ಕೆನಡಾ ಗೃಹಮಂತ್ರಿ ಇಲ್ಲಿಗೆ ಬಂದಾಗ ಭೇಟಿಯಾಗಲ್ಲ, ಆತ ಪ್ರತ್ಯೇಕತಾವಾದದ ಬೆಂಬಲಿಗ: ರಾಷ್ಟ್ರವಾದಿಗಳ ಮನಗೆಲ್ಲುತ್ತಿದೆ ಪಂಜಾಬ್ ಮುಖ್ಯಮಂತ್ರಿಯ ನಿಲುವು!

ಡಿಜಿಟಲ್ ಕನ್ನಡ ಟೀಮ್:

ಇದೇ ತಿಂಗಳಲ್ಲಿ ಕೆನಡಾದ ಗೃಹ ಸಚಿವ ಹರ್ಜಿತ್ ಸಜ್ಜನ್ ಭಾರತಕ್ಕೆ ಭೇಟಿ ಮಾಡಲಿದ್ದು, ವಿಶೇಷವಾಗಿ ಪಂಜಾಬಿಗೂ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ‘ನಾನು ಅವರನ್ನು ಭೇಟಿ ಮಾಡಲ್ಲ…’ ಎಂದು ಕಡ್ಡಿ ತುಂಡು ಮಾಡಿದ್ದಂತೆ ಹೇಳಿದ್ದಾರೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್.

ಅರೆ, ಬೇರೆ ದೇಶದ ನಾಯಕನೊಬ್ಬ ಭಾರತಕ್ಕೆ ಬರುತ್ತಿರುವಾಗ ಆತನಿಗೆ ಅತಿಥಿ ಸತ್ಕಾರ ನೀಡುವುದು ನಮ್ಮ ಸಂಸ್ಕೃತಿಯಲ್ಲವೇ? ಆದರೆ ಅಮ್ರಿಂದರ್ ಸಿಂಗ್ ಹರ್ಜಿತ್ ಸಜ್ಜನ್ ಅವರನ್ನು ಭೇಟಿಯಾಗಲು ನಿರಾಕರಿಸುತ್ತಿರುವುದಕ್ಕೆ ಕಾರಣ ಏನು? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಅಮರಿಂದರ್ ಸಿಂಗ್ ಅವರ ಈ ಹೇಳಿಕೆಯ ಹಿಂದೆ ಒಂದು ಬಲವಾದ ಕಾರಣ ಇದ್ದು, ಅದನ್ನು ಕೇಳಿದರೆ ನೀವು ಅಮರಿಂದರ್ ಅವರ ಬೆಂಬಲಕ್ಕೆ ನಿಲ್ಲುತ್ತೀರಿ. ಆ ಕಾರಣ ಹೀಗಿದೆ…

ಹರ್ಜಿತ್ ಸಿಂಗ್ ಕೇವಲ ಕೆನಡಾದ ಗೃಹ ಸಚಿವ ಮಾತ್ರವಲ್ಲ. ಈ ಹಿಂದೆ ಆತ ಪಂಜಾಬ್ ಅನ್ನು ಭಾರತದಿಂದ ಬೇರೆ ಮಾಡಿ ಕಾಲಿಸ್ತಾನ ಸ್ಥಾಪನೆ ಮಾಡಲು ಪ್ರಯತ್ನಿಸಿದ್ದ ಪ್ರತ್ಯೇಕವಾದಿಗಳ ಬೆಂಬಲಿಗ. ಸಿಖ್ಖರಿಗೆ ಪ್ರತ್ಯೇಕ ರಾಷ್ಟ್ರ ಆಗಬೇಕು ಎಂಬುದು ಈ ಕಾಲಿಸ್ತಾನಿ ಪ್ರತ್ಯೇಕತವಾದಿಗಳ ಹೋರಾಟವಾಗಿತ್ತು. 1970 ಹಾಗೂ 80ರ ದಶಕದಲ್ಲಿ ಕಾಲಿಸ್ತಾನ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಯುವಕರಿಗೆ ಹಣದ ಆಮಿಷ ನೀಡಿ ಉಗ್ರರ ಪಡೆಗೆ ಸೇರುವಂತೆ ಮನವೊಲಿಸಲಾಗುತ್ತಿತ್ತು. ಅಲ್ಲದೆ ಸಾಕಷ್ಟು ಹೋರಾಟವನ್ನು ಮಾಡಲಾಗಿತ್ತು. ಆದರೆ 1990ರ ದಶಕದ ಆರಂಭದಲ್ಲಿ ಭಾರತೀಯ ಸೇನೆ ಈ ಪ್ರತ್ಯೇಕತಾವಾದಿಗಳನ್ನು ಹತ್ತಿಕ್ಕುವ ಮೂಲಕ ಕಾಲಿಸ್ತಾನ ಕೂಗನ್ನು ಶಮನಗೊಳಿಸಿತು. ಹೀಗೆ ಪಂಜಾಬ್ ಅನ್ನು ಭಾರತದಿಂದ ಪ್ರತ್ಯೇಕ ಮಾಡುವ ಕಾಲಿಸ್ತಾನ ಕೂಗಿಗೆ ಈ ಹರ್ಜಿತ್ ಸಜ್ಜನ್ ಹಾಗೂ ಅವರ ತಂದೆ ಸಾಥ್ ನೀಡಿದ್ದರು. ಈಗ ಅವರು ಕೆನಡಾ ಗೃಹ ಮಂತ್ರಿಯಾಗಿದ್ದಾರೆ.

ಹರ್ಜಿತ್ ಸಜ್ಜನ್ ಅವರನ್ನು ಭೇಟಿ ಮಾಡಲು ನಿರಾಕರಿಸಿರುವ ಬಗ್ಗೆ ಪತ್ರಕರ್ತ ಶೇಖರ್ ಗುಪ್ತಾ ಅವರಿಗೆ ನೀಡಿದ ಸಂದರ್ಶನದಲ್ಲಿ ಹೇಳಿರುವುದಿಷ್ಟು…

‘ಹರ್ಜಿತ್ ಸಜ್ಜನ್ ಓರ್ವ ಕಾಲಿಸ್ತಾನಿ ಹೋರಾಟದ ಬೆಂಬಲಿಗ. ಆತನ ತಂದೆಯೂ ಕೂಡ ಕಾಲಿಸ್ತಾನ ಹೋರಾಟಕ್ಕೆ ಪ್ರೋತ್ಸಾಹ ನೀಡಿದ್ದ ವ್ಯಕ್ತಿ. ಕೇವಲ ಹರ್ಜಿತ್ ಮಾತ್ರವಲ್ಲದೇ, ಕೆನಡಾದಲ್ಲಿರುವ ಜಸ್ಟಿನ್ ಟ್ರುಡೇವ್ ಸರ್ಕಾರದ ಐವರು ಮಂತ್ರಿಗಳು ಕಾಲಿಸ್ತಾನ ಹೋರಾಟದ ಬೆಂಬಲಿಗರು. ಅವರೊಂದಿಗೆ ಸಂಪರ್ಕ ಹೊಂದುವ ಅಗತ್ಯ ನನಗಿಲ್ಲ. ಇದೇ ಕಾಲಿಸ್ತಾನಿ ಬೆಂಬಲಿಗರು ಕಳೆದ ವರ್ಷ ಏಪ್ರಿಲ್ ನಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ನನ್ನ ಪಂಜಾಬಿ ಗೆಳೆಯರನ್ನು ಭೇಟಿ ಮಾಡಿ ಅವರ ಪರವಾಗಿ ಚುನಾವಣ ಪ್ರಚಾರ ಮಾಡಲು ನನಗೆ ಅವಕಾಶ ನೀಡಿರಲಿಲ್ಲ. ನನಗೆ ಕೆನಡಾಗೆ ಪ್ರವೇಶ ನೀಡಲು ನಿರಾಕರಿಸಿದ್ದರು. ಹೀಗಾಗಿ ನಾನು ಅವರನ್ನು ಭೇಟಿ ಮಾಡುವುದಿಲ್ಲ. ನನ್ನ ಬದಲಿಗೆ ಸಂಪುಟ ಸಹೊದ್ಯೋಗಿಗಳು ಅವರ ಭೇಟಿಯ ಶಿಷ್ಟಾಚಾರ ಪಾಲಿಸಲಿದ್ದಾರೆ ’ ಎಂದು ಅಮರಿಂದರ್ ತಿಳಿಸಿದ್ದಾರೆ.

ಹೇಳಿಕೇಳಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ವ್ಯಕ್ತಿ. ದೇಶ ಒಡೆಯುವ ಮಾತನ್ನು ಒಬ್ಬ ನಿಜಯೋಧ ಹೇಗೆ ತಾನೇ ಒಪ್ಪಿಯಾನು?

ಕೆನಡಾ ಪ್ರಧಾನಿ ಜಸ್ಟೀನ್ ಟೂಡರ್ ಅವರನ್ನು ಜಗತ್ತು ಹಲವು ಉದಾರವಾದಿ ಕಾರಮಗಳಿಗಾಗಿ ಹೊಗಳುತ್ತದೆ. ವಲಸಿಗರಿಗೆ ಜಾಗವಿಲ್ಲ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳುತ್ತಿರುವಾಗ, ಎಲ್ಲರಿಗೂ ಸ್ವಾಗತ ಎಂಬ ಹೇಳಿಕೆ ನೀಡಿದ ಜಸ್ಟಿನ್ ಪ್ರತಿನಾಯಕನಾಗಿ ಮೂಡಿಬಂದರು. ಆದರೆ ಹೀಗೆ ಎಲ್ಲರನ್ನೂ ಸ್ವಾಗತಿಸುವ ಉದಾರವಾದದಲ್ಲಿ ಭಾರತ ವಿರೋಧಿಗಲು ಅಲ್ಲಿ ಸೇರಿಕೊಂಡಿದ್ದಾರೆ. ಕೆನಡಾ ಹೆಚ್ಚಿನ ಸಂಖ್ಯೆಯಲ್ಲಿ ಸಿಖ್ ವಲಸಿಗರನ್ನು ಹೊಂದಿದೆ. ಹಾಗೆಂದೇ ಈ ನೆಲದಲ್ಲಿ ಯಾವತ್ತೋ ಆರಿಹೋದ ಕಾಲಿಸ್ತಾನದ ಬಿಸಿಯನ್ನು ಮತ್ತೆ ಹತ್ತಿಸುವ ವಿಫಲ ಪ್ರಯತ್ನಗಳು ಆ ನೆಲದಲ್ಲಿ ಆಗುತ್ತ ಬಂದಿವೆ. ಇತ್ತೀಚೆಗೆ ಕೆನಡಾದ ಕಾಲಿಸ್ತಾನಿ ಬೆಂಬಲಿಗರೆಲ್ಲ ಕಾಶ್ಮೀರದ ಪ್ರತ್ಯೇಕತಾವಾದಕ್ಕೆ ಬೆಂಬಲ ಸೂಚಿಸುವ ಹುಚ್ಚಾಟವನ್ನೂ ಪ್ರದರ್ಶಿಸಿದ್ದಾರೆ.

ಈ ಎಲ್ಲ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಅವರ ನಿಲುವು ಪ್ರಶಂಸಾರ್ಹ.

ಮತ್ತೊಂದೆಡೆ ಅಮರಿಂದರ್ ಸಿಂಗ್ ಅವರ ಹೇಳಿಕೆಗೆ ಕೆನಡಾ ಬೇಸರ ವ್ಯಕ್ತಪಡಿಸಿದ್ದು, ಹರ್ಜಿತ್ ಅವರನ್ನು ಪ್ರತ್ಯೇಕತವಾದಿಗಳು ಎಂದು ಹೇಳಿರುವುದು ಸರಿಯಲ್ಲ. ಅಷ್ಟೇ ಅಲ್ಲದೆ ಅಮರಿಂದರ್ ಸಿಂಗ್ ಅವರು ಹರ್ಜಿತ್ ಅವರನ್ನು ಭೇಟಿ ಮಾಡದಿರುವ ನಿರ್ಧಾರವೂ ನಿರಾಶಾದಾಯಕವಾಗಿದೆ ಎಂದು ತಿಳಿಸಿದೆ.

Leave a Reply