ಒಂದೊಮ್ಮೆ ಕುಲಭೂಷಣ್ ಜಾಧವ್ ಭಾರತದ ಗೂಢಚಾರಿ ಆದರೂ ಸಹ ಪಾಕಿಸ್ತಾನ ಗಲ್ಲು ಶಿಕ್ಷೆ ನೀಡಲು ಸಾಧ್ಯವಿಲ್ಲ ಏಕೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನದಲ್ಲಿ ಭಾರತೀಯ ಪ್ರಜೆ ಕುಲ್ ಭೂಷಣ್ ಜಾಧವ್ ಅವರನ್ನು ಗಲ್ಲಿಗೇರಿಸುವ ತೀರ್ಪಿನ ವಿರುದ್ಧ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತುತ್ತಿದೆ. ಪಾಕಿಸ್ತಾನದ ಆರೋಪದಂತೆ ಜಾಧವ್ ಭಾರತದ ಪರವಾಗಿ ಗೂಢಚಾರಿಕೆ ಕೆಲಸ ಮಾಡಿದ್ದಾರೆ ಎಂದು ಪರಿಗಣಿಸಿದರೂ ಹೀಗೆ ಅವರನ್ನು ಏಕಾಏಕಿ ಗಲ್ಲಿಗೇರಿಸುವ ಶಿಕ್ಷೆ ನೀಡಲು ಪಾಕಿಸ್ತಾನಕ್ಕೆ ಅವಕಾಶ ಇಲ್ಲ. ಅದು ಹೇಗೆ ಎಂದರೆ…

ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರ ರಾಷ್ಟ್ರಗಳ ನಡುವೆ ಆಗಿರುವ ವಿಯೆನ್ನಾ ಒಪ್ಪಂದದ ನಿಯಮದ ಪ್ರಕಾರ, ಯಾವುದೇ ಒಂದು ರಾಷ್ಟ್ರದ ಪ್ರಜೆ ಬೇರೊಂದು ರಾಷ್ಟ್ರದಲ್ಲಿ ತಪ್ಪನ್ನು ಮಾಡಿದರೆ, ಆ ಪ್ರಜೆಯ ಪರವಾಗಿ ವಾದ ಮಾಡಲು ನ್ಯಾಯವಾದಿಗಳನ್ನು ನೇಮಿಸಲು ಅವಕಾಶವನ್ನು ಆ ರಾಷ್ಟ್ರಕ್ಕೆ ನೀಡಬೇಕು. ನಂತರ ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು. ಹೀಗೆ ಆ ವ್ಯಕ್ತಿಯ ಪರವಾಗಿ ಆತನ ರಾಷ್ಟ್ರ ನೇಮಿಸಿದ ನ್ಯಾಯವಾದಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ನಂತರವೂ ತಪ್ಪು ಮಾಡಿರುವುದು ಸಾಬೀತಾದರೆ ಮಾತ್ರ ಆತನಿಗೆ ಶಿಕ್ಷೆ ನೀಡುವ ಅವಕಾಶವಿದೆ. ಆದರೆ ಈ ಪ್ರಕರಣದಲ್ಲಿ ಹೀಗೆ ಆಗಿಲ್ಲ. ಜಾಧವ್ ಅವರ ಮೇಲೆ ಗೂಢಚಾರದ ಆರೋಪ ಹೊರಿಸಿರುವ ಪಾಕಿಸ್ತಾನ, ಆತನ ಪರವಾಗಿ ನ್ಯಾಯವಾದಿಯನ್ನು ನೇಮಕ ಮಾಡಲು ಭಾರತಕ್ಕೆ ಯಾವುದೇ ಅವಕಾಶ ನೀಡಿಲ್ಲ. ಭಾರತವು ಜಾಧವ್ ಪರವಾಗಿ ನ್ಯಾಯವಾದಿ ನೇಮಕ ಮಾಡುವ ಬಗ್ಗೆ ಸಾಕಷ್ಟು ಬಾರಿ ಪಾಕಿಸ್ತಾನದ ಗಮನಕ್ಕೆ ತಂದಿದ್ದರೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಹೀಗಾಗಿ ಈ ತೀರ್ಪು ನೀಡುವ ಮೂಲಕ ಪಾಕಿಸ್ತಾನ ಅಂತಾರಾಷ್ಟ್ರೀಯ ಒಪ್ಪಂದದ ಉಲ್ಲಂಘನೆ ಮಾಡಿದೆ.

ಜಾಧವ್ ಮಾಜಿ ನೌಕಾ ಪಡೆ ಅಧಿಕಾರಿಯಾಗಿದ್ದರೂ ಈತ ತನ್ನ ಪರ ಯಾವುದೇ ಗೂಢಚಾರ ಕೆಲಸ ಮಾಡಿಲ್ಲ ಎಂಬುದು ಭಾರತದ ವಾದ. ಆದರೆ ಪಾಕಿಸ್ತಾನವು ಜಾಧವ್ ಬಲೂಚಿಸ್ತಾನದ ಹಿಂಸಾಚಾರಗಳಲ್ಲಿ ಕೈವಾಡ ಹೊಂದಿದ್ದಾರೆ ಎಂದು ಆರೋಪಿಸಿದೆ. ಒಂದು ವೇಳೆ ಪಾಕಿಸ್ತಾನದ ಆರೋಪದಂತೆ ಜಾಧವ್ ನನ್ನು ಗೂಢಚಾರಿಯಾಗಿ ಭಾರತ ನೇಮಿಸಿದ್ದರೆ ಅವರಿಗೆ ಬೇರೆ ದೇಶದ ಪಾಸ್ ಪೊರ್ಟ್ ಕೊಟ್ಟು ಗೂಢಚಾರಿಕೆ ಮಾಡಲು ಕಳುಹಿಸಲಾಗುತ್ತಿತ್ತೇ ಹೊರತು ತನ್ನದೇ ದೇಶದ ಪಾಸ್ ಪೋರ್ಟ್ ನೀಡುತ್ತಿರಲಿಲ್ಲ. ಪಾಕಿಸ್ತಾನ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಜಾಧವ್ ಅವರನ್ನು ಇರಾನ್ ನಿಂದ ಅಪಹರಿಸಿ ಅವರಿಗೆ ಹಿಂಸೆ ನೀಡಿ ಬಲವಂತವಾಗಿ ತಾನು ಗೂಢಚಾರಿ ಎಂದು ಹೇಳುವಂತೆ ಮಾಡಿದೆ ಎಂದು ಭಾರತ ವಾದಿಸುತ್ತಿದೆ.

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಅಮೆರಿಕ ಸಹ ಪಾಕಿಸ್ತಾನದ ಈ ನಿರ್ಧಾರವನ್ನು ಪ್ರಶ್ನಿಸಿದೆ. ಅಮೆರಿಕದ ತಜ್ಞರು ಪಾಕಿಸ್ತಾನದ ಈ ಕ್ರಮವನ್ನು ಟೀಕಿಸಿದ್ದು, ಇದು ಭಾರತ ವಿರುದ್ಧ ಪಿತೂರಿ ನಡೆಸಲು ಪಾಕಿಸ್ತಾನ ಆಯ್ಕೆ ಮಾಡಿಕೊಂಡಿರುವ ಹೊಸ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನ ಭಾರತದ ವಿರುದ್ಧ ಹೀಗೆ ಹೊಸ ಪಿತೂರಿ ನಡೆಸಲು ಕಾರಣ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕೆ ಉತ್ತರ ಹೀಗಿದೆ… ಇಷ್ಟು ದಿನಗಳ ಕಾಲ ಪಾಕಿಸ್ತಾನ ತನ್ನ ಸೇನೆಯ ರಕ್ಷಾ ಕವಚದೊಂದಿಗೆ ಗಡಿಯಲ್ಲಿ ಉಗ್ರರ ಮೂಲಕ ಭಾರತದ ಮೇಲೆ ದಾಳಿ ಮಾಡುತಿತ್ತು. ಪಾಕಿಸ್ತಾನದ ಈ ಪ್ರಯತ್ನವನ್ನು ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶ್ನಿಸಿ, ಪಾಕಿಸ್ತಾನ ಭಯೋತ್ಪಾದಕರ ತವರು ಎಂದು ಟೀಕಿಸುತ್ತಿದೆ. ಇದರಿಂದ ವಿಶ್ವ ಮಟ್ಟದಲ್ಲಿ ತನ್ನ ಮರ್ಯಾದೆ ಹರಾಜಾಗುತ್ತಿದ್ದು ಇತರೆ ರಾಷ್ಟ್ರಗಳ ಒತ್ತಡ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೀಗಾಗಿ ಜಾಧವ್ ರನ್ನು ಬಳಸಿಕೊಂಡು ಭಾರತವೂ ಸಹ ತನ್ನ ವಿರುದ್ಧ ಪಿತೂರಿ ನಡೆಸಿ ತನ್ನ ದೇಶದಲ್ಲಿ ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂಬುದರ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತವನ್ನು ಋಣಾತ್ಮಕವಾಗಿ ಬಿಂಬಿಸುವುದು ಪಾಕಿಸ್ತಾನದ ಹೊಸ ಕುತಂತ್ರ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಬದಲಾಗುತ್ತಿದ್ದಂತೆ, ಭಾರತದ ವಿರುದ್ಧದ ಪಿತೂರಿ ಕ್ರಮವೂ ಬದಲಾಗುತ್ತಿರುವುದು ಈ ಎಲ್ಲ ಬೆಳವಣಿಗೆಗಳಿಂದ ಸ್ಪಷ್ಟವಾಗಿದೆ.

ಪಾಕಿಸ್ತಾನದ ಈ ಹೊಸ ತಂತ್ರದ ವಿರುದ್ಧ ಭಾರತ ಕೆಂಡಾಮಂಡಲವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನೆಲ್ಲಾ ಬಲ ಪ್ರಯೋಗ ಮಾಡುವ ಮೂಲಕ ಜಾಧವ್ ರನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ನಿರತವಾಗಿದೆ. ಭಾರತದ ಸಂಸತ್ತಿನಲ್ಲೂ ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದ್ದು, ಈ ವಿಚಾರದಲ್ಲಿ ಎಲ್ಲರೂ ಒಟ್ಟಾಗಿ ಪಾಕಿಸ್ತಾನ ವಿರುದ್ಧ ನಿಲ್ಲಲು ಒಮ್ಮತದ ಕೂಗು ಕೇಳಿ ಬಂದಿದೆ.

Leave a Reply