‘ಜೂನ್ 15ರವರೆಗೂ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ’ ಸಚಿವರ ಅಭಯ

ಡಿಜಿಟಲ್ ಕನ್ನಡ ಟೀಮ್:

ಬರಗಾಲದ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳ ನೀರಿನ ಮಟ್ಟ ದಾಖಲೆಯ ಪ್ರಮಾಣದಲ್ಲಿ ಕುಸಿದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿಗೆ ದೊಡ್ಡ ಕೊರತೆ ಎದುರಾಗುವ ಆತಂಕ ಮೂಡಿತ್ತು. ಆದರೆ ರಾಜ್ಯ ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಅವರು ಈ ಆಂತಕ ದೂರಮಾಡಿದ್ದು, ‘ಜೂನ್ 15ರವರೆಗೂ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ’ ಎಂದಿದ್ದಾರೆ.

ಜಲಾಶಯಗಳ ಸ್ಥಿತಿಗತಿಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಕೃಷ್ಣಾ, ಕಾವೇರಿ, ಭದ್ರಾ ಸೇರಿದಂತೆ ರಾಜ್ಯದ ಎಲ್ಲ ಜಲಶಯಗಳಲ್ಲಿರುವ ನೀರನ್ನು ಕುಡಿಯಲು ಮಾತ್ರ ಬಳಕೆ ಮಾಡಿಕೊಳ್ಳಲಿದ್ದು, ಹೀಗಾಗಿ ಜೂನ್ 15ರ ವರೆಗೂ ಕುಡಿಯಲು ನೀರನ್ನು ಪೂರೈಸಬಹುದು. ಹೀಗಾಗಿ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸಲು ಸಾಧ್ಯವಿಲ್ಲ. ಇದಕ್ಕೆ ರೈತರು ಸಹಕರಿಸಬೇಕಿದೆ. ಈಗ ಶೇಖರಣೆಗೊಂಡಿರುವ ನೀರನ್ನು ಮುಂದಿನ ಮಳೆಗಾಲ ಆರಂಭದವರೆಗೆ ಕುಡಿಯಲು ಬಳಕೆ ಮಾಡಿಕೊಳ್ಳಬಹುದು. ಕೃಷಿ ಚಟುವಟಿಕೆಗಾಗಿ ನದಿ, ಕೆರೆ, ಹಳ್ಳ ಹಾಗೂ ಕೊಳವೆ ಬಾವಿ ನೀರನ್ನು ಬಳಕೆ ಮಾಡಿಕೊಳ್ಳಬೇಡಿ. ಇತ್ತ ಸಾರ್ವಜನಿಕರು ಸಹ ನೀರನ್ನು ಮಿತವಾಗಿ ಬಳಕೆ ಮಾಡುವ ಅಗತ್ಯ ಇದೆ’ ಎಂದರು.

ಇದೇ ವೇಳೆ ಮೋಡ ಬಿತ್ತನೆ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಬರಗಾಲದ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಕಾರ್ಯ ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಕಳೆದ ವರ್ಷ ತಡವಾಗಿ ಈ ಕಾರ್ಯಕ್ಕೆ ಕೈಹಾಕಿದ್ದರಿಂದ ಯಶಸ್ವಿಯಾಗಿರಲಿಲ್ಲ. ಹಾಗಾಗಿ ಈ ಬಾರಿ ಮೋಡ ಬಿತ್ತನೆಗಾಗಿಯೇ ₹ 30 ಕೋಟಿ ಮೀಸಲಿಡಲಾಗಿದೆ. ಇದಕ್ಕೆ ಸಂಪುಟ ಉಪಸಮಿತಿ ಹಲವಾರು ಮುಂಜಾಗರೂಕ ಕ್ರಮಗಳನ್ನು ಕೈಗೊಂಡಿದೆ. ಈ ಬಾರಿ ಆದಷ್ಟು ಬೇಗ ಈ ಕಾರ್ಯ ನಡೆಸುತ್ತೇವೆ’ ಎಂದರು.

Leave a Reply