ದೆಹಲಿಯಲ್ಲಿ ಆಪ್ಗೆ ನೀಡಿದ ಮರ್ಮಾಘಾತ- ಉತ್ತರದ ವಿಜಯಗಳಲ್ಲಿ ಬಿಜೆಪಿ ಸಂಭ್ರಮ, ಸುಲಭದ ತುತ್ತಲ್ಲ ತಾನು ಎಂದಿದೆ ದಕ್ಷಿಣ!

ಡಿಜಿಟಲ್ ಕನ್ನಡ ಟೀಮ್:

ಉಳಿದೆಲ್ಲ ಕಡೆ ಓಕೆ, ಆದರೆ ಕೇಂದ್ರದಲ್ಲಿ ಆಡಳಿತ ಶಕ್ತಿ ಗಳಿಸಿಕೊಂಡಿರುವ ಬಿಜೆಪಿಗೆ ಮೋದಿ ವರ್ಚಸ್ಸನ್ನೇ ಮುಖ್ಯವಾಗಿಟ್ಟುಕೊಂಡು ದಕ್ಷಿಣ ಭಾರತವನ್ನು ಇಡಿ ಇಡಿ ಗೆಲ್ಲುವುದು ಸುಲಭದಲ್ಲಿಲ್ಲ- ದೇಶಾದ್ಯಂತ ಬೇರೆ ಬೇರೆ ಕಡೆಗಳಲ್ಲಿ ನಡೆದ ಉಪಚುನಾವಣೆಗಳ ಫಲಿತಾಂಶವನ್ನು ಹೀಗೂ ಓದಿಕೊಳ್ಳಬಹುದೇನೋ.

ಹೀಗೆ ಹೇಳುತ್ತಲೇ ಉಪಚುನಾವಣೆ ಎಂಬ ಸಣ್ಣ ಕದನದಲ್ಲಿ ಅದು ಮುಖ್ಯವಾಗಿ ಹಣಿದಿರುವ ಎದುರಾಳಿ ಯಾರು ಎಂಬ ಪ್ರಶ್ನೆ ಹಾಕಿಕೊಂಡರೆ ಅದಕ್ಕುತ್ತರ ಆಪ್. ರಜೌರಿ ಗಾರ್ಡನ್ ಉಪಚುನಾವಣೆಯಲ್ಲಿ ಬಿಜೆಪಿ ವಿಜಯ ಸಾಧಿಸಿದ್ದರೆ, ಈ ಹಿಂದೆ ಆಸ್ಥಾನವನ್ನು ಹೊಂದಿದ್ದ ಆಮ್ ಆದ್ಮಿ ಪಕ್ಷ ಠೇವಣಿ ಕಳೆದುಕೊಂಡಿದೆ ಎಂಬುದು ಬಿಜೆಪಿ ಸಂಭ್ರಮಿಸುತ್ತಿರುವ ಬಹುಮುಖ್ಯ ಅಂಶ. ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅಲ್ಲಿನ ಆಪ್ ಶಾಸಕ ಜರ್ನೈಲ್ ಸಿಂಗ್ ತಮ್ಮ ಸ್ಥಾನ ತೆರವುಗೊಳಿಸಿದ್ದರು. ದೆಹಲಿಯ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲಿರುವ ಹೊಸ್ತಿಲಿನಲ್ಲೇ ಈ ಫಲಿತಾಂಶ ಬಂದಿರುವುದು ಬಿಜೆಪಿಗೆ ಭಾರಿ ಬಲ ತಂದುಕೊಟ್ಟಿರುವ ವಿದ್ಯಮಾನ. ಪ್ರತಿಪಕ್ಷವಾಗಿ ಕಾಂಗ್ರೆಸ್ ದುರ್ಬಲವಾಗುತ್ತಿರುವ ಹೊತ್ತಿನಲ್ಲಿ, ಒಂದು ಹಂತದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಅರವಿಂದ ಕೇಜ್ರಿವಾಲರೇ ಮೋದಿಗೆ ಪ್ರತಿಸ್ಪರ್ಧಿ ಎಂದು ಬಿಂಬಿಸುವ ಹಂತಕ್ಕೆ ಹೋಗಿತ್ತು. ಹೀಗಾಗಿ ಆಪ್ ಅನುಭವಿಸುವ ಎಲ್ಲ ಹಿನ್ನಡೆಗಳು ಬಿಜೆಪಿ ಪಾಲಿಗೆ ಹಬ್ಬವೇ.

ಮಧ್ಯಪ್ರದೇಶದ ಬಂದ್ವಾಘಡ ಕ್ಷೇತ್ರವನ್ನು ಬಿಜೆಪಿಯ ಶಿವನಾರಾಯಣ ಸಿಂಗ್ ಗೆದ್ದಿದ್ದಾರೆ. ಅಸ್ಸಾಮಿನ ಧೆಮಾಜಿ ಹಾಗೂ ಹಿಮಾಚಲ ಪ್ರದೇಶದ ಭೊರಂಜ್, ರಾಜಸ್ಥಾನದ ಧೋಲ್ಪುರ  ಕ್ಷೇತ್ರಗಳೂ ಬಿಜೆಪಿ ಪಾಲಾಗಿವೆ.

ಪಶ್ಚಿಮ ಬಂಗಾಳದಲ್ಲಿ ತೃಣಮೂಲದ ಶಾಸಕರೊಬ್ಬರು ಲೋಕಸಭೆಗೆ ಆಯ್ಕೆಯಾಗಿದ್ದರಿಂದ ತೆರವಾದ ಪೂರ್ವ ಮಿಡ್ನಾಪುರ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಆ ಸ್ಥಾನವನ್ನು 40 ಸಾವಿರ ಮತಗಳ ಅಂತರದಿಂದ ಪುನಃ ಗೆದ್ದುಕೊಳ್ಳುವಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಯಶಸ್ವಿಯಾಗಿದೆ. ಭಾರಿ ಅಂತರವೇ ಇದ್ದರೂ ಎರಡನೇ ಸ್ಥಾನದಲ್ಲಿ ಬಿಜೆಪಿ ಇದ್ದಿರುವುದು ಇಲ್ಲಿ ಗಮನಿಸಬೇಕಾದ ಸಂಗತಿಯೇ ಆಗಿದೆ.

ಇನ್ನು ಜಾರ್ಖಂಡದ ಲಿಟ್ಟಿಪಾರಾ ಕ್ಷೇತ್ರವನ್ನು ಜಾರ್ಖಂಡ್ ಮುಕ್ತಿ ಮೋರ್ಚಾ ಗೆಲ್ಲುವುದು ಹೆಚ್ಚು-ಕಡಿಮೆ ಪಕ್ಕಾ ಆಗಿದೆ.

Leave a Reply