‘ಇಂದಿರಾ ಕ್ಯಾಂಟೀನ್ ಅಲ್ಲ, ಅಕ್ಕ ಕ್ಯಾಂಟೀನ್ ಆಗಲಿ…’: ನಾರಾಯಣಗೌಡ

ಡಿಜಿಟಲ್ ಕನ್ನಡ ಟೀಮ್:

‘ರಾಜ್ಯ ಸರ್ಕಾರ ಬಡವರಿಗೆ ಕಡಿಮೆ ದರದಲ್ಲಿ ಊಟ ಉಪಹಾರ ಒದಗಿಸಲು ಕ್ಯಾಂಟೀನ್ ತೆರೆಯುವ ನಿರ್ಧಾರ ಹಾಗೂ ಅದಕ್ಕಾಗಿ ಬಜೆಟ್ ನಲ್ಲಿ ₹ 100 ಕೋಟಿ ಕೊಟ್ಟಿರುವುದು ಸ್ವಾಗತಾರ್ಹ. ಆದರೆ ಈ ಕ್ಯಾಂಟೀನ್ ಗೆ ಇಂದಿರಾ ಎಂದು ಹೆಸರಿಡುವ ಬದಲು ಮಹಾಶರಣೆ ಅಕ್ಕಮಹಾದೇವಿ ಅವರ ಹೆಸರಿಡಬೇಕು…’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ ನಾರಾಯಣಗೌಡ ಅವರು ಆಗ್ರಹಿಸಿದ್ದಾರೆ.

ಬುಧವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಸರ್ಕಾರವನ್ನು ಒತ್ತಾಯಿಸಿರುವ ನಾರಾಯಣಗೌಡರು ಈ ಬಗ್ಗೆ ಹೇಳಿರುವುದು ಹೀಗಿದೆ…

‘ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹೆಸರನ್ನು ಈಗಾಗಲೇ ರಾಷ್ಟ್ರಮಟ್ಟದಲ್ಲಿ ನೂರಾರು ರಸ್ತೆ, ಯೋಜನೆ, ಪ್ರಶಸ್ತಿ ಇತ್ಯಾದಿಗಳಿಗೆ ಇಡಲಾಗಿದೆ. ಪದೇ ಪದೇ ರಾಷ್ಟ್ರ ನಾಯಕರ ಹೆಸರುಗಳನ್ನೇ ನಾಮಕರಣ ಮಾಡುವ ಸಂಪ್ರದಾಯ ನಿಲ್ಲಿಸಿ ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಪರಂಪರೆಯ ಮಹಾಚೇತನಗಳ ಹೆಸರನ್ನು ಇಡುವ ಪರಂಪರೆ ಆರಂಭಿಸಬೇಕಿದೆ. ರಾಜಕೀಯ ಪ್ರೇರಿತವಾಗಿ ಇಂದಿರಾ ಕ್ಯಾಂಟೀನ್ ಎಂದು ನಾಮಕರಣ ಮಾಡುವುದನ್ನು ಕರವೇ ತೀವ್ರವಾಗಿ ಖಂಡಿಸುತ್ತದೆ.

ಕರ್ನಾಟಕದ ಇತಿಹಾಸದಲ್ಲಿ ಶರಣಪರಂಪರೆಗೆ ಮಹತ್ವದ ಸ್ಥಾನವಿದೆ. ಬಸವಾದಿ ಶರಣರು ಸಾಮಾಜಿಕ ಕ್ರಾಂತಿಯ ಹರಿಕಾರರು, ಸಮಸಮಾಜದ ಕನಸುಗಳಿಗಾಗಿ ಹೊತೊರೆದವರು ಕನ್ನಡ ಸಾಹಿತ್ಯ ಪರಂಪರೆಗೆ ವಚನ ಸಾಹಿತ್ಯದ ಭವ್ಯಧಾರೆ ನೀಡಿ ಸಾಮಾನ್ಯ ಜನರಿಗೂ ಸಾಹಿತ್ಯ ತಲುಪುವಂತೆ ಮಾಡಿದ ಶರಣರ ಹೆಸರನ್ನೇ ಇಂತಹ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಇಡುವುದು ಉತ್ತಮ. ಹೀಗಾಗಿ ಸರ್ಕಾರದ ಕ್ಯಾಂಟೀನ್ ಯೋಜನೆಗೆ ಅಕ್ಕ ಕ್ಯಾಂಟೀನ್ ಎಂದು ಹೆಸರಿಡಬೇಕು.’

Leave a Reply