ತವರಿನ ಅಖಾಡದಲ್ಲಿ ಹಾಲಿ ಚಾಂಪಿಯನ್ನರಿಗೆ ಸೋಲಿನ ರುಚಿ ತೋರಿಸಿದ ಮುಂಬೈ ಇಂಡಿಯನ್ಸ್

ಡಿಜಿಟಲ್ ಕನ್ನಡ ಟೀಮ್:

ತವರಿನ ಅಂಗಣ, ಅಭಿಮಾನಿಗಳ ಬೆಂಬಲ, ನಿರೀಕ್ಷೆಯಂತೆ ಟಾಸ್ ಜಯ, ಪಿಚ್ ವರ್ತನೆಗೆ ಅನುಗುಣವಾಗಿ ಮೊದಲು ಫೀಲ್ಡಿಂಗ್ ನಿರ್ಧಾರ, ಶಿಸ್ತುಬದ್ಧ ಬೌಲಿಂಗ್ ದಾಳಿ, ಸಂಘಟಿತ ಬ್ಯಾಟಿಂಗ್ ಪ್ರದರ್ಶನ… ಹೀಗೆ ಪಂದ್ಯದ ಪ್ರತಿ ಹಂತದಲ್ಲೂ ಮೇಲುಗೈ ಸಾಧಿಸಿದ ಮುಂಬೈ ಇಂಡಿಯನ್ಸ್, ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಮೊದಲ ಸೋಲಿನ ರುಚಿ ತೋರಿಸಿದೆ.

ಈ ಆವೃತ್ತಿಯಲ್ಲಿ ಆಡಿದ ಎರಡೂ ಪಂದ್ಯಗಳಲ್ಲೂ ಗೆದ್ದು ಅಜೇಯವಾಗಿದ್ದ ಹಾಲಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ತಂಡ ಒಂದೆಡೆಯಾದ್ರೆ. ಮತ್ತೊಂದೆಡೆ ಯುವ ಆಟಗಾರರ ಅತ್ಯುತ್ತಮ ಕೊಡುಗೆಯಿಂದ ಮಿಂಚಿನ ಪ್ರದರ್ಶನ ನೀಡುತ್ತಾ ತವರಿನ ಅಂಗಣದಲ್ಲಿ ಪ್ರಬಲ ತಂಡವಾಗಿ ಬಿಂಬಿತವಾಗಿರುವ ಮುಂಬೈ ಇಂಡಿಯನ್ಸ್. ಹೀಗಾಗಿ ಬುಧವಾರ ಈ ಎರಡು ತಂಡಗಳ ನಡುವಣ ಕಾದಾಟ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ವಾಂಖೆಡೆ ಕ್ರೀಡಾಂಗಣದಲ್ಲಿ ಚೇಸಿಂಗ್ ಮಾಡಿದ್ದ ತಂಡವೇ ಹೆಚ್ಚು ಗೆದ್ದಿರುವ ಹಿನ್ನೆಲೆಯಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್, ಮುಂಬೈ ಬೌಲರ್ ಗಳ ಶಿಸ್ತುಬದ್ಧ ಬೌಲಿಂಗ್ ನಿಂದಾಗಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಈ ಮೊತ್ತ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 18.4 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 159 ರನ್ ಪೇರಿಸಿತು. ಆ ಮೂಲಕ 4 ವಿಕೆಟ್ ಅಂತರದ ಜಯ ತನ್ನದಾಗಿಸಿಕೊಂಡಿತು.

ಉಭಯ ತಂಡಗಳು ಬಲಿಷ್ಠ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗವನ್ನು ಹೊಂದಿದ್ದರಿಂದ ಈ ಪಂದ್ಯ ಸಮಬಲರ ಕಾದಾಟವಾಗಿ ನಿರೀಕ್ಷೆ ಮೂಡಿಸಿತ್ತು. ಆರಂಭದಿಂದಲೇ ಸನ್ ರೈಸರ್ಸ್ ತಂಡಕ್ಕೆ ಸುಲಭವಾಗಿ ರನ್ ನೀಡದ ಮುಂಬೈ ಬೌಲರ್ ಗಳು ಹಂತ ಹಂತವಾಗಿ ಒತ್ತಡ ಹಾಕುವಲ್ಲಿ ಯಶಸ್ವಿಯಾದರು. ಪರಿಣಾಮ ಶಿಖರ್ ಧವನ್ (48 ರನ್, 43 ಎಸೆತ) ಹಾಗೂ ಡೇವಿಡ್ ವಾರ್ನರ್ (49 ರನ್, 34 ಎಸೆತ) ಅವರ ಅತ್ಯುತ್ತಮ ಆರಂಭದ ಹೊರತಾಗಿಯು ತಂಡ ಕಲೆಹಾಕಿದ್ದು ಸಾಧಾರಣ 158 ರನ್ ಮಾತ್ರ. ಮುಂಬೈ ಪರ ಮಿಂಚಿದ ಬುಮ್ರಾ ಇನಿಂಗ್ಸ್ ನ ಅಂತಿಮ ಘಟ್ಟದಲ್ಲಿ 3 ವಿಕೆಟ್ ಪಡೆದು ಹೈದರಾಬಾದ್ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಉಳಿದಂತೆ ಹರ್ಭಜನ್ 2, ಮಾಲಿಂಗ, ಮೆಕ್ಲನಗನ್ ಹಾಗೂ ಹಾರ್ದಿಕ್ ತಲಾ 1 ವಿಕೆಟ್ ಪಡೆದರು.

ಹೈದರಾಬಾದ್ ನೀಡಿದ್ದ ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೆ ಮತ್ತೆ ನೆರವಾಗಿದ್ದು ಯುವ ಆಟಗಾರರಾದ ನಿತೀಶ್ ರಾಣಾ (45 ರನ್, 36 ಎಸೆತ) ಹಾಗೂ ಕುನಾಲ್ ಪಾಂಡ್ಯ (37 ರನ್, 20 ಎಸೆತ). ಆರಂಭಿಕ ಪಾರ್ಥೀವ್ ಪಟೇಲ್ (38 ರನ್) ಹೊರತಾಗಿ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಗಳಾದ ಬಟ್ಲರ್, ರೋಹಿತ್ ಶರ್ಮಾ, ಪೊಲಾರ್ಡ್ ನಿರಾಸೆ ಮೂಡಿಸಿದ್ರು. ಈ ಹಂತದಲ್ಲಿ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತ ಹಾರ್ದಿಕ್ ಹಾಗೂ ರಾಣಾ ತಂಡದ ರನ್ ವೇಗ ಹೆಚ್ಚಿಸಿ ಗೆಲುವಿನ ಹಾದಿ ಸುಗಮಗೊಳಿಸಿದರು. ಸನ್ ರೈಸರ್ ಹೈದರಾಬಾದ್ ಪರ ಭುವನೇಶ್ವರ್ 3, ರಶೀದ್ ಖಾನ್, ನೆಹ್ರಾ ಹಾಗೂ ಹೂಡಾ ತಲಾ 1 ವಿಕೆಟ್ ಪಡೆದರು.

ಮುಂಬೈ ತಂಡದ ಪರ ಮಿಂಚಿನ ದಾಳಿ ನಡೆಸಿದ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Leave a Reply