ಪುಣೆ ಪಾಲಿಗೆ ನಿಜಕ್ಕೂ ಡೆವಿಲ್ ಆದ ಸಂಜು ಸ್ಯಾಮ್ಸನ್! ಈ ಪಂದ್ಯದ ವಿಶೇಷತೆಗಳೇನು ಗೊತ್ತೆ?

ಡಿಜಿಟಲ್ ಕನ್ನಡ ಟೀಮ್:

ಆರಂಭಿಕ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಸೋಲನುಭವಿಸಿದ್ದ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಎರಡನೇ ಪಂದ್ಯದಲ್ಲಿ ಗೆಲುವಿನ ಹಾದಿಗೆ ಬಂದಿದೆ. ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡದ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ 97 ರನ್ ಗಳ ಅಂತರದಲ್ಲಿ ಸುಲಭ ಜಯ ದಾಖಲಿಸಿತು. ಈ ಪಂದ್ಯದಲ್ಲಿ ಆತಿಥೇಯ ಪುಣೆ ತಂಡದ ಪಾಲಿಗೆ ಸಂಜು ಸ್ಯಾಮ್ಸನ್ ನಿಜಕ್ಕೂ ಡೆವಿಲ್ ಆಗಿ ಕಾಡಿದರು.

ಇನ್ ಫಾರ್ಮ್ ಆಟಗಾರ ಹಾಗೂ ನಾಯಕ ಸ್ಟೀವನ್ ಸ್ಮಿತ್ ಅವರ ಹೊಟ್ಟೆ ನೋವಿನಿಂದಾಗಿ ಈ ಪಂದ್ಯದಿಂದ ದೂರ ಉಳಿದರು. ಪರಿಣಾಮ ತಂಡದ ನಾಯಕತ್ವ ಅಜಿಂಕ್ಯ ರಹಾನೆ ಹೆಗಲಿಗೆ ವರ್ಗಾವಣೆಯಾಯ್ತು. ಟಾಸ್ ಗೆದ್ದ ರಹಾನೆ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಡೇರ್ ಡೆವಿಲ್ಸ್ ತಂಡ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 205 ರನ್ ಪೇರಿಸಿ ಉತ್ತಮ ಪ್ರದರ್ಶನ ನೀಡಿತು. ಕಳೆದ ಪಂದ್ಯದಲ್ಲಿನ ತಪ್ಪುಗಳನ್ನು ತಿದ್ದುಕೊಂಡ ದ್ರಾವಿಡ್ ಹುಡುಗರು ಈ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು. ಡೆಲ್ಲಿ ನೀಡಿದ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪುಣೆ 16.1 ಓವರ್ ಗಳಲ್ಲಿ 108 ರನ್ ಗಳಿಗೆ ಆಲೌಟ್ ಆಗಿ ಡೆವಿಲ್ಸ್ ಮುಂದೆ ಸುಲಭವಾಗಿ ಶರಣಾಯ್ತು.

ಈ ಪಂದ್ಯದ ಫಲಿತಾಂಶದಲ್ಲಿ ಎರಡು ವಿಶೇಷತೆಗಳಿದ್ದು, ಮೊದಲನೆಯದು ಕಳೆದ 10 ವರ್ಷಗಳ ಆವೃತ್ತಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಇದು ಅತಿ ದೊಡ್ಡ ಅಂತರದ ಗೆಲುವು. ಎರಡನೆಯದು ಐಪಿಎಲ್ ನಲ್ಲಿ ಮೊದಲ ಬಾರಿಗೆ ಒಂದು ತಂಡದ ಹತ್ತೂ ಬ್ಯಾಟ್ಸ್ ಮನ್ ಗಳು ಕ್ಯಾಚ್ ನೀಡುವ ಮೂಲಕವೇ ಔಟಾಗಿದ್ದಾರೆ. ಈ ಪಂದ್ಯದಲ್ಲಿ ಪುಣೆ ತಂಡದ ಎಲ್ಲಾ ವಿಕೆಟ್ ಗಳು ಕ್ಯಾಚ್ ಮೂಲಕವೇ ಬಿದ್ದಿವೆ.

ಇನ್ನು ಈ ಪಂದ್ಯದಲ್ಲಿ ಪ್ರಮುಖ ಹೈಲೆಟ್ ಆಗಿದ್ದು ಯುವ ಆಟಗಾರ ಸಂಜು ಸ್ಯಾಮ್ಸನ್ (102 ರನ್, 62 ಎಸೆತ, 8 ಬೌಂಡರಿ, 5 ಸಿಕ್ಸರ್). ಹಲವು ಐಪಿಎಲ್ ಆವೃತ್ತಿಗಳಲ್ಲಿ ಆಡುತ್ತಲೇ ಬಂದಿರುವ ಸಂಜು ಸ್ಯಾಮ್ಸನ್, ಪ್ರತಿಭೆ ಇದ್ದರೂ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದಾರೆ ಎಂಬ ಟೀಕೆ ಸಂಜು ವಿರುದ್ಧ ಆಗಾಗ್ಗೆ ಕೇಳಿ ಬರುತ್ತಲೇ ಇತ್ತು. ಈ ಟೀಕೆಯನ್ನು ಒಂದೇ ಇನಿಂಗ್ಸ್ ನಲ್ಲಿ ಅಳಿಸಿಹಾಕುವಲ್ಲಿ ಯಶಸ್ವಿಯಾದರು. ಈ ಆವೃತ್ತಿಯಲ್ಲಿ ಮೊದಲ ಶತಕ ದಾಖಲಿಸಿದ ಸಂಜು, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಡೆಲ್ಲಿ ಬ್ಯಾಟಿಂಗ್ ನಲ್ಲಿ ಮಿಂಚು ಹರಿಸಿದ ಮತ್ತೊಬ್ಬ ಆಟಗಾರ ಎಂದರೆ ಆಲ್ರೌಂಡರ್ ಕ್ರಿಸ್ ಮೊರಿಸ್. ಇನಿಂಗ್ಸ್ ಅಂತಿಮ ಘಟ್ಟದಲ್ಲಿ ಬಂದ ಮೊರಿಸ್ ಕೇವಲ 9 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಗಳೊಂದಿಗೆ ಅಜೇಯ 38 ರನ್ ಗಳಿಸಿದರು. ಇದರೊಂದಿಗೆ ಡೆಲ್ಲಿ ತಂಡ ಅಂತಿಮ 4 ಓವರ್ ಗಳಲ್ಲಿ 76 ರನ್ ದಾಖಲಿಸಿ ತಂಡ 200ರ ರನ್ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಇನ್ನು ಬೌಲಿಂಗ್ ನಲ್ಲಿ 3 ವಿಕೆಟ್ ಪಡೆದು ಗಮನ ಸೆಳೆದ ಜಹೀರ್ ಖಾನ್ ಮತ್ತೆ ತಮ್ಮ ಲಯ ಕಂಡುಕೊಂಡಿದ್ದಾರೆ.

ಇನ್ನು ಪುಣೆ ವಿಚಾರಕ್ಕೆ ಬರುವುದಾದರೆ, ಪುಣೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ವೈಫಲ್ಯ ಅನುಭವಿಸಿತು. ಸ್ಮಿತ್ ಅನಾರೋಗ್ಯದಿಂದ ಹೊರಗುಳಿದರೆ, ಕಳೆದ ಎರಡು ಪಂದ್ಯಗಳಲ್ಲಿ ತಂಡಕ್ಕೆ ಉತ್ತಮ ಕಾಣಿಕೆ ನೀಡಿದ್ದ ಮನೋಜ್ ತಿವಾರಿ ತಮ್ಮ ತಂದೆ ವಿಧಿವಶರಾದ ಹಿನ್ನೆಲೆಯಲ್ಲಿ ತಂಡಕ್ಕೆ ಅಲಭ್ಯರಾದರು. ಈ ಎರಡು ಬದಲಾವಣೆ ತಂಡದ ಸಮತೋಲನದ ಮೇಲೆ ದೊಡ್ಡ ಪರಿಣಾಮ ಬೀರಿತು. ಹೀಗಾಗಿ ಪುಣೆ ತಂಡ ಸೋಲಿನ ಕಹಿ ಅನುಭವಿಸಿತು. ಆರಂಭಿಕ ಪಂದ್ಯದಲ್ಲಿ ಗೆದ್ದು ಬೀಗಿದ್ದ ಪುಣೆ ಈಗ ಸತತ ಎರಡು ಪಂದ್ಯಗಳಲ್ಲಿ ಸೋತಿದ್ದು, ತಂಡದ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಿದೆ.

Leave a Reply