ಸಿರಿಯಾ ಮೇಲೆ ಕ್ಷಿಪಣಿ ದಾಳಿ ಮಾಡಲು ಟ್ರಂಪ್ ಗೆ ಪ್ರೇರಣೆ ಯಾರು?

ಡಿಜಿಟಲ್ ಕನ್ನಡ ಟೀಮ್:

ತನ್ನ ನಾಗರೀಕರ ಮೇಲೆ ವಿಷಾನಿಲ ದಾಳಿ ಮಾಡಿದ್ದ ಸಿರಿಯಾದ ಸರ್ವಾಧಿಕಾರಿ ಬಾಷರ್ ಅಲ್ ಅಸಾದ್ ಗೆ ಪಾಠ ಕಲಿಸಬೇಕು ಎಂದು ಅಲ್ಲಿನ ವಾಯುನೆಲೆಗಳ ಮೇಲೆ ಅಮೆರಿಕ ದಾಳಿ ಮಾಡಿದ್ದು ನಿಮ್ಮೆಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಟ್ರಂಪ್ ಏಕಾಏಕಿ ಸಿರಿಯಾ ಮೇಲೆ ದಾಳಿ ಮಾಡುವ ನಿರ್ಧಾರಕ್ಕೆ ಬರಲು ಕಾರಣ, ಅವರ ಮಗಳು ಇವಾಂಕ ಟ್ರಂಪ್!

ಹೌದು, ಟ್ರಂಪ್ ಅವರ ಈ ನಿರ್ಧಾರಕ್ಕೆ ಇವಾಂಕ ಕಾರಣ ಎಂದು ಸ್ವತಃ ಟ್ರಂಪ್ ಪುತ್ರ ಎರಿಕ್ ಟ್ರಂಪ್ ಹೇಳಿಕೆ ನೀಡಿದ್ದಾರೆ ಎಂದು ದ ಟೆಲಿಗ್ರಾಫ್ ವರದಿ ಮಾಡಿದೆ. ಸಿರಿಯಾದಲ್ಲಿ ವಿಷಾನಿಲ ದಾಳಿಗೆ ತುತ್ತಾದ ಅಮಾಯಕ ಜನರ ಪರದಾಟ ಅದರಲ್ಲೂ ಸಣ್ಣ ಮಕ್ಕಳು ಉಸಿರಾಟದ ತೊಂದರೆಯಿಂದ ನರಳಿ ನರಳಿ ಸಾಯುತ್ತಿರುವ ದೃಶ್ಯ ಇಡೀ ವಿಶ್ವದ ಮನಕಲುಕಿತ್ತು. ಟಿವಿಯಲ್ಲಿ ಪ್ರಸಾರವಾದ ಈ ದಾಳಿಯ ದೃಶ್ಯಗಳನ್ನು ಕಂಡು ತಮ್ಮ ತಂದೆ ಬೇಸರಗೊಂಡರು. ಸಿರಿಯಾದಲ್ಲಿ ಮಕ್ಕಳು ಸಾವಿನ ದವಡೆಯಲ್ಲಿ ಅನುಭವಿಸಿದ ನರಳಾಟ ಇವಾಂಕ ಮೇಲೆ ತೀವ್ರ ಪರಿಣಾಮ ಬೀರಿತ್ತು.

ಇವಾಂಕ ಸಹ ಮೂರು ಮಕ್ಕಳ ತಾಯಿಯಾಗಿದ್ದು, ಸಿರಿಯಾ ಮಕ್ಕಳ ನರಳಾಟ ನೋಡಿ ಅರಗಿಸಿಕೊಳ್ಳಲಾಗದೇ ಮಾನಸಿಕವಾಗಿ ಕುಗ್ಗಿದರು. ಅಲ್ಲದೆ ‘ಇದೊಂದು ಕೆಟ್ಟ ಕೃತ್ಯವಾಗಿದ್ದು, ಇದನ್ನು ಸಹಿಸಲಾಗುವುದಿಲ್ಲ’ ಎಂದು ಹೇಳಿದಳು. ಇದು ನಮ್ಮ ತಂದೆ ಮೇಲೆ ಪರಿಣಾಮ ಬೀರಿ, ಅವರು ಅಸಾದ್ ಗೆ ತಕ್ಕ ಪಾಠ ಕಲಿಸಲೇಬೇಕು ಎಂಬ ಗಟ್ಟಿ ನಿರ್ಧಾರಕ್ಕೆ ಬರುವಂತೆ ಮಾಡಿತು.

ಒಬ್ಬ ರಾಷ್ಟ್ರದ ನಾಯಕ ತನ್ನ ಜನರ ಮೇಲೆಯೇ ಇಂತಹ ದಾಳಿ ಮಾಡುತ್ತಾನೆ ಎಂದರೆ ಅದಕ್ಕಿಂತ ಕೆಟ್ಟ ಪರಿಸ್ಥಿತಿ ಬೇರೆ ಇಲ್ಲ. ವಿಶ್ವದ ಹಿರಿಯ ಹಾಗೂ ಬಲಶಾಲಿ ರಾಷ್ಟ್ರವಾಗಿರುವ ಅಮೆರಿಕ ಈ ವಿಚಾರದಲ್ಲಿ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಿದೆ. ನಮ್ಮ ಈ ಕ್ರಮಕ್ಕೆ ಇತರೆ ರಾಷ್ಟ್ರಗಳು ಬೆಂಬಲ ಸೂಚಿಸಿವೆ ಎಂದಿದ್ದಾರೆ ಎರಿಕ್ ಟ್ರಂಪ್.

ಇದೇ ವೇಳೆ ಟ್ರಂಪ್ ಅವರ ಈ ನಿರ್ಧಾರದ ಹಿಂದೆ ತನ್ನ ಪ್ರಭಾವ ಇಲ್ಲ ಎಂದು ಹೇಳಿಕೊಂಡಿರುವ ಇವಾಂಕ, ‘ನನ್ನ ತಂದೆ ಟಿವಿಯಲ್ಲಿನ ದೃಶ್ಯಗಳನ್ನು ನೋಡಿ ಬೇಸರಗೊಂಡು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರೊಬ್ಬ ಉತ್ತಮ ಚಿಂತಕ ಹಾಗೂ ಮಾನಸಿಕ ಸದೃಢ ವ್ಯಕ್ತಿಯಾಗಿದ್ದು, ಈ ಬಗ್ಗೆ ಯೋಚಿಸಿ ಕ್ರಮ ಕೈಗೊಂಡಿದ್ದಾರೆಯೇ ಹೊರತು ದುಡುಕುವ ವ್ಯಕ್ತಿ ಅಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

Leave a Reply