ಮೇ 1ರಿಂದ ಪ್ರತಿನಿತ್ಯವೂ ಪರಿಷ್ಕರಣೆಯಾಗಲಿದೆ ಪೆಟ್ರೋಲ್, ಡೀಸೆಲ್ ದರ

ಡಿಜಿಟಲ್ ಕನ್ನಡ ಟೀಮ್:

ಇಷ್ಟು ದಿನಗಳ ಕಾಲ ತಿಂಗಳಲ್ಲಿ ಎರಡು ಬಾರಿ ನಡೆಯುತ್ತಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆ ಇನ್ನು ಮುಂದೆ ಮೇ 1 ರಿಂದ ಪ್ರತಿನಿತ್ಯ ನಡೆಯಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಆಧಾರದ ಮೇಲೆ ಇಲ್ಲಿ ದರ ಪರಿಷ್ಕರಣೆಯಾಗಲಿದೆ.

ಭಾರತದ ಪ್ರಮುಖ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಹಾಗೂ ಹಿಂದುಸ್ಥಾನ್ ಪೆಟ್ರೋಲಿಯಂ ಕಂಪನಿಗಳು ಪ್ರಾಯೋಗಿಕವಾಗಿ ದೇಶದ ಐದು ನಗರಗಳಲ್ಲಿ ನಿತ್ಯ ದರ ಪರಿಷ್ಕರಣೆ ನಡೆಸಲಿದ್ದು, ನಂತರ ಹಂತ ಹಂತವಾಗಿ ದೇಶದಾದ್ಯಂತ ವಿಸ್ತರಿಸಲಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮುಖ್ಯಸ್ಥ ಬಿ.ಅಶೋಕ್, ‘ಕಡೆಗೂ ನಾವು ಮಾರುಕಟ್ಟೆಗೆ ಅನುಗುಣವಾಗಿ ನಿತ್ಯ ಪೆಟ್ರೋಲ್ ಹಾಗೂ ಡೀಸೆಲ್ ದರ ಪರಿಷ್ಕರಣೆ ಮಾಡಲು ಮುಂದಾಗಿದ್ದೇವೆ. ಈ ದರ ಪರಿಷ್ಕರಣೆ ದೇಶದ ಎಲ್ಲಾ ಪೆಟ್ರೋಲ್ ಬಂಕ್ ಗಳಿಗೂ ಅನ್ವಯವಾಗಲಿವೆ. ತಾಂತ್ರಿಕ ಅಂಶಗಳ ಆಧಾರದ ಮೇಲೆ ನಿತ್ಯವೂ ತೈಲ ದರ ಬದಲಾಗುತ್ತಿರುತ್ತದೆ. ಆದರೆ ಇದನ್ನು ಸಂಪೂರ್ಣವಾಗಿ ಜಾರಿಗೊಳಿಸುವ ಮೊದಲು ಪ್ರಾಥಮಿಕ ಪ್ರಯೋಗ ಮಾಡಬೇಕಿದೆ. ಹೀಗೆ ಪ್ರಯೋಗ ಮಾಡಿದ ನಂತರ ಅದರ ಫಲಿತಾಂಶ ಪಡೆದು ದೇಶದಾದ್ಯಂತ ವಿಸ್ತರಿಸಲಾಗುವುದು.’ ಎಂದರು.

ಸದ್ಯ ತೈಲ ಕಂಪನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆಯ ಸರಾಸರಿಯನ್ನು ಲೆಕ್ಕ ಹಾಕಿ ತಿಂಗಳ 1ನೇ ಹಾಗೂ 16ನೇ ತಾರೀಕಿನಿಂದ ಪರಿಷ್ಕೃತ ತೈಲ ದರವನ್ನು ಪ್ರಕಟಿಸಲಾಗುತ್ತಿತ್ತು. ಈಗ ಹದಿನೈದು ದಿನಕ್ಕೊಮ್ಮೆ ಬದಲಿಗೆ ಪ್ರತಿನಿತ್ಯವೂ ದರ ಪರಿಷ್ಕರಣೆಯಾಗಲಿದೆ. ಮೊದಲ ಹಂತದಲ್ಲಿ ಆಂಧ್ರಪ್ರದೇಶದ ಪುದುಚೆರಿ, ವೈಜಾಗ್, ರಾಜಸ್ಥಾನದ ಉದಯ್ ಪುರ, ಜಾರ್ಖಂಡ್ ನ ಜೆಮ್ಷೆಡ್ ಪುರ ಹಾಗೂ ಚಂಡೀಗಡದಲ್ಲಿ ದರ ಪರಿಷ್ಕರಣೆ ಮಾಡಲಾಗುವುದು.

Leave a Reply