸ ಮರುಕಳಿಸುತ್ತದೆಯೇ ಗೊತ್ತಿಲ್ಲ.

ಆದರೆ ಅದನ್ನು ಮೀರಿದ ಲೆಕ್ಕಾಚಾರ ಹಣದ್ದು. ಯಾಕೋ ಏನೋ ಲಿಂಗಾಯತರು ಮೊದಲಿಂದಲೂ ಸಂಪೂರ್ಣವಾಗಿ ಮಹದೇವ ಪ್ರಸಾದ್ ಕೈ ಹಿಡಿದಿರಲಿಲ್ಲ. ಅವರು ಶೆಟ್ಟಿ ಲಿಂಗಾಯತ. ಅವರ ವಿರುದ್ಧ ಎರಡು ಬಾರಿ ಅಲ್ಪಮತಗಳ ಅಂತರದಲ್ಲಿ ಸೋತಿರುವ ನಿರಂಜನ್ ಗೌಡ ಲಿಂಗಾಯತ. ಕಳೆದ ಬಾರಿ ಕಾಂಗ್ರೆಸ್ ಅಲೆ ಇತ್ತು. ಬಿಜೆಪಿ ವಿಭಜನೆ ಆಗಿತ್ತು. ಮಹದೇವಪ್ರಸಾದ್ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಯಡಿಯೂರಪ್ಪನವರ ಕಾರಣಕ್ಕೆ ಜಾತಿ ದಾಳ ಬಹುಸಂಖ್ಯಾತ ಲಿಂಗಾಯತರನ್ನು ನಿರಂಜನ್ ಪರ ಹಿಡಿದಿಟ್ಟಿದೆ. ಪಕ್ಕದ ಕ್ಷೇತ್ರದ ಶ್ರೀನಿವಾಸ ಪ್ರಸಾದ್ ಕಾರಣಕ್ಕೆ ದಲಿತರು ಬಹುತೇಕ  ಬಿಜೆಪಿ ಜತೆಗೆ ನಿಂತಿದ್ದಾರೆ. ಉಪ್ಪಾರರು, ಕುರುಬರು, ಮುಸ್ಲಿಮರು ಕಾಂಗ್ರೆಸ್ ಪರ ನಿಂತಿದ್ದಾರೆ. ನಾಯಕರು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಂಚಿ ಹೋಗಿದ್ದಾರೆ. ಆದರೆ ಈ ಜಾತಿ ಲೆಕ್ಕಾಚಾರವನ್ನು ಮೀರಿಸಿ ಕ್ಷೇತ್ರದಲ್ಲಿ ಹರಿದಿರುವುದು ದುಡ್ಡು. ಮತವಿಭಜನೆಗೆ ಹಣ ಪ್ರೇರಣೆ ಆಗಿದೆಯೋ ಅಥವಾ ಅದನ್ನು ತಡೆದಿದೆಯೋ ಅದು ಬೇರೆ ಪ್ರಶ್ನೆ. ಆದರೆ ಮತಗಳ ಬಿಕರಿ ಆಗಿರುವುದು ಮಾತ್ರ ಮತ್ತದೇ ದುಡ್ಡಿಗೆ.

ಇರಲಿ, ಮುಂದಿನ ವರ್ಷ ಬರೋ ಚುನಾವಣೆಯಲ್ಲಿ ‘ಮಿಷನ್-150’ ಘೋಷಣೆ ಮುಂದಿಟ್ಟುಕೊಂಡು ಹೊರಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಈ ಚುನಾವಣೆಯನ್ನು ಅದರ ದಿಕ್ಸೂಚಿ, ಆಡಳಿತ ಪಕ್ಷದ ಬಗ್ಗೆ ಜನ ಕೊಡುವ ಆದೇಶ ಅಂತಲೇ ಬಿಂಬಿಸಿಕೊಂಡಿದ್ದಾರೆ. ಈ ಹುಮ್ಮಸ್ಸಿನಿಂದಲೇ ಎರಡೂ ಕ್ಷೇತ್ರದಲ್ಲಿ ಹಗಲಿರುಳೆನ್ನದೇ ಓಡಾಡಿದ್ದಾರೆ. ತಾವು ಈ ರಾಜ್ಯದ ಮುಂದಿನ ಮುಖ್ಯಮಂತ್ರಿ ಅನ್ನೋದನ್ನ ಮುಂದೆ ಮಾಡಿದ್ದಾರೆ. ಆರಂಭದಿಂದ ಕೊನೆಯವರೆಗೂ ಅದೇ ಹುಮ್ಮಸ್ಸು ಉಳಿಸಿಕೊಂಡರು. ಆದರೆ ಸಿದ್ದರಾಮಯ್ಯನವರ ಶೈಲಿಯೇ ಬೇರೆ. ‘ಇದು ಯಾವ ಚುನಾವಣೆ ದಿಕ್ಸೂಚಿಯೂ ಅಲ್ಲ, ಯಾರ ಸ್ವಾಭಿಮಾನದ ಸಂಕೇತವೂ ಅಲ್ಲ, ಬರೀ ಮರುಚುನಾವಣೆ ಅಷ್ಟೇ. ಅದಕ್ಕಿಂತ ಮಿಗಿಲಾಗಿ ಬೇರೇನನ್ನೂ ಹುಡುಕುವಂತಿಲ್ಲ’ ಅಂತ ಮೊದಲಿಂದಲೂ ಹೇಳಿಕೊಂಡು ಬಂದಿದ್ದರು. ಹಾಗೆ ಅವರು ಮಂಡಿಸುತ್ತಿದ್ದ ವಾದದಲ್ಲಿ ಬೇರೆಯದೇ ಅರ್ಥ ಗ್ರಹಿಸಲಾಗಿತ್ತು. ಚುನಾವಣೆ ಫಲಿತಾಂಶದ ಬಗ್ಗೆ ನಕಾರಾತ್ಮಕ ಮುನ್ಸೂಚನೆ ಇರುವುದರಿಂದಲೇ ಅವರು ಹಾಗೆಲ್ಲ ಹೇಳುತ್ತಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಚುನಾವಣೆ ಪ್ರಚಾರ, ಮತದಾನ ಮುಗಿದ ನಂತರ ಹೋಟೆಲ್‌ನಲ್ಲಿ ಮಸಾಲೆ ದೋಸೆ ತಿಂದುಕೊಂಡು, ಥಿಯೇಟರ್‌ನಲ್ಲಿ ಪಿಕ್ಚರ್ ನೋಡಿಕೊಂಡು ಆರಾಮವಾಗಿ ಓಡಾಡಿಕೊಂಡಿರುವುದನ್ನು ನೋಡಿದರೆ ಈಗವರ ವರ್ತನೆ ಬೇರೆಯದೇ ಸಂದೇಶ ರವಾನಿಸುತ್ತಿದೆ. ಮತದಾನದ ಹಿಂದಿನ ಕೊನೇ ಎರಡು ದಿನದ ತಂತ್ರಗಳು ಫಲಕೊಟ್ಟಿವೆ ಎಂಬ ವಿಶ್ವಾಸ, ನಿರುಮ್ಮಳತೆ ಅವರಿಗಿರಬಹುದು ಅಥವಾ ತಾವು ನಿರುಮ್ಮಳರಾಗಿದ್ದೇವೆ ಎಂಬುದನ್ನು ಬಿಂಬಿಸುವ ಮತ್ತೊಂದು ತಂತ್ರವೂ ಇದಾಗಿರಬಹುದು.

ರಾಜ್ಯ ಗುಪ್ತಚರ ವಿಭಾಗ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ವರದಿ ಕೊಟ್ಟಿದ್ದರೆ, ಸೆಂಟ್ರಲ್ ಗುಪ್ತಚರ ವಿಭಾಗ ಎರಡೂ ಬಿಜೆಪಿಯದೇ ಅಂದಿದೆಯಂತೆ. ಇಬ್ಬರಿಗೂ ಒಂದೊಂದು ಬಂದರೆ ಬೀಗುವಂತಿಲ್ಲ. ಎರಡೂ ಗೆದ್ದವರನ್ನು ಹಿಡಿಯುವಂತಿಲ್ಲ. ಈಗ ಎರಡು ಕ್ಷೇತ್ರ ಕಾಂಗ್ರೆಸ್ ಕೈಯಲ್ಲೇ ಇದ್ದಿದ್ದರಿಂದ ಬಿಜೆಪಿ ಸೋತರೆ ನಷ್ಟವಿಲ್ಲ. ಕಾಂಗ್ರೆಸ್ ಸೋತರೆ ಮಾತ್ರ ಅದು ಭರಿಸಲಾರದ ನಷ್ಟ.

ಲಗೋರಿ: ಕೊಟ್ಟಿದ್ದೆಲ್ಲ ದಾನವಲ್ಲ, ಪಡಕೊಂಡಿದ್ದೆಲ್ಲ ಹಕ್ಕಲ್ಲ!

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply