ಆರ್ ಸಿಬಿ ಅಭಿಮಾನಿಗಳಿಗೆ ಕೊಹ್ಲಿ ಕೊಡ್ತಿರುವ ‘ಮಾತು’ ಏನು?

ಡಿಜಿಟಲ್ ಕನ್ನಡ ಟೀಮ್:

ಕಳೆದ ಪಂದ್ಯದಲ್ಲಿ ಎಡಿ ಡಿವಿಲಿಯರ್ಸ್ ಆಟವನ್ನು ನೋಡಿ ಖುಷಿಪಟ್ಟಿದ್ದ ಆರ್ ಸಿಬಿ ಅಭಿಮಾನಿಗಳಿಗೆ ಈಗ ಮತ್ತೊಂದು ಸಿಹಿ ಸುದ್ದಿ. ಅದೇನೆಂದರೆ, ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ನಾಯಕ ವಿರಾಟ್ ಕೊಹ್ಲಿ. ಹೌದು, ಈ ಬಗ್ಗೆ ಸ್ವತಃ ವಿರಾಟ ಕೊಹ್ಲಿ ಅಧಿಕೃತ ಹೇಳಿಕೆ ಕೊಟ್ಟಿದ್ದು, ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದಾಗಿ ತಮ್ಮ ಅಭಿಮಾನಿಗಳಿಗೆ ಮಾತು ಕೊಟ್ಟಿದ್ದಾರೆ.

ಭುಜದ ನೋವಿನಿಂದ ಬಳಲುತ್ತಿದ್ದ ವಿರಾಟ್ ಕೊಹ್ಲಿ ಈಗ ಶೇ.100 ರಷ್ಟು ಫಿಟ್ ಆಗಿದ್ದಾರೆ. ಈಗಾಗಲೇ ಟೂರ್ನಿಯಲ್ಲಿ ಆರ್ ಸಿಬಿ ತಂಡ ಶೇನ್ ವಾಟ್ಸನ್ ನಾಯಕಚ್ವದಲ್ಲಿ ಮೂರು ಪಂದ್ಯಗಳನ್ನು ಆಡಿ 2 ಸೋಲು 1 ಜಯದೊಂದಿಗೆ ಮಿಶ್ರ ಫಲಿತಾಂಶ ಪಡೆದಿದೆ. ಇದರೊಂದಿಗೆ ತಂಡ ಕೊಹ್ಲಿಯ ಕೊರತೆಯನ್ನು ಎದುರಿಸುತ್ತಿರುವುದು ಸ್ಪಷ್ಟವಾಗಿದೆ. ಕಣಕ್ಕಿಳಿಯುತ್ತಿರುವ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಪ್ರಕಟಿಸಿರುವ ಕೊಹ್ಲಿ, ‘ಮತ್ತೆ ಕಣಕ್ಕಿಳಿಯುವ ಸಮಯ ಹತ್ತಿರ ಬಂದಿದೆ. ಏ.14ರ ಪಂದ್ಯಕ್ಕಾಗಿ ಕಾತುರದಿಂದ ಕಾಯುತ್ತಿದ್ದೇನೆ.’ ಎಂದು ತಿಳಿಸಿದ್ದಾರೆ.

ಕಳೆದ ಆವೃತ್ತಿಯಲ್ಲಿ 4 ಶತಕ ಬಾರಿಸಿ ಟೂರ್ನಿಯಲ್ಲಿ ದಾಖಲೆಯ 973 ರನ್ ದಾಖಲಿಸಿದ್ದ ಕೊಹ್ಲಿ ತಂಡಕ್ಕೆ ಆಗಮಿಸುತ್ತಿರುವುದು ಆರ್ ಸಿಬಿ ಉತ್ಸಾಹ ಇಮ್ಮಡಿಗೊಳಿಸಿದರೆ, ಮುಂಬೈ ಇಂಡಿಯನ್ಸ್ ತಂಡಕ್ಕೆ ಎಚ್ಚರಿಕೆ ರವಾನೆಯಾಗಿದೆ.

Leave a Reply