ಉಪಚುನಾವಣೆ ಕಾಳಗದಲ್ಲಿ ಗೆದ್ದಿತು ಸಿದ್ದರಾಮಯ್ಯ ಪ್ರತಿಷ್ಠೆ, ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಫಲಿತಾಂಶದ ಮೇಲೆ ಜೆಡಿಎಸ್ ಪ್ರಭಾವ?

ಡಿಜಿಟಲ್ ಕನ್ನಡ ಟೀಮ್:

ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ನಂಜನಗೂಡು ಹಾಗೂ ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಗೆದ್ದು ಜಯಭೇರಿ ಭಾರಿಸಿದೆ. ಮತ ಏಣಿಕೆಯ ಎಲ್ಲ ಹಂತಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಸತತವಾಗಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಸರ್ಕಾರದ ಮಂತ್ರಿಮಂಡಲದ ಸಂಘಟಿತ ಪರಿಶ್ರಮಕ್ಕೆ ಫಲಸಿಕ್ಕಂತಾಗಿದೆ.

ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಂಜನಗೂಡಿನಲ್ಲಿ ಬಿಜೆಪಿ ಪರ ಕಣಕ್ಕಿಳಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಕ್ಷೇತ್ರ ಪ್ರತಿಷ್ಠೆಯ ಕಣವಾಗಿ ಬಿಂಬಿತವಾಗಿತ್ತು. ಹೀಗಾಗಿ ಜೆಡಿಎಸ್ ನ ಕಳಲೆ ಕೇಶವಮೂರ್ತಿ ಅವರನ್ನು ಪಕ್ಷಕ್ಕೆ ಸೆಳೆದುಕೊಂಡು ಚುನಾವಣೆಯಲ್ಲಿ ಜಯ ಸಾಧಿಸುವಲ್ಲಿ ಕಾಂಗ್ರೆಸ್ ಪ್ರಯೋಗಿಸಿದ ಎಲ್ಲ ತಂತ್ರಗಾರಿಕೆ ಉತ್ತಮ ಫಲಿತಾಂಶ ನೀಡಿದೆ.

11.30ರ ವೇಳೆಗೆ ನಡೆದ 11 ಸುತ್ತುಗಳ ಮತ ಏಣಿಕೆ ನಂತರ ನಂಜನಗೂಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೇಶವಮೂರ್ತಿ 67922 ಮತಗಳನ್ನು ಪಡೆದರೆ, ಶ್ರೀನಿವಾಸ್ ಪ್ರಸಾದ್ 49615 ಮತಗಳನ್ನಷ್ಟೇ ಪಡೆದರು. ಇನ್ನು ಗುಂಡ್ಲುಪೇಟೆಯಲ್ಲೂ ಮಾಜಿ ಸಚಿವ ದಿವಂಗತ ಮಹದೇವ ಪ್ರಸಾದ್ ಅವರ ಪತ್ನಿ ಗೀತಾ ಮಹದೇವ್ ಪ್ರಸಾದ್ 87253 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ನಿರಂಜನ್ 75199 ಮತಗಳನ್ನು ಪಡೆದರು.

ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಈ ಹಿಂದೆಯೂ ಗೆದ್ದಿರಲಿಲ್ಲ. ಹೀಗಾಗಿ ಈ ಚುನಾವಣೆಯಲ್ಲಿ ತನ್ನ ಮತಗಳ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದಷ್ಟೇ ಸಮಾಧಾನಕರ ಅಂಶವಾಗಿದೆ. ಮತ್ತೊಂದೆಡೆ ಆಡಳಿತ ಪಕ್ಷ ಕಾಂಗ್ರೆಸ್ ತನ್ನ ಮಂತ್ರಿಮಂಡಲವನ್ನು ಚುನಾವಣೆ ಪ್ರಚಾರಕ್ಕೆ ಇಳಿಸುವುದು ಎಷ್ಟು ಯಶಸ್ಸು ಕೊಟ್ಟಿದೆಯೇ, ಅದೇ ರೀತಿ ಜೆಡಿಎಸ್ ಸ್ಪರ್ಧೆಯಿಂದ ದೂರ ಉಳಿದಿದ್ದು ಕಾಂಗ್ರೆಸ್ ಗೆ ಸಕಾರಾತ್ಮಕವಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪನವರ ಪ್ರತಿಷ್ಠೆಯ ಕದನದಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ.

ಈ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿರುವುದಿಷ್ಟು…
’ನಂಜನಗೂಡು ಹಾಗೂ ಗುಂಡ್ಲುಪೇಟೆ ಎರಡೂ ಕ್ಷೇತ್ರಗಳಲ್ಲಿ ನಮಗೆ ಹಿನ್ನಡೆ ಸ್ಪಷ್ಟವಾಗಿದೆ. ಈ ಹಿನ್ನಡೆಯನ್ನು ನಾವು ನಿರೀಕ್ಷಿಸರಿರಲಿಲ್ಲ ಹಾಗೂ ಟೀಕೆಯನ್ನು ಮಾಡುವುದಿಲ್ಲ. ಮತದಾರರ ಭಾವನೆಗೆ ಗೌರವ ನೀಡುತ್ತೇವೆ ಹಾಗೂ ಅವರ ತೀರ್ಪನ್ನು ಸ್ವಾಗತಿಸುತ್ತೇವೆ. ಫಲಿತಾಂಶ ಪ್ರಕಟವಾಗಿದೆ. ಈ ಹಂತದಲ್ಲಿ ನಾವು ಟೀಕೆ ಮಾಡಿದರೆ ಅದು ಮತದಾರರಿಗೆ ಅಗೌರವ ತೋರಿದಂತಾಗುತ್ತದೆ. ನಮಗೆ ಈ ಎರಡೂ ಕ್ಷೇತ್ರಗಳು ಹೊಸತು. ಇಲ್ಲಿನ ಜನರನ್ನು ಹೊಸದಾಗಿ ಪರಿಚಯಿಸಿಕೊಂಡು ಸಾಕಷ್ಟು ಪ್ರಯತ್ನಪಟ್ಟಿದ್ದೇವೆ. ಆದರೆ ಶ್ರೀನಿವಾಸ್ ಅವರಂತಹ ಹಿರಿಯ ನಾಯಕರಿಗೆ ಈ ಹಿನ್ನಡೆ ಅನಿರೀಕ್ಷಿತ. ಕಾಂಗ್ರೆಸ್ ಅವರು ಯಾವ ರೀತಿ ಚುನಾವಣೆ ನಡೆಸಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಅದರ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ. ಈ ಕ್ಷೇತ್ರಗಳು ಈ ಹಿಂದೆ ನಮ್ಮ ಕೈಯಲ್ಲಿ ಇರಲಿಲ್ಲ. ಈ ಉಪಚುನಾವಣೆಗಳಲ್ಲಿನ ಸೋಲು ಮುಂದಿನ ವಿಧಾನಸಭೆ ಚುನಾವಣೆಯಲ್ಲಿನ ನಮ್ಮ ಮಿಷ್ 150ಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ.’

Leave a Reply