ಅಣ್ಣಾವ್ರ ಕೊನೆದಿನದ ಆ ಕೋಲಾಹಲದ ತಿರುಗಣಿಯಲ್ಲಿ…

ವಿನಯ್ ಕಸ್ವೆ

ಹನ್ನೊಂದು ವರ್ಷದ ಹಿಂದೆ ಇದೇ ದಿನ,  ನಾನಿನ್ನೂ ಕೆಲವೇ ದಿನದ ಹಿಂದೆ ಅಣ್ಣಾವ್ರ ಸಾಂಗತ್ಯದ ಆ ಕ್ಷಣದ ನೆನಪಿನಿಂದ ಹೊರ ಬಂದಿರಲಿಲ್ಲ. ಅವತ್ತು ಯಾವ್ದೋ ಕೆಲಸದ ಮೇಲೆ ದೇವಯ್ಯ ಪಾರ್ಕ್ ರೂಂನಿಂದ ನವರಂಗ್ ಹತ್ರ ಹೋಗಿದ್ದೆ, ಮದ್ಯಾಹ್ನ ಸುಮಾರು ಎರಡು ಗಂಟೆ ಆಗಿದ್ದಿರಬಹುದು… ಇದ್ದಕಿದ್ದ ಹಾಗೆ ಹೊರಗಡೆ ಜನರ ಗಡಿಬಿಡಿ, ತಲ್ಲಣ, ಅಂಗಡಿಯವ್ರೆಲ್ಲ ಬಾಗಿಲು ಹಾಕ್ತಿದಾರೆ, “ಅಣ್ಣಾವ್ರು ಹೊಗ್ಬಿಟ್ರಂತೆ, ಅಣ್ಣಾವ್ರು ಹೊಗ್ಬಿಟ್ರಂತೆ” ಅನ್ನೋ ಸುದ್ದಿ ಕ್ಷಣಮಾತ್ರದಲ್ಲಿ ಊರೆಲ್ಲ ಹಬ್ಬಿಬಿಡ್ತು, ನಂಗೆ ನಂಬೋಕೆ ಆಗ್ತಿರ್ಲಿಲ್ಲ, ಕೆಲವೇ ದಿನದ ಹಿಂದೆ ನಮ್ ಜೊತೆ ಆರಾಮಾಗಿ ಓಡಾಡಿಕೊಂಡು, ಮಾತಾಡಿಕೊಂಡು ಹೊಗಿದ್ರಲ್ಲ, ಆ ನೆನಪು ಹಾಗೆ ಇತ್ತು. “ಹೌದಾ ನಿಜಾನಾ, ಬೇಗ ರೂಮಿಗೆ ಹೋಗಿ ಟಿವಿ ನೋಡೋಣ” ಅಂತ  ಬೇಗ ಬೇಗ ರೂಂ ಕಡೆ ಬಂದೆ. ಬರೋವಾಗ ದಾರಿ ಉದ್ದಕ್ಕೂ ಎಲ್ಲಾ ಬಂದ್, ಕೆಲವೇ ಹೊತ್ತಿಗೆ ರಸ್ತೆಗಳೂ ಖಾಲಿ ಖಾಲಿ. ರೂಮಿಗೆ ಬರ್ತಿದ್ದ ಹಾಗೆ ಗೆಳೆಯರೆಲ್ಲ ಟಿವಿ ಹಾಕೊಂಡ್ ಕುಂತಿದ್ರು, ಆವಾಗ ನ್ಯೂಸ್ ಚಾನೆಲ್ಗಳು ಇರ್ಲಿಲ್ಲ. ಉದಯ,ಈ ಟಿವಿ ಗಳೇ ತಮ್ಮ ದಾರವಾಹಿಗಳನ್ನೆಲ್ಲ ಬದಿಗೊತ್ತಿ ಅಣ್ಣಾವ್ರ ಸುದ್ದಿ ಲೈವ್ ಹಾಕ್ಬಿಟ್ಟಿದ್ರು, ಮೊದ್ಲೇ ನಾವ್ ಕ್ರೇಜಿ ಹುಡುಗ್ರು ಮುಂದೇನು ಅಂತ ಯೋಚ್ನೆ ಮಾಡದೆ ನಾವ್ ಹುಡುಗರೆಲ್ಲ ಸೇರಿ ಅಣ್ಣಾವ್ರ ಮನೆ ಹತ್ರ ಹೋಗೋದು ಅಂತ ತೀರ್ಮಾನಿಸಿ ಏಳೆಂಟು ಜನ ನೆಡ್ಕೊಂಡ್ ಹೊರಟೆಬಿಟ್ವಿ.

ಬೆಂಗಳೂರು ಸಂಪೂರ್ಣ ಬಂದ್. ಕೆಲವೇ ನಿಮಿಷದಲ್ಲಿ ಎಲ್ಲಾ ಖಾಲಿ ಖಾಲಿ, ಅಣ್ಣಾವ್ರ ಮನೆ ಹತ್ರ ಹೋಗಿ ನೋಡಿದ್ರೆ ಜನ ತಂಡ ತಂಡವಾಗಿ ಬರ್ತಿದ್ರು ಸಾವಿರಾರು ಜನ, ಚಿತ್ರರಂಗದವ್ರೆಲ್ಲ ಅವಾಗಾಗ್ಲೆ ಬಂದಾಗಿತ್ತು.. ಮನೆ ಒಳಗಡೆ ಹೋಗೋಕೆ ಯಾರನ್ನೂ ಬಿಡ್ತಿರ್ಲಿಲ್ಲ, ಕೆಲವರು ಕಾಂಪೌಂಡ್ ಹಾರಿ ಒಳಗಡೆ ಹೋದ್ರು, ಅದನ್ನೋಡಿಕೊಂಡ್ ನಾವೂ ಕಾಂಪೌಂಡ್ ಹಾರೆಬಿಟ್ವಿ. ಅಣ್ಣಾವ್ರನ್ನ ಇನ್ನೂ ರಾಮಯ್ಯ ಹಾಸ್ಪಿಟಲ್ನಿಂದ ಕರ್ಕೊಂಡ್ ಬಂದಿರಲಿಲ್ಲ, ಬಹುಶಃ  ಏನ್ ಮಾಡ್ಬೇಕು, ಏನ್ ಕತೆ ಅಂತ ಅವ್ರ ಕುಟುಂಬದವ್ರಿಗೂ,ಸರಕಾರಕ್ಕೂ, ಅಧಿಕಾರಿಗಳಿಗೂ ಗೊತ್ತಾಗ್ತಾ ಇರ್ಲಿಲ್ಲ ಪಾಪ. ಸ್ವಲ್ಪ ಹೊತ್ತಿನಲ್ಲಿ ಅಣ್ಣಾವ್ರನ್ನ ಹೊತ್ತ ಅಂಬುಲನ್ಸ್ ಬಂದೇ ಬಿಡ್ತು. ಬಂದಿದ್ದೆ ತಡ ಸಾವಿರಾರು ಜನ ಎಲ್ಲ ಅತ್ತ ಕಡೆ ನುಗ್ಗಿಬಿಟ್ರು. ಅನಿವಾರ್ಯವಾಗಿ ನಾನೂ ಆ ಜನರ ತಳ್ಳಾಟಕ್ಕೆ ಸೀದಾ ಹೋಗಿ ಅಂಬುಲನ್ಸ್ ಹತ್ರ ಹೋಗಿ ನಿಂತೇ, ಜೊತೆ ಬಂದಿದ್ದ ಗೆಳೆಯರ್ಯಾರೂ ಕಾಣಿಸ್ತಾ ಇಲ್ಲ, ಆ ತಳ್ಳಾಟಕ್ಕೆ, ಉಸಿರು ಕಟ್ಟಿದ ಹಾಗಾಗ್ತಾ ಇದೆ. ಜೊತೆಗೆ ಭಯಂಕರ ಸೆಖೆ, ನುಗ್ಗತಾ ಇದಾರೆ, ತಳ್ತಾ ಇದಾರೆ. ಅಬ್ಬಾ ಖಂಡಿತ ಬದುಕಿ ವಾಪಸ್ ಹೋಗಲ್ಲ ನಾನು ಅನ್ನಿಸ್ಬಿಡ್ತು. ಆಗಿದ್ದಾಗಲಿ, ಏನ್ ಆಗತ್ತೊ ಆಗ್ಲಿ ಅಂತ ಅಲ್ಲೇ ಹೊರಾಡ್ತ ನಿಂತ್ಬಿಟ್ಟೆ. ಅಸ್ಟ್ರಲ್ಲಿ “ಏ ಅಣ್ಣಂಗೆ ಸೆಖೆ ಆಗತ್ತೆ ಆಂಬುಲೆನ್ಸ್ ಕಿಟಕಿ ತೆಗಿರೋ ಅಂದ. ಇನ್ನ್ಯಾರೊ ಒಬ್ಬ ಅಣ್ಣನ್ನ ನೋಡ್ಬೇಕು ಬಾಗಲ್ ತೆಗಿರೋ’ ಅಂತ ಕೂಗಿದ. ಅಷ್ಟೇ.. ಕ್ಷಣಮಾತ್ರದಲ್ಲಿ ಅಂಬುಲನ್ಸ್ ಕಿಟಕಿಗಳೆಲ್ಲ ಪುಡಿ ಪುಡಿ. ತಳ್ಳುತ್ತಿದ್ದವರ ಜೊತೆ ಹೊರಾಡ್ತ ಹೊರಾಡ್ತ ಅಂಬುಲನ್ಸ್ ಪಕ್ಕಾನೆ ಬಂದ್ಬಿಟ್ಟೆ,, ಒಳಗಡೆ ಅಣ್ಣಾವ್ರು ಮುಗ್ದ ಮಗುವಿನ ಥರ ಮಲಗಿದ್ದಾರೆ, ಅವ್ರ ಅಕ್ಕಪಕ್ಕ ಯಾರೋ ಇಬ್ರು ಕೂತಿದಾರೆ. ತಳ್ಳುತ್ತಿದ್ದವರನ್ನ ಸಹಿಸ್ಕೊಂಡ್ ಇನ್ನು ಖಂಡಿತ ನಾನು ಬದುಕಲ್ಲ ಅನ್ನಿಸ್ಬಿಡ್ತು. ಮಧ್ಯಾಹ್ನ ಊಟ ಮಾಡದೆ ಬಂದಿದ್ದ ನಂಗೆ ತಲೆ ಸುತ್ತು ಬರ್ತಿತ್ತು. ನಿಲ್ಲೋಕೆ ಸಾಧ್ಯನೆ ಆಗ್ದಿರೊ ಪರಿಸ್ಥಿತಿ, ಬದುಕಬೇಕು ಅಂದ್ರೆ ಒಂದೇ ದಾರಿ ಅಣ್ಣಾವ್ರಿದ್ದ ಅಂಬುಲನ್ಸ್ ಹತ್ತಿಬಿಡಬೇಕು… ಹಿಂಗಂತ ಯೋಚ್ನೆ ಬಂದಿದ್ದೆ ತಡ,  ಒಡೆದು ತೆಗದಿದ್ದ ಕಿಟಕಿಇಂದಾನೆ ಒಳಗೆ ತೂರಿಬಿಟ್ಟೆ, ಅಬ್ಬಾ ಒಂದೈದು ನಿಮಿಷ ಅಲ್ಲಿದ್ದ ಸೀಟ್ ಮೇಲೆ ಕೂತು ಕಣ್ಮುಚ್ಚಿ ಸುಧಾರಿಸಿಕೊಂಡೆ,, ಕಣ್ ಬಿಟ್ರೆ ಸಾಕ್ಷಾತ್ ಅಣ್ಣಾವ್ರು, ಯಾರಿಗಾಗಿ ಇಡೀ ನಾಡು ರೋದಿಸ್ತಾ ಇದ್ಯೋ ಅದೇ ಅಣ್ಣಾವ್ರು, ಯಾರಿಗಾಗಿ ಇಷ್ಟೆಲ್ಲ ಜನ ಕೂಗು ಹಾಕ್ತಿದಾರೋ ಅದೇ ಅಣ್ಣಾವ್ರು.. ನನ್ನ ಕೈಗೆಟುಕೊ ಹಾಗೆ ಅಬ್ಬಾ,, ಮತ್ತೆ ಸುಸ್ತು ನಾನು, ಪಾದ ಮುಟ್ಟಿ ನಮಸ್ಕರಿಸಿದೆ. ಹಣೆ ಮುಟ್ಟಿ ಮುಟ್ಟಿ ನಮಸ್ಕರಿಸಿದೆ, ಮಗುವಿನ ನಗುವಿನೊಂದಿಗೆ ಮಲಗಿದ್ರು, ಹೊರಗೆ ಅಕ್ಷರಶಃ ಯುದ್ಧವೇ ನಡೀತಾ ಇದೆ, ಆದ್ರೆ ಈ ಮಹಾತ್ಮ ಚಿರನಿದ್ರೆಲಿದಾರೆ. ಕಣ್ತುಂಬ ನೋಡ್ತಾ ಕೂತೆ, ಮತ್ತೆ ಮತ್ತೆ ಮುಟ್ಟಿ ನಮಸ್ಕರಿಸಿದೆ. ಎದುರಿಗೆ ಒಂದಿಬ್ಬರು ಕೂತಿದ್ರು,ಒಬ್ರು ಅಣ್ಣಾವ್ರ ಮನೆಮಗ ಚೆನ್ನ ಅವ್ರು, ಮತ್ತಿಬ್ಬರು ಗೊತ್ತಾಗ್ಲಿಲ್ಲ. ಸ್ವಲ್ಪ ಹೊತ್ತಿಗೆ ಅಂಬುಲನ್ಸ್ ಮೂವ್ ಆಯಿತು, ಎಲ್ಲಿ ಹೋಗೋದು,ಏನ್ ಮಾಡೋದು,ಏನ್ ಕತೆ ಅಂತ ಬಹುಶಃ ಅಲ್ಲಿ ಯಾರಿಗೂ ತಿಳಿದಿರಲಿಲ್ಲ ಅನ್ಸತ್ತೆ, ಹಾಗೆ ಹೊರಟ ಡ್ರೈವರ್ ಹೇಗೋ ಕಷ್ಟಪಟ್ಟು ರೋಡಿಗೆ ತಂದ, ಅಲ್ಲಿ ಜಗ್ಗೇಶ್ ನನ್ ಹಾಗೆ ಕಿಟಕಿ ತೂರಿ ಒಳಗಡೆ ಬಂದ್ರು. ಸುಮಾರು ಎರಡು ಗಂಟೆ ಪ್ರಯಾಣದಲ್ಲಿ ಬಹುಶಃ ಮೆಕ್ರಿ ಸರ್ಕಲ್ ಹತ್ರ ಬಂತು ಅನ್ಸತ್ತೆ, ಅಲ್ಲಿ ಮತ್ತೆ ಜನ ಅಡ್ಡ ಹಾಕಿ ಕೂತರು…. ನಾನು ಮಾತ್ರ ಆ ಮಹಾತ್ಮನ್ನ ಕಣ್ ತುಂಬಿಕೊಳ್ತಾನೆ ಕೂತಿದ್ದೆ, ಪೊಲೀಸರು ಜನರನ್ನ ನಿಯಂತ್ರಿಸಲಾಗದೆ ಅಸಹಾಯಕರಾಗಿ ನಿಂತಿದ್ರು, ಎರಡು ಗಂಟೆ ನಂತ್ರ… ಸಾಕು ಇಷ್ಟು ಸಾಕು ನನ್ ಜೀವ್ನ ಪಾವನ ಆಯಿತು ಅಂತ ಕಿಟಕಿ ಇಂದಾನೆ ಹೊರಗೆ ಇಳಿದುಬಂದೆ. ಆ ಎರಡು ಗಂಟೆಗಳ ಹೊತ್ತು ಆ ಮಹಾತ್ಮನ ಜೊತೆ ಕಳೆದದ್ದು ಮಹಾ ಪುಣ್ಯ ನಂದು. ಆ ಸಮಯದಲ್ಲಿ ಪಾಪ ಅವ್ರ ಕುಟುಂಬಸ್ತರಿಗೆ ಆ ಯೋಗ ಸಿಕ್ಕಿರಲಿಲ್ಲ, ಅಲ್ಲಿಂದ ಸೀದಾ ರೂಮ್ ಕಡೆ ನೆಡ್ಕೊಂಡ್ ಹೊರಟೆ… ದಾರಿ ಉದ್ದಕೂ ರಣರಂಗವೆ ಆಗಿ ಹೋಗಿತ್ತು, ಎಲ್ಲೆಲ್ಲೂ ಬೆಂಕಿ, ದಾಂಧಲೆ, ಕಲ್ಲು ತೂರಾಟ,ದೊಂಬಿ, ಪೊಲೀಸರು ಕಂಗೆಟ್ಟು ಕೂತಿದ್ದರು. ಇಂತ ಏಕಾಏಕಿ ಸಿಡಿಲಿಗೆ ಅವ್ರು ತಯಾರಾಗಿ ಇರ್ಲಿಲ್ಲ ಪಾಪ,,
ಹೀಗೆ ಜಗತ್ತಿನ ಶ್ರೇಷ್ಠ ವ್ಯಕ್ತಿಯ ಸಾಮೀಪ್ಯ ನಂಗೆ ಶಾಶ್ವತ ನೆನಪಾಗಿ ಉಳಿದಿದೆ.

Leave a Reply