ಈಡನ್ ಗಾರ್ಡನ್ ನಲ್ಲಿ ಗೆಲುವಿನ ಹಾದಿಗೆ ಮರಳಿದ ಕೆಕೆಆರ್! ನಿಮಗೆ ಗೊತ್ತೆ ಈ ಪಂದ್ಯದ ವಿಶೇಷ ಅಂಕಿ ಅಂಶಗಳು?

ಡಿಜಿಟಲ್ ಕನ್ನಡ ಟೀಮ್:

ಪಂದ್ಯದ ಪ್ರತಿ ಹಂತದಲ್ಲೂ ತನ್ನ ತಂತ್ರಗಾರಿಕೆಯನ್ನು ಪರಿಣಾಮಕಾರಿಯಾಗಿ ಪ್ರಯೋಗಿಸುವಲ್ಲಿ ಯಶಸ್ವಿಯಾದ ಕೋಲ್ಕತಾ ನೈಟ್ ರೈಡರ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಸುಲಭ ಗೆಲುವು ತನ್ನದಾಗಿಸಿಕೊಂಡಿದೆ. ಅದರೊಂದಿಗೆ ಮತ್ತೆ ಜಯದ ಹಾದಿಗೆ ಮರಳಿದೆ.

ಕೆಕೆಆರ್ ತಂಡ ಕಿಂಗ್ಸ್ ಇಲೆವೆನ್ ವಿರುದ್ಧವೇ ಜಯ ಸಾಧಿಸಿದ ಸತತ 8ನೇ ಪಂದ್ಯ ಇದಾಗಿದೆ. ಈ ಪಂದ್ಯದಲ್ಲಿ ಗಂಭೀರ್ ಗಳಿಸಿದ ಅರ್ಧಶತಕ ಐಪಿಎಲ್ ನಲ್ಲಿ 33ನೇಯದಾಗಿದ್ದು, ಡೇವಿಡ್ ವಾರ್ನರ್ ಜತೆಗೆ ಅಗ್ರಸ್ಥಾನದಲ್ಲಿದ್ದಾರೆ. ಅಲ್ಲದೆ ನಾಯಕನಾಗಿಯೇ 28ನೇ ಅರ್ಧಶತಕ ದಾಖಲಿಸಿದ್ದಾರೆ. ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆಲ್ಲುವ ಪಂದ್ಯವನ್ನು ಸೋತಿದ್ದ ಕೆಕೆಆರ್ ಈ ಜಯದೊಂದಿಗೆ ಮತ್ತೆ ತನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ತವರಿನ ಅಂಗಳ ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ನಿರೀಕ್ಷೆಯಂತೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ತಂಡ ಉತ್ತಮ ಆರಂಭದ ಹೊರತಾಗಿ ಮಧ್ಯಮ ಕ್ರಮಾಂಕದ ಆಟಗಾರರು ನಿರೀಕ್ಷಿತ ಕಾಣಿಕೆ ನೀಡದ ಪರಿಣಾಮ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 170 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಈ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ಕೇವಲ 16.3 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 171 ರನ್ ದಾಖಲಿಸಿ ಜಯ ಪಡೆಯಿತು.

ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಹಶೀಂ ಆಮ್ಲಾ (25 ರನ್, 27 ಎಸೆತ), ವೊಹ್ರಾ (28 ರನ್, 19 ಎಸೆತ) ಅವರಿಂದ 5 ಓವರ್ ಗಳಲ್ಲಿ 53 ರನ್ ಗಳಿಸಿ ಉತ್ತಮ ಆರಂಭ ನೀಡಿತು. ಈ ಹಂತದಲ್ಲಿ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಪಂಜಾಬ್ 200 ರ ಗಡಿ ಸಮೀಪ ಸಾಗುವ ನಿರೀಕ್ಷೆ ಇತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಮ್ಯಾಕ್ಸ್ ವೆಲ್ (25) ಮಿಲ್ಲರ್ (28), ಸಾಹ (25) ಉತ್ತಮ ಆರಂಭ ಪಡೆದರಾದರೂ ತಂಡದ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಪರಿಣಾಮ ತಂಡ ಸುಮಾರು 30 ರನ್ ಗಳ ಕೊರತೆ ಎದುರಿಸಿತು.

ಮತ್ತೊಂದೆಡೆ ಕೆಕೆಆರ್ ತಂಡ ಬ್ಯಾಟಿಂಗ್ ಇಳಿಯುವಾಗ ಎಲ್ಲರಿಗೂ ಅಚ್ಚರಿ ನೀಡಿತು. ಕಾರಣ ನಾಯಕ ಗೌತಮ್ ಗಂಭೀರ್ ಜತೆಗೆ ಸುನೀಲ್ ನಾರಾಯಣ್ ಇನಿಂಗ್ಸ್ ಆರಂಭಿಸಿದರು. ಆರಂಭಿಕ ಕ್ರಿಸ್ ಲಿನ್ ಗಾಯಾಳುವಾಗಿ ತಂಡದಿಂದ ಹೊರಗುಳಿದ ಹಿನ್ನೆಲೆಯಲ್ಲಿ ಈ ಪಂದ್ಯದಲ್ಲಿ ಗಂಭೀರ್ ಜತೆಗೆ ರಾಬಿನ್ ಉತ್ತಪ್ಪ ಇನಿಂಗ್ಸ್ ಆರಂಭಿಸುವ ನಿರೀಕ್ಷೆ ಇತ್ತು. ಆದರೆ, ಸುನೀಲ್ ನಾರಾಯಣ್ ಕಣಕ್ಕಿಳಿದರು. ಕೆಕೆಆರ್ ನ ಈ ಪ್ರಯೋಗ ದೊಡ್ಡ ಪರಿಣಾಮ ಬೀರಿತು. ಸ್ಫೋಟಕ ಬ್ಯಾಟಿಂಗ್ ಮಾಡಿದ ನಾರಾಯಣ್ (37 ರನ್, 18 ಎಸೆತ) ಗಂಭೀರ್ (ಅಜೇಯ 72 ರನ್, 49 ಎಸೆತ) ಜತೆಗೂಡಿ 5.4 ಓವರ್ ಗಳಲ್ಲಿ ಮೊದಲ ವಿಕೆಟ್ ಗೆ 76 ರನ್ ಗಳ ಭರ್ಜರಿ ಆರಂಭ ನೀಡಿದರು. ಈ ಹಂತದಲ್ಲೇ ಪಂದ್ಯ ಪಂಜಾಬ್ ತಂಡದಿಂದ ಕೈನಿಂದ ಜಾರಿತ್ತು. ನಂತರ ಬಂದ ಉತ್ತಪ್ಪ ಹಾಗೂ ಮನೀಶ್ ಪಾಂಡೆ ಗಂಭೀರ್ ಗೆ ಸಾಥ್ ನೀಡಿ ತಂಡ ಗೆಲುವಿನ ದಡ ಸೇರಿಕೊಳ್ಳುವಂತೆ ನೋಡಿಕೊಂಡರು.

ಪಂದ್ಯದಲ್ಲಿ ಆಲ್ರೌಂಡರ್ ಪ್ರದರ್ಶನ ನೀಡಿದ ನಾರಾಯಣ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Leave a Reply